ಬೆಂಗಳೂರು: ನಗರದ ಪಶ್ಚಿಮ ಕಾರ್ಡ್ ರಸ್ತೆ ಸಮೀಪದ ಮೋದಿ ಆಸ್ಪತ್ರೆ ರಸ್ತೆಯಲ್ಲಿರುವ ಐಶ್ವರ್ಯ ಪ್ರಾಜೆಕ್ಟ್ಸ್ ಎಂಬ ಕಂಪೆನಿಯು ನಿವೇಶನ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಮುಂಗಡ ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕಂಪೆನಿಯಿಂದ ವಂಚನೆಗೊಳಗಾಗಿರುವ ಸಾವಿರಾರು ಮಂದಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ಕೇಂದ್ರ ಅಪರಾಧ ವಿಭಾಗಕ್ಕೆ (ಸಿಸಿಬಿ) ವರ್ಗಾಯಿಸಲಾಗಿದೆ.
ಟಿ.ಆರ್.ರೆಡ್ಡಿ ಹಾಗೂ ವಿ.ಭಾಸ್ಕರರೆಡ್ಡಿ ಎಂಬುವರು ಪಾಲುದಾರರಾಗಿ ಆರಂಭಿಸಿದ ಈ ಕಂಪೆನಿಯು 2003ರಿಂದ 2006ರವರೆಗೆ ಬೆಂಗಳೂರು ಸುತ್ತಮುತ್ತ ಹಲವು ಲೇಔಟ್‌ಗಳನ್ನು ನಿರ್ಮಿಸಿ ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಆ ನಂತರದ ವರ್ಷಗಳಲ್ಲಿ ವಹಿವಾಟು ಮುಂದುವರೆಸಿದ ಕಂಪೆನಿಯು ನಿವೇಶನ ಕೊಡಿಸುವುದಾಗಿ ಹೇಳಿ ಸಾರ್ವಜನಿಕರಿಂದ ಮುಂಗಡವಾಗಿ ತಲಾ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಪಡೆಯಿತು. ಆದರೆ ಹಣ ನೀಡಿದವರಿಗೆ ಈವರೆಗೂ ನಿವೇಶನ ಕೊಟ್ಟಿಲ್ಲ ಮತ್ತು ಹಣವನ್ನು ಸಹ ವಾಪಸ್ ನೀಡಿಲ್ಲ.
ಕಂಪೆನಿಯು ಬಿಡದಿ, ದೇವನಹಳ್ಳಿ, ಮೈಸೂರು ರಸ್ತೆ ಸುತ್ತಮುತ್ತ ಲೇಔಟ್ ನಿರ್ಮಿಸಿ ನಿವೇಶನ ನೀಡುವುದಾಗಿ ಹೇಳಿ ಜನರಿಂದ ಮುಂಗಡ ಹಣ ಪಡೆದಿತ್ತು. ಅಲ್ಲದೇ ಮೈಸೂರು ನಗರದಲ್ಲೂ ಇದೇ ರೀತಿ ಹಣ ಪಡೆದಿದೆ. ರಾಜ್ಯದ ಜನರಷ್ಟೇ ಅಲ್ಲದೆ ಮುಂಬೈ, ದೆಹಲಿ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಅನಿವಾಸಿ ಭಾರತೀಯರು ಸಹ ಈ ಕಂಪೆನಿಯಿಂದ ವಂಚನೆಗೊಳಗಾಗಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಸಿಸಿಬಿ ಪೊಲೀಸರು 2010ರ ಸೆಪ್ಟೆಂಬರ್‌ನಲ್ಲಿ ಕಂಪೆನಿಯ ಕಚೇರಿ ಮೇಲೆ ದಾಳಿ ನಡೆಸಿ ಕೆಲ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡರು. ಈ ವೇಳೆ ಕಂಪೆನಿಯ ಆಡಳಿತ ವರ್ಗವು, ಮುಂಗಡ ಹಣ ಕಟ್ಟಿದವರಿಗೆ ಮಾಸಿಕ ಕಂತುಗಳಲ್ಲಿ ಹಣ ಹಿಂದಿರುಗಿಸುವುದಾಗಿ ಪೊಲೀಸರಿಗೆ ಭರವಸೆ ನೀಡಿತ್ತು. ಆದರೆ ಈವರೆಗೂ ಹಣವನ್ನು ಹಿಂದಿರುಗಿಸಿಲ್ಲ. ‘ಐಶ್ವರ್ಯ ಪ್ರಾಜೆಕ್ಟ್ಸ್ ಕಂಪೆನಿ ವಿರುದ್ಧ ಪ್ರತಿನಿತ್ಯ ವಂಚನೆಯ ದೂರುಗಳು ಬರುತ್ತಿವೆ.
ಆದ್ದರಿಂದ ವಂಚನೆಯ ಪ್ರಮಾಣದ ಬಗ್ಗೆ ಈಗಲೇ ಏನು ಹೇಳಲಾಗುವುದಿಲ್ಲ. ರಾಜ್ಯದ ಜನರೇ ಈ ಕಂಪೆನಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವಂಚನೆಗೊಳಗಾಗಿದ್ದಾರೆ’ ಎಂದು ಸಿಸಿಬಿ ವಂಚನೆ ಮತ್ತು ದುರುಪಯೋಗ ದಳದ ಎಸಿಪಿ ಎಸ್.ಎಚ್.ದುಗ್ಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ಮಾಹಿತಿ ನಿರಾಕರಿಸಿದ ಪೊಲೀಸರು: ಈ ಕಂಪೆನಿ ವಿರುದ್ಧ ಮಹಾಲಕ್ಷ್ಮಿಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಮಹಾಲಕ್ಷ್ಮಿಪುರ ನಿವಾಸಿ ಜಿ.ಲಕ್ಷ್ಮಿಕಾಂತ್ ಎಂಬುವರು ಪ್ರಕರಣದ ತನಿಖಾ ಪ್ರಗತಿ ಕುರಿತು ವಿವರ ನೀಡುವಂತೆ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.
ಆದರೆ ಪೊಲೀಸ್ ಇಲಾಖೆಯು ಪ್ರಕರಣವು ತನಿಖಾ ಹಂತದಲ್ಲಿರುವುದರಿಂದ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಿದೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ: ‘ಐಶ್ವರ್ಯ ಪ್ರಾಜೆಕ್ಟ್ಸ್ ಕಂಪೆನಿಯು ಹೇಳಿಕೊಂಡಿರುವಂತೆ ನಿವೇಶನಕ್ಕಾಗಿ ಬೆಂಗಳೂರು ಸುತ್ತಮುತ್ತ ನಿಜವಾಗಿಯೂ ಜಮೀನು ಖರೀದಿಸಿದೆಯೇ ಎಂಬ ಬಗ್ಗೆ ಅನುಮಾನ ಮೂಡಿದೆ. ಈ ಸಂಬಂಧ ಪ್ರಕರಣದ ತನಿಖಾಧಿಕಾರಿಗಳು ಸಹ ಸೂಕ್ತ ಮಾಹಿತಿ ನೀಡುತ್ತಿಲ್ಲ. ಪೊಲೀಸರು ಕಂಪೆನಿಯ ಆಡಳಿತ ವರ್ಗದ ಯಾವುದೇ ವ್ಯಕ್ತಿಗಳನ್ನು ಬಂಧಿಸಿರುವ ಬಗ್ಗೆಯೂ ಮಾಹಿತಿ ಇಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ನಮ್ಮ ದೂರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಲಕ್ಷ್ಮಿಕಾಂತ್ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.