ADVERTISEMENT

ಪಠ್ಯಕ್ರಮದಲ್ಲಿ ಚಿತ್ರಕಲೆ ಅಡಕ ಶಿವರಾಮ ಕಾರಂತರ ಒಲವು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:25 IST
Last Updated 8 ಅಕ್ಟೋಬರ್ 2011, 19:25 IST

ಬೆಂಗಳೂರು: `ಸಾಹಿತಿ ಡಾ.ಶಿವರಾಮ ಕಾರಂತರು ಚಿತ್ರಕಲೆಯ ಬಗ್ಗೆ ವಿಪರೀತ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಚಿತ್ರಕಲೆಯನ್ನು ಪಠ್ಯವನ್ನಾಗಿ ಅಳವಡಿಸುವ ಬಗ್ಗೆಯೂ ಒಲವು ಹೊಂದಿದ್ದರು~ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಚ್.ಕೃಷ್ಣಯ್ಯ ಅವರು ನುಡಿದರು.

ನಗರದ ಸುಚಿತ್ರ ಕಲಾಕೇಂದ್ರವು ಬನಶಂಕರಿಯ `ಕಿ.ರಂ.ನುಡಿಮನೆ~ಯಲ್ಲಿ ಶನಿವಾರ ಏರ್ಪಡಿಸಿದ್ದ `ಶಿವರಾಮ ಕಾರಂತರು~ ಕುರಿತ ಉಪನ್ಯಾಸದಲ್ಲಿ ಮಾತನಾಡಿದ ಅವರು, `ಚಿತ್ರಕಲೆಗಳ ಸಂಗ್ರಹಕ್ಕಾಗಿ ಕರ್ನಾಟಕವಲ್ಲದೇ ಪಕ್ಕದ ರಾಜ್ಯಗಳನ್ನೂ ಸುತ್ತಿದ್ದರು. ಚಿಕಣಿ ಕಲೆ, ದಖನಿ ಕಲೆ, ರಜಪೂತ ಕಲೆ, ಯಕ್ಷಯಕ್ಷಿಯರ ಚಿತ್ರಕಲೆ, ವಿಜಾಪುರ ಜಿಲ್ಲೆಯ ಕಮತಗಿ ಗ್ರಾಮದ ರಾಗ ರಾಗಿಣಿಯರ ಚಿತ್ರಗಳು, ಅದೇ ಜಿಲ್ಲೆಯ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಚಿತ್ರಗಳನ್ನು ಅವರು ವೀಕ್ಷಿಸಿದ್ದರು. ನರಗುಂದ.

ನಿಪ್ಪಾಣಿ ರಾಜವಾಡೆಗಳಲ್ಲಿದ್ದ ಚಿತ್ರಗಳನ್ನೂ ಅಧ್ಯಯನ ಮಾಡಿದ್ದರು. ಆದ್ದರಿಂದಲೇ 1930ರಲ್ಲಿ ಭಾರತೀಯ ಚಿತ್ರಕಲೆ ಎಂಬ ಕೃತಿ ರಚನೆ ಮಾಡಿದರು. ಆಗಲೇ ಆ ಕೃತಿಯ 300 ಪ್ರತಿಗಳನ್ನು ಅಚ್ಚು ಹಾಕಿಸಿದ್ದರು~ ಎಂದು ಸ್ಮರಿಸಿದರು.

“ಕಾಲೇಜು ಮತ್ತು ವಿ.ವಿ. ಮಟ್ಟದಲ್ಲಿ ಚಿತ್ರಕಲೆಯನ್ನು ಪಠ್ಯವನ್ನಾಗಿಸಲು ಬಯಸಿದ್ದ ಅವರು, ಈ ಬಗ್ಗೆ 1975-76ರ ಸುಮಾರಿಗೆ ಬೆಂಗಳೂರು ವಿ.ವಿ.ಯಲ್ಲಿ ಉಪನ್ಯಾಸ ನೀಡಿದ ಸಂದರ್ಭದಲ್ಲಿ,  `ಶಿಕ್ಷಣ ಎಂದರೆ ಆರ್ಟ್ಸ್ ಶಿಕ್ಷಣ ಅಲ್ಲ. ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಆದರೆ ಚಿತ್ರಗಳು ಇನ್ನೂ ಅತ್ತ (ವಿ.ವಿ. ಪಠ್ಯದತ್ತ) ಸುಳಿದಿಲ್ಲ~ ಎಂದು ಮಾರ್ಮಿಕವಾಗಿ ನುಡಿದ್ದರು” ಎಂದರು.

`ಚಿತ್ರಕಲೆಯ ಜೊತೆಗೆ ಬಂಗಾಳದ ಶ್ರೇಷ್ಠ ಕಲಾಕಾರರಾದ ಅವನೀಂದ್ರನಾಥ ಠಾಕೂರ್, ನಂದಲಾಲ್ ಬಸು, ಅಸಿತ್‌ಕುಮಾರ್ ಹಲ್ದಾರ್ ಸೇರಿದಂತೆ ನಮ್ಮವರೇ ಆದ ವರ್ಣಶಿಲ್ಪಿ ವೆಂಕಟಪ್ಪ ಅವರ ಬಗ್ಗೆಯೂ ಲೇಖನಗಳನ್ನು ಬರೆದಿದ್ದಾರೆ. ದೃಶ್ಯಮಾಧ್ಯಮದ ಬಗ್ಗೆಯೂ ತಿಳಿವಳಿಕೆ ಹೊಂದಿದ್ದ ಕಾರಂತರು, ತಮ್ಮ ಛಾಯಾಚಿತ್ರ ತೆಗೆಯುವಾಗ ವಿಶೇಷ ಬೆಳಕನ್ನು ಅಳವಡಿಸುವುದನ್ನು ಇಷ್ಟಪಡುತ್ತಿರಲಿಲ್ಲ~ ಎಂದು ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.