ADVERTISEMENT

‘ತಂದೆ ಮೇಲೆ ಜನರಿಗಿದ್ದ ಪ್ರೀತಿಯ ಬಂಧನಕ್ಕೆ ಕಟ್ಟುಬಿದ್ದೆ’

ಮೊದಲ ಬಾರಿಗೆ ಶಾಸಕನಾದ ಅನುಭವ

​ಪ್ರಜಾವಾಣಿ ವಾರ್ತೆ
Published 3 ಮೇ 2018, 20:13 IST
Last Updated 3 ಮೇ 2018, 20:13 IST
‘ತಂದೆ ಮೇಲೆ ಜನರಿಗಿದ್ದ ಪ್ರೀತಿಯ ಬಂಧನಕ್ಕೆ ಕಟ್ಟುಬಿದ್ದೆ’
‘ತಂದೆ ಮೇಲೆ ಜನರಿಗಿದ್ದ ಪ್ರೀತಿಯ ಬಂಧನಕ್ಕೆ ಕಟ್ಟುಬಿದ್ದೆ’   

ಬೆಂಗಳೂರು: ಸಚಿವರಾಗಿದ್ದ ತಂದೆ ಸಿ.ಬೈರೇಗೌಡರು ಸಾರ್ವಜನಿಕ ಜೀವನದಲ್ಲಿ ಉತ್ತುಂಗದಲ್ಲಿದ್ದಾಗಲೂ ನಾನು ಮಾತ್ರ ರಾಜಕೀಯದಿಂದ ದೂರವೇ ಇದ್ದೆ. ಅಮೆರಿಕ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಇಂಟರ್‌ನ್ಯಾಷನಲ್‌ ಸರ್ವೀಸ್‌ನಲ್ಲಿ ಅಂತರರಾಷ್ಟ್ರೀಯ ವ್ಯವಹಾರ ವಿಷಯದಲ್ಲಿ ಎಂ.ಎ ವ್ಯಾಸಂಗ ಮುಗಿಸಿ ತವರಿಗೆ ಮರಳಿದ ಬಳಿಕವೂ ನಾನು ಮೂರು ವರ್ಷ ಕೃಷಿ ಮಾಡಿಕೊಂಡಿದ್ದೆ. ನಂತರ ಮತ್ತೆ ಅಮೆರಿಕಕ್ಕೆ ತೆರಳಿ ಕೆಲಸಕ್ಕೆ ಸೇರಿದ್ದೆ.

2003ರ ಜುಲೈನಲ್ಲಿ ನನ್ನ ತಂದೆಯವರು ನಿಧನರಾದರು. ಅವರ ಅಂತ್ಯಸಂಸ್ಕಾರದ ಸಲುವಾಗಿ ಮತ್ತೆ ಊರಿಗೆ ಬಂದೆ. ಅವರು ಪ್ರತಿನಿಧಿಸುತ್ತಿದ್ದ ವೇಮಗಲ್‌ ಕ್ಷೇತ್ರದಾದ್ಯಂತ ಅಲ್ಲಲ್ಲಿ ಶ್ರದ್ಧಾಂಜಲಿ ಸಭೆಗಳಲ್ಲಿ ಭಾಗವಹಿಸುತ್ತಿದ್ದೆ. ಅವರ ವ್ಯಕ್ತಿತ್ವ ಹಾಗೂ ಸಾಧನೆ ಬಗ್ಗೆ ಮಾತನಾಡುತ್ತಿದ್ದೆ. ಅವರ ಅಭಿಮಾನಿಗಳು ಹಾಗೂ ಕ್ಷೇತ್ರದ ಜನರು ನನ್ನ ಮಾತುಗಳಿಂದ ಆಕರ್ಷಿತರಾಗಿದ್ದರು. ತಂದೆಯ ನಿಧನದಿಂದ ತೆರವಾದ ಸ್ಥಾನಕ್ಕೆ ನಾನು ಸ್ಪರ್ಧಿಸಬೇಕು ಎಂದು ಒತ್ತಾಯ ಮಾಡಿದರು. ಅವರ ಅಭಿಮಾನಕ್ಕೆ ಕಟ್ಟುಬಿದ್ದು ಹಾಗೂ ಕುಟುಂಬದವರ ಒತ್ತಾಯಕ್ಕೆ ಮಣಿದು ನಾನು ವೇಮಗಲ್‌ ಕ್ಷೇತ್ರದಲ್ಲಿ ಅಖಿಲಭಾರತ ಪ್ರಗತಿಪರ ಜನತಾದಳದ (ಎಐಪಿಜೆಡಿ) ಅಭ್ಯರ್ಥಿಯಾಗಲು ಒಪ್ಪಿಕೊಂಡೆ.

ಮೊದಲ ಬಾರಿ ಎದುರಿಸಿದ ಚುನಾವಣೆ ನನ್ನ ಜೀವನದ ರೋಮಾಂಚನಕಾರಿ ಅನುಭವ. ರಾಜಕೀಯಕ್ಕೆ ನಾನು ಹೊಸಬ. ನನ್ನ ಕ್ಷೇತ್ರದ ಜನ ಮತ್ತು ತಂದೆಯವರ ಬೆಂಬಲಿಗರು ಮಾತ್ರ ನನ್ನ ಜೊತೆಗಿದ್ದರು. ಕಾಂಗ್ರೆಸ್‌ನ ವಿ.ವೆಂಕಟಮುನಿಯಪ್ಪ ಎದುರಾಳಿ.  ಇಡೀ ಸರ್ಕಾರವೇ ನನ್ನ ಎದುರಿಗಿತ್ತು. ಇದರಿಂದ ಮತ್ತಷ್ಟು ಉತ್ತೇಜಿತರಾದ ನಮ್ಮ ಜನ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದರು. ತೀರ ಕಠಿಣವಾಗಿದ್ದ ಮೊದಲ ಚುನಾವಣೆಯಲ್ಲೇ ಅಭೂತಪೂರ್ವ ಜನಬೆಂಬಲ ದೊರಕಿತು. 68,458 ಮತಗಳನ್ನು ಪಡೆದ ನಾನು 11,283 ಮತಗಳ ಅಂತರದಿಂದ ಗೆದ್ದೆ.

ADVERTISEMENT

ಮೊದಲ ಚುನಾವಣೆಯಲ್ಲಿ ಜನರು ನನ್ನ ಬಗ್ಗೆ ಹೊಂದಿದ್ದ ಭಾವನೆ ರಾಜಕೀಯ ಜೀವನದಲ್ಲಿ ಒಂದು ಹೆಗ್ಗುರುತು. ಅದನ್ನು ಮತ್ತೆಂದೂ ಕಾಣಲು ಸಾಧ್ಯವಿಲ್ಲ. ಪುನರ್ವಿಂಗಡನೆ ವೇಳೆ ವೇಮಗಲ್‌ ಕ್ಷೇತ್ರ ಅಸ್ತಿತ್ವ ಕಳೆದುಕೊಂಡಿದ್ದರಿಂದ ಬೆಂಗಳೂರಿಗೆ ಬರಬೇಕಾಯಿತು. ತಂದೆಯವರ ಹೆಸರು ಮತ್ತು ವರ್ಚಸ್ಸು ಇಂದಿಗೂ ನನಗೆ ಆಸರೆ. ಸಾರ್ವಜನಿಕ ಜಿವನದಲ್ಲಿ ಬೆಳೆಯಬೇಕಾದರೆ ಅದರ ಜೊತೆ ನನ್ನ ಅರ್ಹತೆ ಮತ್ತು ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗುತ್ತದೆ. ಇಲ್ಲದಿದ್ದರೆ ದೂರ ಸಾಗಲು ಆಗುವುದಿಲ್ಲ. ಸಾರ್ವಜನಿಕ ಜೀವನ ನಮಗೆ ನಿತ್ಯವೂ ಹೊಸ ವಿಚಾರಗಳನ್ನು ಕಲಿಸುತ್ತದೆ. ಕಲಿಯುವ ಮನೋಭಾವ ಉಳಿಸಿಕೊಂಡರೆ ಪ್ರತಿದಿನವೂ ನಮಗೆ ಸ್ವಾರಸ್ಯಕರ.

ಚುನಾವಣಾ ವ್ಯವಸ್ಥೆ ನಮ್ಮ ಸಮಾಜದ ಪ್ರಚಲಿತ ಮೌಲ್ಯಗಳ ಪ್ರತಿಬಿಂಬ. ಕಾಲ ಬದಲಾದಂತೆ ಜನ ಹಾಗೂ ಚುನಾವಣಾ ವೈಖರಿಗಳೂ ಬದಲಾಗುತ್ತಿವೆ. ಸಮಾಜದ ಮೌಲ್ಯಗಳ ಸುಧಾರಣೆ ಆಗದೆ ಈಸಬೇಕು ಇದ್ದು ಜೈಸಬೇಕು. ನದಿಯೊಳಗೆ ಇಳಿದ ನಂತರ ಹಳ್ಳ ಕೊಳ್ಳಗಳ ಬಗ್ಗೆ ದೂರಿ ಪ್ರಯೋಜನವಿಲ್ಲ.

ನನ್ನ ಅರ್ಹತೆ ಸಾಮರ್ಥ್ಯಗಳಿಗಿಂತ ಹೆಚ್ಚು ಅವಕಾಶಗಳು ನನಗೆ ಸಿಕ್ಕಿವೆ. ಶಾಸಕನಾಗಿ ಮಾಡಬೇಕಾದ ಅನೇಕ ಕೆಲಸಗಳಿವೆ. ತಳಮಟ್ಟದ ಸಮುದಾಯಗಳ ಜೊತೆ ಬೆರೆತು ಸಾಮಾಜಿಕ ಬದಲಾವಣೆಗೆ ಪ್ರಯತ್ನಿಸಬೇಕೆಂಬ ಕನಸಿದೆ. ಉನ್ನತ ಹುದ್ದೆಗಳಿಗಿಂತ ಹೆಚ್ಚಾಗಿ, ಜನರ ಜೊತೆ ಬೆರೆತು, ಅವರ ಪ್ರತಿನಿಧಿಯಾಗಿ ಕೆಲಸ ಮಾಡುವ ಅವಕಾಶ ಅತ್ಯಂತ ದೊಡ್ಡದು ಎಂದು ಭಾವಿಸುತ್ತೇನೆ.

–ಕೃಷ್ಣಬೈರೇಗೌಡ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.