ಬೆಂಗಳೂರು: ತೊಗರಿ ಅಭಿವೃದ್ಧಿ ಮಂಡಳಿಯಿಂದ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಬೇಕೇ, ಬೇಡವೇ ಎಂಬ ಕುರಿತು 2-3 ದಿನಗಳಲ್ಲಿ ವರದಿ ತರಿಸಿಕೊಳ್ಳಲಾಗುವುದು.
ಅಗತ್ಯ ಕಂಡುಬಂದರೆ ಮತ್ತೆ ಬೆಂಬಲ ಬೆಲೆ ಆಧಾರದಲ್ಲಿ ತೊಗರಿ ಖರೀದಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಪ್ರಕಟಿಸಿದರು.
ಕಾಂಗ್ರೆಸ್ಸಿನ ಮೋಟಮ್ಮ, ಅಲ್ಲಮಪ್ರಭು ಪಾಟೀಲ, ಎಸ್.ಆರ್. ಪಾಟೀಲ ಮತ್ತು ವೀರಣ್ಣ ಮತ್ತಿಕಟ್ಟಿ ಅವರು ವಿಧಾನ ಪರಿಷತ್ತಿನಲ್ಲಿ ಸೋಮವಾರ ಪ್ರಸ್ತಾವಿಸಿದ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ತೊಗರಿ ಖರೀದಿಗೆ ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಿಗೆ ಒಂದು ಕೋಟಿ ರೂಪಾಯಿ ನೀಡಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 11.73 ಕೋಟಿ ರೂಪಾಯಿ ವಿನಿಯೋಗಿಸಿ 25,837 ಕ್ವಿಂಟಲ್ ತೊಗರಿಯನ್ನು ಬೆಂಬಲ ಬೆಲೆ ನೀಡಿ ಖರೀದಿಸಲಾಗಿದೆ.
ಇದರಿಂದ ಅಂದಾಜು 1,796 ರೈತರಿಗೆ ಪ್ರಯೋಜನ ಆಗಿದೆ. ಬೆಂಬಲ ಬೆಲೆ ನೀಡಿ ಖರೀದಿ ಮಾಡಿದ್ದರೂ, ತೊಗರಿ ಧಾರಣೆಯಲ್ಲಿ ಸುಧಾರಣೆ ಆಗದ ಕಾರಣ, ಖರೀದಿ ನಿಲ್ಲಿಸಲಾಯಿತು ಎಂದು ಕೃಷಿ ಸಚಿವ ಉಮೇಶ ಕತ್ತಿ ಅವರ ಪರವಾಗಿ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಸದನ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.