ADVERTISEMENT

ಚಾಲಕನ ಮೇಲೆ ಪೊಲೀಸ್ ಹಲ್ಲೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ಬೆಂಗಳೂರು: ಪೊಲೀಸ್ `ಚೀತಾ~ (ಬೈಕ್) ವಾಹನಕ್ಕೆ ಆಟೊ ಗುದ್ದಿಸಿದ ಚಾಲಕನ ಮೇಲೆ ಕಾನ್‌ಸ್ಟೇಬಲ್ ಒಬ್ಬರು ಹಲ್ಲೆ ನಡೆಸಿದ್ದರಿಂದ ಆಕ್ರೋಶಗೊಂಡ ಆಟೊ ಚಾಲಕರು ಸಿಟಿ ಮಾರುಕಟ್ಟೆ ಮೇಲು ಸೇತುವೆಯ ಕೆಳ ಭಾಗದ ಮೈಸೂರು ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು.

ಆಟೊ ಚಾಲಕ ಸಾದಿಕ್ ಎಂಬುವರ ತಲೆಗೆ ವಾಕಿ ಟಾಕಿಯಿಂದ ಹೊಡೆದ ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಗುಣಗಾರ್ ಅವರನ್ನು ಸೇವೆಯಿಂದ ಅಮಾನತುಪಡಿಸಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಮೈಸೂರು ರಸ್ತೆಯಲ್ಲಿ 30 ನಿಮಿಷಕ್ಕೂ ಹೆಚ್ಚು ಕಾಲ ರಸ್ತೆ ತಡೆ ಮಾಡಿದರು. ಅಲ್ಲದೇ ಗಾಯಾಳು ಸಾದಿಕ್ ಅವರನ್ನು ರಸ್ತೆಯಲ್ಲಿ ಮಲಗಿಸಿ ಪ್ರತಿಭಟನೆ ನಡೆಸಿದ್ದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡಿದರು.

ಮೈಸೂರು ರಸ್ತೆಯ ಗಣೇಶ ದೇವಸ್ಥಾನದ ಬಳಿ ಬೈಕ್ ಸವಾರರೊಬ್ಬರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದರು. ಆ ಅಪಘಾತ ಸಂಭವಿಸಿದ್ದ ಸ್ಥಳದಲ್ಲಿ ಸಾಕಷ್ಟು ಜನರು ಗುಂಪುಗೂಡಿದ್ದರಿಂದ ವಾಹನಗಳ ಸಂಚಾರಕ್ಕೆ ಸ್ಥಳಾವಕಾಶವಿಲ್ಲದಂತಾಗಿ ವಾಹನ ದಟ್ಟಣೆ ಹೆಚ್ಚಿತು. ವಿಷಯ ತಿಳಿದು ಸ್ಥಳಕ್ಕೆ ಬಂದ ಕಾನ್‌ಸ್ಟೇಬಲ್ ಗುಣಗಾರ್ ಅವರು ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಜನರ ಗುಂಪನ್ನು ಚದುರಿಸುತ್ತಿದ್ದರು.

 ಅದೇ ವೇಳೆಗೆ ಆಟೊದಲ್ಲಿ ಬಂದ ಸಾದಿಕ್, ಗುಣಗಾರ್ ಅವರ ಬೈಕ್‌ಗೆ ವಾಹನ ಗುದ್ದಿಸಿದರು. ಇದರಿಂದ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು ಗುಣಗಾರ್, ಸಾದಿಕ್ ತಲೆಗೆ ವಾಕಿ ಟಾಕಿಯಿಂದ ಹೊಡೆದರು. ಪರಿಣಾಮ ಅವರ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಯಿತು.

ಕಾನ್‌ಸ್ಟೇಬಲ್ ವರ್ತನೆಯಿಂದ ಕೋಪಗೊಂಡ ಆಟೊ ಚಾಲಕರು ಪ್ರತಿಭಟನೆ ಮಾಡಿದರು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಗಾಯಾಳು ಸಾದಿಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ ಅವರು ಯಾವುದೇ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT