ADVERTISEMENT

ಚಿಲ್ಲರೆ ನೀಡೋದಾಗಿ ಲಕ್ಷ ಲೂಟಿ!

ಮಠದ ಹೆಸರಿನಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2016, 19:30 IST
Last Updated 17 ಜನವರಿ 2016, 19:30 IST
ಪ್ರವೀಣ್
ಪ್ರವೀಣ್   

ಬೆಂಗಳೂರು: ಉತ್ತರಾದಿಮಠದ ವ್ಯವಸ್ಥಾಪಕನ ಸೋಗಿನಲ್ಲಿ ಹೋಟೆಲ್ ಉದ್ಯಮಿಗಳು ಹಾಗೂ ವ್ಯಾಪಾರಿಗಳಿಗೆ ಕಮಿಷನ್ ಇಲ್ಲದೆ ಚಿಲ್ಲರೆ ಕೊಡುವುದಾಗಿ ನಂಬಿಸಿ, ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಪ್ರವೀಣ್ ಅಲಿಯಾಸ್ ರಾಘವೇಂದ್ರ ಭಟ್ (28) ಎಂಬಾತ ಶಂಕರಪುರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

‘ಮೂಲತಃ ಭದ್ರಾವತಿಯ ಪ್ರವೀಣ್, ಒಂದೂವರೆ ತಿಂಗಳಲ್ಲಿ  ₹ 6.7 ಲಕ್ಷ ವಂಚನೆ ಮಾಡಿದ್ದ. ಆರೋಪಿಯು ಆ ಹಣದಲ್ಲಿ ಖರೀದಿಸಿದ್ದ ₹3.5 ಲಕ್ಷ ಮೌಲ್ಯದ ಚಿನ್ನ  ಹಾಗೂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈತನ ಬಂಧನದಿಂದ ಐದು ಪ್ರಕರಣಗಳು ಬೆಳಕಿಗೆ ಬಂದಿವೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್‌ಕುಮಾರ್ ತಿಳಿಸಿದ್ದಾರೆ.

ವೃದ್ಧೆಯೊಬ್ಬರಿಗೆ ಪಿಂಚಣಿ ಕೊಡಿಸುವುದಾಗಿ ನಂಬಿಸಿ, ಚಿನ್ನದ ಸರ ಹಾಗೂ ಬಳೆಗಳನ್ನು ದೋಚಿದ್ದ ಪ್ರಕರಣದಲ್ಲಿ ಉಪ್ಪಾರಪೇಟೆ ಪೊಲೀಸರು ಪ್ರವೀಣನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಕಳೆದ ನವೆಂಬರ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ, ಮೆಜೆಸ್ಟಿಕ್‌ನ ‘ಸಂಗಮ್ ಪ್ಯಾರಡೈಸ್’ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿ ಮತ್ತೆ ವಂಚಕ ಕೃತ್ಯ ಶುರು ಮಾಡಿದ್ದ.

ವೇಷಧಾರಿ: ಗಡ್ಡ ಬಿಟ್ಟು, ಹಣೆಗೆ ಗಂಧದ ಬೊಟ್ಟಿಟ್ಟು, ಖಾದಿ ಬಟ್ಟೆ ತೊಟ್ಟು ಮಠದ ಭಕ್ತನಂತೆ ವೇಷ ಬದಲಿಸಿಕೊಂಡ ಪ್ರವೀಣ್, ಡಿಸೆಂಬರ್‌ನಲ್ಲಿ ಅವೆನ್ಯೂ ರಸ್ತೆಯ  ಕಾಮತ್ ಹೋಟೆಲ್‌ಗೆ ಹೋಗಿದ್ದ. ಅಲ್ಲಿ ತನ್ನನ್ನು ಶಂಕರಪುರದ ಉತ್ತಾರದಿಮಠದ ವ್ಯವಸ್ಥಾಪಕ ಎಂದು ಕ್ಯಾಷಿಯರ್‌ಗೆ ಪರಿಚಯಿಸಿಕೊಂಡಿದ್ದ.
‘ಮಠಕ್ಕೆ ಸಾಕಷ್ಟು ಚಿಲ್ಲರೆ ನಾಣ್ಯಗಳು ಬರುತ್ತವೆ. ಅವುಗಳನ್ನು ಸಂಗ್ರಹಿಸಿಡಲು ಜಾಗವೂ ಇಲ್ಲ. ಹೋಟೆಲ್‌ಗೆ ಬರುವ ಗ್ರಾಹಕರಿಗೆ ಕೊಡಲು ನಿಮಗೂ ಚಿಲ್ಲರೆಯ ಅವಶ್ಯಕತೆ ಇರುತ್ತದೆ. ಬೇಕಿದ್ದರೆ ಯಾವುದೇ ಕಮಿಷನ್ ಪಡೆಯದೆ ನೀವು ಕೊಡುವ ನೋಟುಗಳಷ್ಟೇ ಮೌಲ್ಯದ ಚಿಲ್ಲರೆ ಕೊಡುತ್ತೇವೆ’ ಎಂದು ಕ್ಯಾಷಿಯರ್‌ನನ್ನು ನಂಬಿಸಿದ್ದ.

ಹೀಗೆಯೇ ಸತತ ಮೂರು ದಿನ ಆ  ಹೋಟೆಲ್‌ಗೆ ಹೋಗಿ ಚಿಲ್ಲರೆ ವಿಷಯ ಪ್ರಸ್ತಾಪಿಸಿದ್ದ. ಆದರೆ, ಕ್ಯಾಷಿಯರ್ ಹಾಗೂ ಹೋಟೆಲ್ ಮಾಲೀಕರು ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

ಆ ನಂತರ ಆರೋಪಿ, ‘ಮಠದಲ್ಲಿ ತುಲಾಭಾರ ನಡೆಯುತ್ತಿದೆ. ಸಾಕಷ್ಟು ನಾಣ್ಯಗಳಿವೆ. ಕೂಡಲೇ ಬಂದರೆ ಕೊಡುತ್ತೇನೆ. ವಿಳಂಬವಾದರೆ ಬೇರೆಯವರಿಗೆ ನೀಡುತ್ತೇನೆ’ ಎಂದು ಹೇಳಿದ್ದ. ಇದನ್ನು ನಂಬಿದ ಹೋಟೆಲ್ ಮಾಲೀಕರು, ತಮ್ಮದೆ ಕಾರಿನಲ್ಲಿ ಪ್ರವೀಣ್‌ನನ್ನು ಕೂರಿಸಿಕೊಂಡು ಮಠಕ್ಕೆ ಹೋಗಿದ್ದರು.

ಕೈ ಮುಗಿಸಿ, ಕಾಲ್ಕಿತ್ತ: ಮಠದ ಒಳಗೆ ಹೋಗುತ್ತಿದ್ದಂತೆಯೇ ಹೋಟೆಲ್‌ ಮಾಲೀಕರನ್ನು ಪ್ರಾಂಗಣದಲ್ಲಿ ಕೂರಿಸಿದ ಆರೋಪಿ, ತಾನು ವ್ಯವಸ್ಥಾಪಕನೆಂದು ಅವರಿಗೆ ನಂಬಿಸಲು ಮಠದ ಇತರೆ ಸಿಬ್ಬಂದಿ ಜತೆ ಕೆಲ ಹೊತ್ತು ಮಾತನಾಡಿದ್ದ. ನಂತರ ಮಾಲೀಕರನ್ನು ಕರೆದುಕೊಂಡು ಹೋಗಿ ದೇವರ ಮೂರ್ತಿಗೆ ಕೈ ಮುಗಿಸಿದ್ದ. ಬಳಿಕ ‘ಇಲ್ಲೇ ಇರಿ. ಚಿಲ್ಲರೆ ತೆಗೆದುಕೊಂಡು ಬರುತ್ತೇನೆ’ ಎಂದು ಮಾಲೀಕರು ತಂದಿದ್ದ ₹ 1.30ಲಕ್ಷ ಹಣವಿದ್ದ ಬ್ಯಾಗ್ ಪಡೆದ ವಂಚಕ, ಮಠದ ಹಿಂಬಾಗಿಲ ಮೂಲಕ ಕಾಲ್ಕಿತ್ತಿದ್ದ.

ಅರ್ಧ ಗಂಟೆ ಕಳೆದರೂ ಪ್ರವೀಣ್ ವಾಪಸಾಗದಿದ್ದಾಗ ಅನುಮಾನಗೊಂಡ ಹೋಟೆಲ್ ಮಾಲೀಕರು, ಮಠದ ಸಿಬ್ಬಂದಿ ಹಾಗೂ ಭಕ್ತರನ್ನು ವಿಚಾರಿಸಿದಾಗ ಸತ್ಯ ಬಯಲಾಗಿತ್ತು.

ಇದೇ ಕಾಯಕ: ಆರೋಪಿಯು ಚಿಲ್ಲರೆ ಕೊಡುವುದಾಗಿ ರಾಮಕೃಷ್ಣ ಆಶ್ರಮ ವೃತ್ತದಲ್ಲಿರುವ ‘ಎಸ್‌ಎಲ್‌ವಿ ದರ್ಶಿನಿ’ ಹೋಟೆಲ್‌ಗೆ ₹ 40 ಸಾವಿರ, ಗಾಂಧಿಬಜಾರ್‌ನ ‘ಹೋಳಿಗೆ ಮನೆ’ ಮಾಲೀಕರಿಗೆ ₹ 2 ಲಕ್ಷ ಪಂಗನಾಮ ಹಾಕಿದ್ದ. ಈ ಮೂರೂ ಪ್ರಕರಣಗಳು ಶಂಕರಪುರ ಠಾಣೆಯಲ್ಲಿ ದಾಖಲಾಗಿದ್ದವು.

ಹುಂಡಿಕಳ್ಳ: ಆರೋಪಿಯು ಈ ಹಿಂದೆ ಬಸವೇಶ್ವರ ನಗರ ಹಾಗೂ ಮಲ್ಲೇಶ್ವರದ ದೇವಸ್ಥಾನ ಗಳಿಗೆ ನುಗ್ಗಿ ಹುಂಡಿ, ದೇವರ ಒಡವೆ ಗಳನ್ನು ದೋಚಿದ್ದ. ಅಲ್ಲದೇ ವಿವಿಧ ಮಠಗಳಲ್ಲಿ ಬೆಳ್ಳಿ ವಸ್ತುಗಳನ್ನು ಕದ್ದಿದ್ದ ಎಂದು  ತನಿಖಾಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.