ADVERTISEMENT

ನಗರದಲ್ಲಿ ನ್ಯಾನೊ ತಂತ್ರಜ್ಞಾನ ಸಂಸ್ಥೆ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮಾದರಿಯಲ್ಲಿಯೇ ನಗರದ ತುಮಕೂರು ರಸ್ತೆಯಲ್ಲಿ ಭಾರತೀಯ ನ್ಯಾನೊ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಐಎನ್‌­ಎಸ್‌ಟಿ)  ಸ್ಥಾಪಿಸಲಾಗುತ್ತಿದೆ ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಗುರುವಾರ ಇಲ್ಲಿ ಪ್ರಕಟಿಸಿದರು. ಬೆಂಗಳೂರು ಇಂಡಿಯಾ ನ್ಯಾನೊ–2013 ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವ ದಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗು ತ್ತಿದ್ದು, ಕೇಂದ್ರ ಅಗತ್ಯ ಅನುದಾನ ನೀಡಿದರೆ, ರಾಜ್ಯ ಸರ್ಕಾರ 16 ಎಕರೆ ಭೂಮಿ ಕೊಡುತ್ತಿದೆ’ ಎಂದು ವಿವರಿಸಿದರು. ‘ನ್ಯಾನೊ ಪಾರ್ಕ್‌ ಅಭಿವೃದ್ಧಿಗೆ ಅಗತ್ಯವಾದ ಅನುದಾನವನ್ನು ನಮ್ಮ ಸರ್ಕಾರ ಒದಗಿಸಲಿದೆ’ ಎಂದು ಸ್ಪಷ್ಟಪಡಿ ಸಿದರು. ಆಹಾರ ಮತ್ತು ಇಂಧನದ ಕೊರತೆ ನೀಗಿಸಲು ಹಾಗೂ ಶುದ್ಧ ನೀರು ಪೂರೈಸಲು ಅಗತ್ಯವಾದ ನ್ಯಾನೊ ತಂತ್ರಜ್ಞಾನ ನಮಗೆ ಅಗತ್ಯ ವಾಗಿದೆ. ಈ ನಿಟ್ಟಿನಲ್ಲಿ ನಡೆಯುವ ಸಂಶೋಧನೆಗಳಿಗೆ ಅಗತ್ಯ ಬೆಂಬಲ ನೀಡಲು ನಾವು ಸಿದ್ಧರಿದ್ದೇವೆ’ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ವಿಜ್ಞಾನಿ ಸಿಎನ್‌ಆರ್‌ ರಾವ್‌, ‘ನ್ಯಾನೊ ತಂತ್ರಜ್ಞಾನ ಮನುಕುಲಕ್ಕೆ ಅತ್ಯಂತ ಪ್ರಯೋಜನಕಾರಿ ಆಗಿದ್ದು, ವೈದ್ಯಕೀಯ ಲೋಕ ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನದಿಂದ ಹೊಸ ಚಮತ್ಕಾರಗಳನ್ನು ಮಾಡಲಿದೆ’ ಎಂದು ಭವಿಷ್ಯ ನುಡಿದರು. ‘ಸುರಕ್ಷಿತ ನೀರು ಪೂರೈಕೆ ವಿಷಯ­ದಲ್ಲಿ ನ್ಯಾನೊ ತಂತ್ರಜ್ಞಾನ ಅತ್ಯವಶ್ಯ­ವಾಗಿದೆ’ ಎಂದ ಅವರು, ‘ವಿಜ್ಞಾನ ಕ್ಷೇತ್ರದಲ್ಲಿ ನಮ್ಮ ಬೆಂಗಳೂರು ಮುಂಚೂಣಿಯಲ್ಲಿ ಇರುವುದು ಖುಷಿ ತಂದಿದೆ’ ಎಂದು ಹೇಳಿದರು.

‘ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ವಿಜ್ಞಾನ ಕ್ಷೇತ್ರಕ್ಕೆ ನೆರವು ನೀಡಲು ಸದಾ ಮುಕ್ತ ಮನಸ್ಸು ಹೊಂದಿದವರಾಗಿದ್ದಾರೆ. ಅವರ ಜತೆ ಕೆಲಸ ಮಾಡಿದ ಅವಧಿ ತೃಪ್ತಿ ತಂದಿದೆ’ ಎಂದು ತಿಳಿಸಿದರು. ಕಾನ್ಪುರ್ ಐಐಟಿಯ ಪ್ರಾಧ್ಯಾಪಕ ಪ್ರೊ. ಆಶುತೋಷ್‌ ಘೋಷ್‌ ಅವರಿಗೆ ಪ್ರೊ. ಸಿಎನ್‌ಆರ್‌ ರಾವ್‌ ನ್ಯಾನೊ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಪಂಚದ 225ಕ್ಕೂ ಅಧಿಕ ಸಂಸ್ಥೆಗಳು ಸಮ್ಮೇಳನದಲ್ಲಿ ಪಾಲ್ಗೊಂಡಿವೆ. ‘ಯುವಕರಿಗಾಗಿ ನ್ಯಾನೊ’ ಎಂಬ ಕಾರ್ಯಕ್ರಮವನ್ನು ವಿಶೇಷವಾಗಿ ಯುವ ಪೀಳಿಗೆಗಾಗಿ ಏರ್ಪಡಿಸಲಾಗಿದೆ.

ADVERTISEMENT

ಬೆನ್ನು ಹತ್ತಬೇಕು: ಆ್ಯಂಡ್ರೆ ಜೈಮ್‌
‘ಸಂಶೋಧನಾ ಕ್ಷೇತ್ರಕ್ಕೆ ಯಾವ ದೇಶದ ರಾಜಕಾರಣಿಗಳೂ ಸುಲಭವಾಗಿ ದುಡ್ಡು ಬಿಚ್ಚುವುದಿಲ್ಲ. ವಿಜ್ಞಾನಿಗಳು ಅವರ ಬೆನ್ನು ಹತ್ತುವುದು ಅನಿವಾರ್ಯ’ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಇಂಗ್ಲೆಂಡ್‌ ವಿಜ್ಞಾನಿ ಪ್ರೊ. ಆ್ಯಂಡ್ರೆ ಜೈಮ್‌ ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ‘ನಮ್ಮ ದೇಶದ ರಾಜಕಾರಣಿಗಳೂ ಸಂಶೋಧನೆಗೆ ದುಡ್ಡು ನೀಡಲು ಸತಾಯಿಸುತ್ತಾರೆ. ಆದರೆ, ತಾಳ್ಮೆ ಕಳೆದುಕೊಳ್ಳದೆ ನಾವು ಅವರ ಬೆನ್ನು ಬೀಳುತ್ತೇವೆ’ ಎಂದು ಹೇಳಿದರು. ‘ಪ್ರಪಂಚದ ಬೆಳವಣಿಗೆಗೆ ವಿಜ್ಞಾನ ಬೇಕೇಬೇಕು’ ಎಂದೂ ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.