ADVERTISEMENT

ಜನ ಕೇಂದ್ರಿತ ಅಭಿವೃದ್ಧಿ ಮಾದರಿ ಅಗತ್ಯ: ಮೋಹನ್‌ದಾಸ್‌ ಪೈ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2015, 19:49 IST
Last Updated 29 ಸೆಪ್ಟೆಂಬರ್ 2015, 19:49 IST

ಬೆಂಗಳೂರು:  ‘ನಮ್ಮ ಅಭಿವೃದ್ಧಿಯ ಮಾದರಿ ಜನ ಕೇಂದ್ರಿತವಾಗಬೇಕು’ ಎಂದು ‘ಮಣಿಪಾಲ್‌ ಗ್ಲೋಬಲ್‌ ಎಜು ಕೇಷನ್‌ ಸರ್ವಿಸೆಸ್‌’ ಅಧ್ಯಕ್ಷ ಮೋಹನ್‌ ದಾಸ್‌ ಪೈ ಅಭಿಪ್ರಾಯಪಟ್ಟರು.

‘ಗ್ರಾಸ್‌ರೂಟ್ಸ್‌ ರಿಸರ್ಚ್‌ ಅಂಡ್‌ ಅಡ್ವೊಕೆಸಿ ಮೂಮೆಂಟ್‌’ನಿಂದ ಸೋಮ ವಾರ ನಗರದಲ್ಲಿ ಆಯೋಜಿಸಿದ್ದ ಲೇಖಕ ಡಾ. ಆರ್‌. ಬಾಲಸುಬ್ರಮಣಿಯಂ ಅವರ ‘ಐ, ದಿ ಸಿಟಿಜನ್‌’ ಪುಸ್ತಕ ಬಿಡುಗಡೆ ಗೊಳಿಸಿ ಮಾತನಾಡಿದರು.

‘ಜನಪ್ರತಿನಿಧಿಗಳು ಮತ್ತು ಜನರ ಮಧ್ಯೆ ದಿನದಿಂದ ದಿನಕ್ಕೆ ಅಂತರ ಹೆಚ್ಚಾಗು ತ್ತಿದೆ. ಪ್ರಜಾಪ್ರಭುತ್ವ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದರು.

‘ಸಂಸತ್ತು, ಜನಪ್ರತಿನಿಧಿಗಳು ಇರುವುದು ಜನರ ಕಲ್ಯಾಣಕ್ಕಾಗಿ. ಸಂವಿಧಾನದ ಪ್ರಕಾರ ಜನರು ಪರಮಾಧಿಕಾರ ಹೊಂದಿ ದ್ದಾರೆ. ಆದರೆ ವಾಸ್ತವ ಸ್ಥಿತಿಯೇ ಬೇರೆ ಇದೆ. ಜನಪ್ರತಿನಿಧಿಗಳು ಇಂದು ಆಳುವ ವರ್ಗವಾಗಿ ಬದಲಾದರೆ, ಜನರು ಅವರ  ಸೇವಕರಾಗಿದ್ದಾರೆ’ ಎಂದು ಹೇಳಿದರು.

‘ವಾಸ್ತವದಲ್ಲಿ ಜನರಿಗೆ ಏನು ಬೇಕಾಗಿದೆ ಎಂಬುದನ್ನು ಅರಿತುಕೊಳ್ಳುವ ಪ್ರಯತ್ನ ಜನಪ್ರತಿನಿಧಿಗಳು ಮಾಡುತ್ತಿಲ್ಲ. ಇದ ರಿಂದ ಸರ್ಕಾರ ರೂಪಿಸುತ್ತಿರುವ ಯೋಜನೆಗಳ ಲಾಭ ಅವರಿಗೆ ತಲು ಪುತ್ತಿಲ್ಲ. ಹಾಗಾಗಿ ಜನಪ್ರತಿನಿಧಿಗಳು ಮತ್ತು ಜನರ ಮಧ್ಯೆ ನೇರ ಸಂವಾದ ಏರ್ಪಡಬೇಕು’ ಎಂದು ಸಲಹೆ ಮಾಡಿದರು.

‘ಅಮೆರಿಕದಲ್ಲಿ ಒಬ್ಬ ಸಾಮಾನ್ಯ ಪ್ರಜೆ ಅಲ್ಲಿನ ಅಧ್ಯಕ್ಷರಿಗೆ ಪತ್ರ ಬರೆದರೆ ಅದೇ ದಿನ ಅವರು ಅದಕ್ಕೆ  ಪ್ರತಿಕ್ರಿಯಿಸುತ್ತಾರೆ. ಆದರೆ ನಮ್ಮ ದೇಶದ ಪ್ರಧಾನಿ, ಮುಖ್ಯಮಂತ್ರಿಗೆ ಪತ್ರ ಬರೆದರೆ ಹಲವು ತಿಂಗಳು ಕಳೆದರೂ ಅದಕ್ಕೆ ಪ್ರತಿಕ್ರಿಯಿಸು ವುದಿಲ್ಲ’ ಎಂದು ತಿಳಿಸಿದರು.

ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್‌.ವಿ. ರಂಗನಾಥ್‌ ಮಾತನಾಡಿ, ‘ಹೆಚ್ಚಿನ ಜನಪ್ರತಿನಿಧಿಗಳಿಗೆ ತಮ್ಮನ್ನು ಯಾವ ಕಾರಣಕ್ಕೆ ಆಯ್ಕೆ ಮಾಡಲಾಗಿದೆ ಎನ್ನುವುದೇ ಗೊತ್ತಿಲ್ಲ. ಭ್ರಷ್ಟಾಚಾರ ದಿಂದ ಆಡಳಿತದ ಹಳಿ ತಪ್ಪಿದೆ’ ಎಂದು ತಿಳಿಸಿದರು. ಲೇಖಕ ಡಾ. ಆರ್‌. ಬಾಲಸುಬ್ರಮಣಿಯಂ ಮಾತನಾಡಿ, ‘ಈ ಪುಸ್ತಕ ಭರವಸೆಯ ಪ್ರತೀಕವಾಗಿದೆ. ಪುಸ್ತಕದ ಎಲ್ಲ ಸಂಗತಿಗಳು ನೈಜ ಬದುಕಿನಲ್ಲಿ ನಡೆದಿರುವಂತಹದ್ದು. ಯಾ ವುದೇ ಸಂಗತಿ ಕಾಲ್ಪನಿಕವಲ್ಲ’ ಎಂದರು.

‘ಸಾಮಾನ್ಯ ಜನರು ಮನಸ್ಸು ಮಾಡಿದರೆ ನಮ್ಮ ಸರ್ಕಾರ ಮಾಡದ ಅನೇಕ ಕೆಲಸಗಳನ್ನು ಮಾಡಬಹುದು. ಹಿಂದಿ ಗಿಂತಲೂ ಇಂದು ಜನರ ಜವಾಬ್ದಾರಿ ಹೆಚ್ಚಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.