ADVERTISEMENT

ಟೆಕ್ಕಿ ಕಾಣೆ: ಕೊಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST
ಟೆಕ್ಕಿ ಕಾಣೆ: ಕೊಲೆ ಶಂಕೆ
ಟೆಕ್ಕಿ ಕಾಣೆ: ಕೊಲೆ ಶಂಕೆ   

ಬೆಂಗಳೂರು: ಕೆಲಸಕ್ಕೆ ಹೋಗಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ನಿಗೂಢ ರೀತಿಯಲ್ಲಿ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.ರಾಜಾಜಿನಗರ ನಿವಾಸಿ ಸಂಜೀವ್‌ಕುಮಾರ್ (31) ಎಂಬುವರು ಕಾಣೆಯಾಗಿದ್ದು, ಈ ಸಂಬಂಧ ಅವರ ತಂದೆ ಮಹೇಶಪ್ಪ ಅವರು ಮಹದೇವಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

`ಮಗ ಸಂಜೀವ್‌ಕುಮಾರ್, ವೈಟ್‌ಫೀಲ್ಡ್ ಬಳಿಯ ಸಾಫ್ಟ್‌ವೇರ್ ಕಂಪೆನಿಯ ಉದ್ಯೋಗಿಯಾಗಿದ್ದ. ಜೂ.7ರಂದು ಕೆಲಸಕ್ಕೆ ಹೋಗಿದ್ದ ಆತ ಮನೆಗೆ ವಾಪಸ್ ಬಂದಿಲ್ಲ~ ಎಂದು ಮಹೇಶಪ್ಪ ದೂರಿನಲ್ಲಿ ತಿಳಿಸಿದ್ದಾರೆ. ಸಂಜೀವ್‌ಕುಮಾರ್, ಗುಲ್ಬರ್ಗ ಜಿಲ್ಲೆಯ ವಾಣಿ ಎಂಬುವರನ್ನು 2011ರ ಆಗಸ್ಟ್‌ನಲ್ಲಿ ವಿವಾಹವಾಗಿದ್ದರು. ಬಿ.ಇ ಪದವೀಧರೆಯಾದ ವಾಣಿ ಅವರು ನಗರದ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿದ್ದಾರೆ.

ಮದುವೆಯಾದ ಕೆಲವೇ ತಿಂಗಳಲ್ಲಿ ವಾಣಿ ಅವರು ಪತಿಯ ಲೈಂಗಿಕ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅವರಿಂದ ದೂರವಾಗಲು ಬಯಸಿದ್ದರು. ಈ ವಿಷಯವಾಗಿ ದಂಪತಿ ನಡುವೆ ಜಗಳವಾಗಿತ್ತು. ನಂತರ ಎರಡೂ ಕುಟುಂಬದವರು ರಾಜಿ ಮಾತುಕತೆ ನಡೆಸಿ, ದಂಪತಿಗೆ ವಿಚ್ಛೇದನ ಕೊಡಿಸುವ ನಿರ್ಧಾರ ಕೈಗೊಂಡಿದ್ದರು.

ಸಂಜೀವ್‌ಕುಮಾರ್ ಅವರು ಪತ್ನಿಗೆ 35 ಲಕ್ಷ ರೂಪಾಯಿ ಹಣವನ್ನು ಜೀವನಾಂಶಕ್ಕೆ ಕೊಡಬೇಕೆಂದು ನಿರ್ಧಾರವಾಗಿತ್ತು. ಬಳಿಕ ದಂಪತಿ ದೂರವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಂಜೀವ್‌ಕುಮಾರ್ ಅವರ ಮೊಬೈಲ್ ಫೋನ್ ಜೂ.7ರಿಂದಲೂ ಸ್ವಿಚ್ ಆಫ್ ಆಗಿದೆ. ಇದರಿಂದಾಗಿ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

`ವಾಣಿ ಮತ್ತು ಅವರ ಕುಟುಂಬದವರು ಮಗನನ್ನು ವಿನಾಕಾರಣ ಅವಮಾನಿಸುತ್ತಿದ್ದರು. ಆತನ ಮೇಲೆ ಹಲವು ಬಾರಿ ಹಲ್ಲೆ ಸಹ ನಡೆಸಿದ್ದರು. ಸೊಸೆ ಮತ್ತು ಆಕೆಯ ಸಂಬಂಧಿಕರೇ ಮಗನನ್ನು ಅಪಹರಿಸಿ ಕೊಲೆ ಮಾಡಿರುವ ಸಾಧ್ಯತೆ ಇದೆ~ ಎಂದು ಮಹೇಶಪ್ಪ ಆರೋಪಿಸಿದ್ದಾರೆ.

ಮಹೇಶಪ್ಪ ಅವರ ಆರೋಪವನ್ನು ನಿರಾಕರಿಸಿರುವ ವಾಣಿ ಪೋಷಕರು, `ಮದ್ಯವ್ಯಸನಿಯಾದ ಅಳಿಯ ಪ್ರತಿನಿತ್ಯ ಪಾನಮತ್ತನಾಗಿ ಬಂದು ಮಗಳಿಗೆ ಕಿರುಕುಳ ನೀಡುತ್ತಿದ್ದ. ಮಗಳ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದ ಆತ, ವಾಣಿಯ ಚಲನವಲನಗಳ ಬಗ್ಗೆ ನಿಗಾ ಇಡಲು ಮನೆಯಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಸಹ ಅಳವಡಿಸಿಕೊಂಡಿದ್ದ~ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.