ಬೆಂಗಳೂರು: ನಗರದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಪೈಪೋಟಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಬೆಂಗಳೂರು ದಕ್ಷಿಣ, ಉತ್ತರ ಮತ್ತು ಕೇಂದ್ರ ಕ್ಷೇತ್ರಗಳ ವ್ಯಾಪ್ತಿಯ ಹಲವೆಡೆ ಭಾನುವಾರ ಎರಡೂ ಪಕ್ಷಗಳ ಪ್ರಚಾರ ಕಾರ್ಯಕ್ರಮಗಳು ನಡೆದವು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಅವರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಾದಯಾತ್ರೆ ಮೂಲಕ ಮತದಾರರನ್ನು ಭೇಟಿ ಮಾಡಿದರು. ಬಸವೇಶ್ವರನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣಕ್ಕೆ ಬೆಳಿಗ್ಗೆಯೇ ಬಂದ ಕಾಂಗ್ರೆಸ್ ಅಭ್ಯರ್ಥಿ, ಸ್ಥಳೀಯ ಶಾಸಕ ಪ್ರಿಯಕೃಷ್ಣ ಅವರೊಂದಿಗೆ ಪ್ರಚಾರ ಆರಂಭಿಸಿದರು.
ಕ್ರೀಡಾಂಗಣದ ಹೊರ ಭಾಗದಲ್ಲಿ ಯುವಕರು, ಮಕ್ಕಳ ಜೊತೆ ಕೆಲಕಾಲ ಕ್ರಿಕೆಟ್ ಆಡಿದ ನಿಲೇಕಣಿ, ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಅಲ್ಲಿ ಇದ್ದವರಿಗೆ ಮನವಿ ಮಾಡಿದರು. ಬಳಿಕ ಒಳಾಂಗಣ ಕ್ರೀಡಾಂಗಣಕ್ಕೆ ತೆರಳಿ ಬ್ಯಾಡ್ಮಿಂಟನ್ ಆಡಿದರು. ನಂತರ ರಾಜಾಜಿನಗರ ಆರನೇ ಬ್ಲಾಕ್‌ನಿಂದ ಗೋವಿಂದರಾಜನಗರದವರೆಗೂ ಪಾದಯಾತ್ರೆಯಲ್ಲಿ ಸಾಗಿದರು. ಮಾರ್ಗದುದ್ದಕ್ಕೂ ಭೇಟಿಯಾದ ಮತದಾರರ ಜೊತೆ ಸಮಾಲೋಚನೆ ನಡೆಸಿದರು.
ಕಚೇರಿ ಉದ್ಘಾಟನೆ: ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಅವರು ಬೊಮ್ಮನಹಳ್ಳಿ, ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚೋಳೂರುಪಾಳ್ಯ ಮತ್ತಿತರ ಕಡೆಗಳಲ್ಲಿ ಪ್ರಚಾರ ನಡೆಸಿದರು. ನಂತರ ಸಿ–ವೋಟರ್ಸ್ (ಚುನಾವಣಾ ಸಮೀಕ್ಷೆ ನಡೆಸುವ ಅಧ್ಯಯನ ಸಂಸ್ಥೆ) ಪ್ರತಿನಿಧಿಗಳನ್ನು ಭೇಟಿ ಮಾಡಿದರು. ಚುನಾವಣೆಗೆ ಸಂಬಂಧಿಸಿದ ವಿಚಾರಗಳ ಕುರಿತು ಅವರೊಂದಿಗೆ ಸಮಾಲೋಚನೆ ನಡೆಸಿದರು.
ಸಂಜೆ ಜಯನಗರದ ಎಂಇಎಸ್ ಶಾಲೆ ಬಳಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆಯಲ್ಲಿ ಭಾಗವಹಿಸಿದರು. ವಿಧಾನ ಪರಿಷತ್ ಉಪ ಸಭಾಪತಿ ವಿಮಲಾ ಗೌಡ, ಶಾಸಕರಾದ ಆರ್.ಆಶೋಕ, ವಿಧಾನ ಪರಿಷತ್ ಸದಸ್ಯರಾದ ವಿ.ಸೋಮಣ್ಣ, ಅಶ್ವತ್ಥನಾರಾಯಣ ಮತ್ತಿತರರು ಪಾಲಗೊಂಡಿದ್ದರು.
ಬೆಂಗಳೂರು ಉತ್ತರ ಕ್ಷೇತ್ರದಲ್ಲೂ ಪ್ರಚಾರದ ಭರಾಟೆ ಜೋರಾಗಿಯೇ ಇತ್ತು. ಕಾಂಗ್ರೆಸ್ ಅಭ್ಯರ್ಥಿ ಸಿ.ನಾರಾಯಣಸ್ವಾಮಿ ಅವರು ಮಹಾಲಕ್ಷ್ಮಿ ಬಡಾವಣೆ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಿದರು. ಮಹಾಲಕ್ಷ್ಮಿ ಬಡಾವಣೆಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಮತ್ತಿತರರು ಭಾಗವಹಿಸಿದ್ದರು. ದಾಸರಹಳ್ಳಿಯಲ್ಲಿ ನಡೆದ ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್.ಶಂಕರ್ ಮತ್ತಿತರರು ಪಾಲ್ಗೊಂಡು, ಬೆಂಬಲ ಯಾಚಿಸಿದರು.
ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಅವರು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನೀಲಸಂದ್ರ, ಜಾನ್ಸನ್ ಮಾರುಕಟ್ಟೆ, ಆನೆಪಾಳ್ಯ, ಆಸ್ಟಿನ್ ಟೌನ್, ಎಲ್.ಆರ್.ನಗರ, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಗವಾರ, ಎಚ್‌ಬಿಆರ್ ಬಡಾವಣೆ, ಕೆ.ಜಿ.ಹಳ್ಳಿ ಮತ್ತಿತರ ಪ್ರದೇಶಗಳಲ್ಲಿ ಪ್ರಚಾರ ನಡೆಸಿದರು.
ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಅವರು ಚಾಮರಾಜಪೇಟೆಯ ವಿವಿಧೆಡೆ ‘ರೋಡ್ ಷೋ’ ಮೂಲಕ ಬೆಂಬಲ ಯಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.