ADVERTISEMENT

ದಲಿತರ ಉದ್ಧಾರವು ದಲಿತ ನಾಯಕರಿಂದ ಮಾತ್ರ ಸಾಧ್ಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 19:55 IST
Last Updated 11 ಜೂನ್ 2011, 19:55 IST

ಹೊಸಕೋಟೆ: ದಲಿತರ ಉದ್ಧಾರ ದಲಿತ ನಾಯಕರಿಂದ ಮಾತ್ರ ಸಾಧ್ಯ ಎಂದು ಚಿಂತಕ ಪ್ರೊ.ಜಿ.ಕೆ. ಗೋವಿಂದರಾವ್ ಅಭಿಪ್ರಾಯಪಟ್ಟರು.ತಾಲ್ಲೂಕಿನ ಪ್ರಗತಿಪರ ದಲಿತ ಸಂಘಟನೆಗಳ ಒಕ್ಕೂಟ ಇತ್ತೀಚೆಗೆ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, `ವಿದ್ಯಾವಂತ ದಲಿತರು ಸ್ವಾರ್ಥಿಗಳಾಗದೆ ತಮ್ಮ ಜನಾಂಗದ ಬಡವರ ಕಷ್ಟ ಸುಖಗಳಿಗೆ ಸ್ವಂದಿಸಬೇಕು~ ಎಂದು ಕರೆ ನೀಡಿದರು.

`ವಿವಿಧ ದಲಿತ ಸಂಘಟನೆಗಳು ಒಗ್ಗಟ್ಟಾಗಿ ಒಂದೇ ಗುರಿ ಇಟ್ಟುಕೊಂಡು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು~ ಎಂದೂ ಅವರು ಸಲಹೆ ಮಾಡಿದರು.ವಿಧಾನ ಪರಿಷತ್‌ನ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, `ದಲಿತರು ಸ್ವಾಭಿಮಾನಿಗಳಾಗಿ ಸ್ವತಂತ್ರಬದುಕಬೇಕಿದೆ.

ಮತಾಂತರ, ಗೋಮಾಂಸ ನಿಷೇಧ ಕಾಯ್ದೆ ಸೇರಿದಂತೆ ಸರ್ಕಾರ ತರಲು ಹೊರಟಿರುವ ಹಲವು ಕಾನೂನುಗಳು ದಲಿತರ ಹಕ್ಕುಗಳಿಗೆ ವಿರುದ್ಧವಾಗಿವೆ. ಇದರ ವಿರುದ್ಧ ಹೋರಾಟ ಮಾಡಬೇಕಿದೆ~ ಎಂದು ಹೇಳಿದರು.

ಚಲನಚಿತ್ರ ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ವಕೀಲ ಹರೀಂದ್ರ, ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ಎಂ. ಕೆಂಚೇಗೌಡ, ದಲಿತ ಮುಖಂಡ ಚನ್ನಕೃಷ್ಣಪ್ಪ ಮಾತನಾಡಿದರು. ಬೋಧಿದತ್ತ ಬಂತೇಜ ಬುದ್ದ ತತ್ವಗಳನ್ನು ಬೋಧಿಸಿದರು. ಪ್ರಗತಿಪರ ಒಕ್ಕೂಟದ ಅಧ್ಯಕ್ಷ ಪಿ.ಎಂ. ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಎಂ.ಆಂಜಿನಪ್ಪ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಹೊಸಕೋಟೆಯಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ, ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕೆಂಬುದೂ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹ ಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.