ADVERTISEMENT

ನಾಗರಿಕ ಸೌಲಭ್ಯಗಳ ಮೀಸಲು ಪ್ರದೇಶ ಶೇ 25ರಷ್ಟು ಹೆಚ್ಚಳಕ್ಕೆ ನಿರ್ಧಾರ

ಪಿ.ಎಂ.ರಘುನಂದನ್
Published 10 ಜುಲೈ 2017, 19:30 IST
Last Updated 10 ಜುಲೈ 2017, 19:30 IST

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳು ಮತ್ತು ಖಾಸಗಿ ಬಿಲ್ಡರ್‌ಗಳು ನಿರ್ಮಿಸುವ ಬಡಾವಣೆಗಳಲ್ಲಿ ಉದ್ಯಾನಗಳು ಮತ್ತು ನಾಗರಿಕ ಸೌಲಭ್ಯಗಳಿಗೆ ಮೀಸಲಿಡುವ ಜಾಗದ ಪ್ರಮಾಣವನ್ನು ಪುನಃ ಶೇ 25ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

‘ನಗರಾಭಿವೃದ್ಧಿ ಇಲಾಖೆಯು ನಗರ ಯೋಜನಾ ಕಾಯ್ದೆಗೆ ತಿದ್ದುಪಡಿ ನಿಯಮಾವಳಿಗಳನ್ನು  ರೂಪಿಸಿದೆ. ಈ ನಿಯಮಾವಳಿ ಜಾರಿಯಾದಲ್ಲಿ ಬಡಾವಣೆಗಳಲ್ಲಿ ಉದ್ಯಾನ, ಮೈದಾನ ಮತ್ತು ನಾಗರಿಕ ಸೌಲಭ್ಯಗಳಿಗೆ ಮೀಸಲಿಡುವ ಜಾಗ ಶೇ 25ಕ್ಕೆ ಹೆಚ್ಚಳ ಆಗುತ್ತದೆ’ ಎಂದು ನಗರಾಭಿವೃದ್ಧಿ ನಿರ್ದೇಶಕ ಎಲ್. ಶಶಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಶೇ 25ರಷ್ಟು ಜಾಗದಲ್ಲಿ ಶೇ 15ರಷ್ಟು ಉದ್ಯಾನ ಮತ್ತು ಮೈದಾನಗಳಿಗೆ, ಶೇ 5ರಷ್ಟು ನಾಗರಿಕ ಸೌಲಭ್ಯಗಳಿಗೆ ಹಾಗೂ ಶೇ 5ರಷ್ಟು ಜಾಗವನ್ನು ಬ್ಯಾಂಕ್‌ ಮತ್ತಿತರ ಮೌಲಸೌಕರ್ಯಗಳ ಅಭಿವೃದ್ಧಿಗೆ ಬಳಸಲು ನಿರ್ಧರಿಸಲಾಗಿದೆ.

ADVERTISEMENT

ಈಗ ನಗರಾಭಿವೃದ್ಧಿ ಇಲಾಖೆ ಅನುಮತಿ ನೀಡುತ್ತಿರುವ ಬೆಂಗಳೂರು  ವ್ಯಾಪ್ತಿ ಬಿಟ್ಟು (ಬಿಡಿಎ, ಬಿಎಂಆರ್‌ಡಿಎ, ಬಿಎಂಐಸಿಎಪಿಎ ಹೊರತಾಗಿ) ಖಾಸಗಿ ಬಡಾವಣೆಗಳಲ್ಲಿ  ಶೇ 10ರಷ್ಟು ಜಾಗವನ್ನು ಉದ್ಯಾನಗಳಿಗೆ ಹಾಗೂ ಶೇ 5ರಷ್ಟು ಪ್ರದೇಶವನ್ನು ನಾಗರಿಕ ಸೌಲಭ್ಯಗಳಿಗೆ ಮೀಸಲಿಡಲಾಗುತ್ತಿದೆ.

ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ಕಾಯ್ದೆ ಅನ್ವಯ ಬಡಾವಣೆಗಳಲ್ಲಿ ಉದ್ಯಾನ ಹಾಗೂ ಮೈದಾನಗಳಿಗೆ ಮೀಸಲಿಡಬೇಕಾದ ಜಾಗದ ಪ್ರಮಾಣವನ್ನು ಶೇ 15ರಿಂದ ಶೇ 10ಕ್ಕೆ ಇಳಿಸಲಾಗಿತ್ತು. ಇದಕ್ಕೆ ಸಾರ್ವಜನಿಕ ರಿಂದ ವಿರೋಧ ವ್ಯಕ್ತವಾಗಿತ್ತು. ಒತ್ತಡಕ್ಕೆ ಮಣಿದು ಸರ್ಕಾರ ಪುನಃ ಉದ್ಯಾನ ಹಾಗೂ ಮೈದಾನಕ್ಕೆ ಮೀಸಲಾಗುವ ಜಾಗದ ಪ್ರಮಾಣ ಹೆಚ್ಚಿಸಲು ತೀರ್ಮಾನಿಸಿದೆ.

ಬೆಂಗಳೂರು ವ್ಯಾಪ್ತಿಯ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ),  ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಮತ್ತು ಬೆಂಗಳೂರು - ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರ (ಬಿಎಂಐಸಿಎಪಿಎ) ಬಡಾವಣೆಗಳ ನಿರ್ಮಾಣಕ್ಕಾಗಿ ಸ್ವಂತ ಕಾಯ್ದೆ ಹೊಂದಿವೆ. ಇಲ್ಲೂ ಸಹ ಮೀಸಲು ಪ್ರದೇಶವನ್ನು ಕಡಿಮೆ ಮಾಡಲು ಸರ್ಕಾರ ಯೋಚಿಸಿತ್ತು. ಈ  ನಿರ್ಧಾರವನ್ನೂ ಕೈಬಿಡಲಾಗಿದೆ.

ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ಕಾಯ್ದೆ ಜಾರಿ ಮಾಡುವುದಕ್ಕೂ ಮೊದಲು ನಾಗರಿಕ ಸೌಲಭ್ಯಗಳಿಗಾಗಿ ಶೇ 25ರಷ್ಟು ಜಾಗವನ್ನೇ ಮೀಸಲಿಡಲಾಗುತ್ತಿತ್ತು. ನಗರಾಭಿವೃದ್ಧಿ ಇಲಾಖೆ ಹೆಚ್ಚಿನ ಆದಾಯ ಗಳಿಸಬೇಕು ಎಂಬ ಉದ್ದೇಶದಿಂದ ಮೀಸಲು ಪ್ರದೇಶವನ್ನು ಕಡಿಮೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.