ADVERTISEMENT

ದೂರುಗಳಷ್ಟೇ ಅಲ್ಲ, ಸಮಸ್ಯೆಗಳನ್ನೂ ಬರೆಯಿರಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:40 IST
Last Updated 20 ಸೆಪ್ಟೆಂಬರ್ 2011, 19:40 IST

ಬೆಂಗಳೂರು: `ಲಿಂಗ ಪರಿವರ್ತನೆ ಮಾಡಿಸಿಕೊಂಡಿರುವುದರಿಂದ ಮನೆಯಲ್ಲಿ ನಮಗೆ ಗೌರವ ಕೊಡುವುದಿಲ್ಲ. ಇದರಿಂದ ಬೇಸತ್ತು ಮನೆಯನ್ನು ಬಿಟ್ಟುಬಂದರೆ ಸಮಾಜದಲ್ಲೂ ಕೀಳಾಗಿ ಕಾಣಲಾಗುತ್ತಿದೆ. ಓದಬೇಕೆಂದರೆ ಕಾಲೇಜಿನಲ್ಲೂ ಸೇರಿಸಿಕೊಳ್ಳುವುದಿಲ್ಲ. ನಮ್ಮನ್ನೂ ತಮ್ಮಂತೆಯೇ ಎಂದು ಕಾಣುವ ಮನೋಭಾವ ಯಾವಾಗ ಬರುತ್ತದೆ...~

-ಇಂಥ ಹಲವು ರೀತಿಯ ಸಮಸ್ಯೆಗಳನ್ನು ಹೇಳಿಕೊಂಡವರು ಸನಾ. ಕೆಲ ಕಾಲದ ಹಿಂದೆ ಲಿಂಗ ಪರಿವರ್ತನೆ ಮಾಡಿಸಿಕೊಂಡು `ಹೆಣ್ಣು~ ರೂಪ ಧರಿಸಿರುವ ಸನಾಳ ಮನದಾಳದ ನೋವಿದು.

ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಂಗಮ, ಸಮರ, ಸೆಂಟರ್ ಫಾರ್ ಅಡ್ವೊಕೆಸಿ ಅಂಡ್ ರಿಸರ್ಚ್ ಸ್ವಯಂಸೇವಾ ಸಂಸ್ಥೆಗಳು ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ `ಮಾಧ್ಯಮ ಮತ್ತು ಲಿಂಗತ್ವ ಅಲ್ಪಸಂಖ್ಯಾತರು~ ಎಂಬ ಕಾರ್ಯಾಗಾರದಲ್ಲಿ ಅವರು ಹಿಜಡಾಗಳ ಸಮಸ್ಯೆಗಳನ್ನು ಬಿಡಿಸಿಟ್ಟರು.

`ಸಮಾಜದಲ್ಲಿ ನಮ್ಮನ್ನು ಒಪ್ಪಿಕೊಳ್ಳದೇ ಇರುವುದರಿಂದ ಎಲ್ಲಿಯೂ ಕೆಲಸ ಸಿಗುವುದಿಲ್ಲ. ಆದ್ದರಿಂದ ಅನಿವಾರ್ಯವಾಗಿ ಭಿಕ್ಷೆ ಬೇಡುತ್ತೇವೆ ಅಥವಾ ಲೈಂಗಿಕ ಕಾರ್ಯಕರ್ತೆಯರಾಗುತ್ತೇವೆ. ನಗರದ ಹಲವು ಸಿಗ್ನಲ್‌ಗಳಲ್ಲಿ ಜನರು ಭಿಕ್ಷೆ ನೀಡದಿದ್ದಾಗ ಹಿಜಡಾಗಳು ಗಲಾಟೆ ಆರಂಭಿಸುತ್ತಾರೆ. ಕೆಲವರಿಂದ ಎಲ್ಲರಿಗೂ ಇಂಥ ಆರೋಪ ಕೇಳಿ ಬರುತ್ತದೆ. ಆದ್ದರಿಂದ ಮಾಧ್ಯಮಗಳು ಹಿಜಡಾಗಳ ಕುಕೃತ್ಯಗಳನ್ನು ಬರೆಯುವ ಜೊತೆಗೇ ಸಮಸ್ಯೆಗಳನ್ನೂ ಬರೆಯಬೇಕು~ ಎಂದು ಮನವಿ ಮಾಡಿದರು.

ಜಿಲ್ಲಾ ಏಡ್ಸ್ ಘಟಕದ ಮೇಲ್ವಿಚಾರಕಿ ಯಶೋದಾ, `ವಿವಿಧ ಸ್ವಯಂ ಸೇವಾಸಂಸ್ಥೆಗಳ ಸಹಕಾರದೊಂದಿಗೆ 69 ಕೇಂದ್ರಗಳಲ್ಲಿ ಎಚ್‌ಐವಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರು ನಗರದಲ್ಲಿ ಎಚ್‌ಐವಿ ಸೋಂಕು ಕಂಡುಬಂದವರಿಗೆ ಚಿಕಿತ್ಸೆ ನೀಡಲು ಐದು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಚ್‌ಐವಿ ಸೋಂಕಿನ ಶಂಕೆಯ ಮಕ್ಕಳ ಚಿಕಿತ್ಸೆಗಾಗಿ 13 ಕೇಂದ್ರಗಳನ್ನು ತೆರೆಯಲಾಗಿದೆ. ಲೈಂಗಿಕ ಅಲ್ಪಸಂಖ್ಯಾತರು ತಾವಾಗಿಯೇ ಆಪ್ತ ಸಲಹಾ ಕೇಂದ್ರಗಳಿಗೆ ಬರುವುದು ಕಡಿಮೆ. ವಿವಿಧ ಭಾಗಗಳಲ್ಲಿ ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಂಘಟೆಗಳ ಯೋಜನಾಧಿಕಾರಿಗಳ ಮೂಲಕ ಅವರು ಸಲಹಾ ಕೇಂದ್ರಕ್ಕೆ ಬರುತ್ತಿದ್ದಾರೆ~ ಎಂದರು.

`ಸಂಗಮ~ದ ಕಾರ್ಯಕ್ರಮ ಯೋಜನಾಧಿಕಾರಿ ಅಕ್ಕೈ ಪದ್ಮಶಾಲಿ, `ಸಮರ~ದ ಯೋಜನಾ ನಿರ್ದೇಶಕ ಮಾದೇಶ, ಪೆಹಚಾನ್ ಯೋಜನೆಯ ಬಗ್ಗೆ ದಿಲ್‌ಫರಾಜ್ ವಿವರಿಸಿದರು.

ವಿಶ್ವ ಹಣಕಾಸು ನಿಧಿಯ ಸಹಾಯದಿಂದ ಎಚ್.ಐ.ವಿ./ ಏಡ್ಸ್ ವಿರುದ್ಧ ಹೋರಾಡಲು ಪೆಹಚಾನ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಐದು ವರ್ಷಗಳಲ್ಲಿ 17 ರಾಜ್ಯಗಳಲ್ಲಿರುವ ಸುಮಾರು 4.5 ಲಕ್ಷ ಲೈಂಗಿಕ ಅಲ್ಪಸಂಖ್ಯಾತರನ್ನು ಗುರುತಿಸಿ ಎಚ್‌ಐವಿ ತಡೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.

 ವರದಿಗಾರಿಕೆಯಲ್ಲಿ ಎಚ್ಚರ ವಹಿಸಲು ಸಲಹೆ
`ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ವರದಿಗಾರರು ಲೇಖನಗಳನ್ನು ಬರೆಯುವ ಮುನ್ನ ಎಚ್ಚರಿಕೆ ವಹಿಸವ ಅಗತ್ಯವಿದೆ~ ಎಂದು ಬಿಬಿಸಿಯ ಮಾಜಿ ಪತ್ರಕರ್ತ ಡಾನಿಯಲ್ ಲಾಕ್ ನುಡಿದರು.

ಲೈಂಗಿಕ ಅಲ್ಪಸಂಖ್ಯಾತರಿಗೂ ಹಕ್ಕುಗಳಿವೆ. ಅವುಗಳನ್ನು ಒದಗಿಸಲು ಸರ್ಕಾರ ಹಾಗೂ ಸಮಾಜ ನಿರಾಕರಿಸಲಾಗದು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಪಾರದರ್ಶಕವಾಗಿರಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT