ADVERTISEMENT

ಪತ್ರಿಕಾ ಮಂಡಳಿಯಡಿ ವಿದ್ಯುನ್ಮಾನ ಮಾಧ್ಯಮ ತನ್ನಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಬೆಂಗಳೂರು: `ವಿದ್ಯುನ್ಮಾನ ಮಾಧ್ಯಮಗಳನ್ನು ಪತ್ರಿಕಾ ಮಂಡಳಿ ವ್ಯಾಪ್ತಿಗೆ ತರುವ ಅಗತ್ಯವಿದೆ~ ಎಂದು ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ಮುಖ್ಯ ಪ್ರವರ್ತಕ ಮತ್ತು ಮಹಾಧ್ಯಕ್ಷ ಎಂ.ಬಿ.ಜಯರಾಮ್ ಅಭಿಪ್ರಾಯಪಟ್ಟರು.

ಮಾಧ್ಯಮ ಭಾರತಿ ಮತ್ತು ಭಾರತೀಯ ವಿದ್ಯಾಭವನ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಡಿ.ಯಶೋದಾ ಅವರ `ಸುದ್ದಿ ಸಂತೆ~, ನಿರಂಜನ ವಾನಳ್ಳಿ ಅವರ `ಬರವಣಿಗೆ ಒಂದು ಕಲೆ ಮತ್ತು ಪತ್ರಿಕಾ ಮಂಡಳಿ ಏನು, ಎತ್ತ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. `ಪ್ರಭಾವಿ ಆಗಿರುವ ವಿದ್ಯುನ್ಮಾನ ಮಾಧ್ಯಮವನ್ನು ಪತ್ರಿಕಾ ಮಂಡಳಿ ವ್ಯಾಪ್ತಿಗೆ ತರಬೇಕು ಅಥವಾ ಇದಕ್ಕಾಗಿಯೇ ಪ್ರತ್ಯೇಕ ಮಂಡಳಿ ಆರಂಭಿಸಬೇಕು~  ಎಂದರು.

ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ, ` ಪುಸ್ತಕಗಳು ಮಾರ್ಗದರ್ಶಿ ಇದ್ದಂತೆ, ಉತ್ತಮ ಬರಹಗಾರ ಆಗಬೇಕಾದರೆ ಹೆಚ್ಚು ಓದಬೇಕು. ಸುದ್ದಿ ಬರೆಯುವಾಗ ಎದುರಾಗುವ ವಿಲಕ್ಷಣ ಸಂದರ್ಭಗಳನ್ನು ಎದುರಿಸುವುದು ಹೇಗೆ. ಒತ್ತಡ ನಿವಾರಣೆ ಮತ್ತು ಬರವಣಿಗೆಯ ಬಗ್ಗೆ ವಾನಳ್ಳಿ ಚೆನ್ನಾಗಿ ಬರೆದಿದ್ದಾರೆ~ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್, ಮಾಧ್ಯಮ ಭಾರತಿ ನಿರ್ದೇಶಕ ಜಯರಾಮ ಅಡಿಗ ಉಪಸ್ಥಿತರಿದ್ದರು. ಭವನ್ಸ್ ಜರ್ನಲ್‌ನ ಪ್ರಧಾನ ಸಂಪಾದಕ ವಿ.ಎನ್.ನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ಲೋಕಾಯುಕ್ತ ಹಾಗೂ ವರ್ತಮಾನ ಮಾಧ್ಯಮ, ಪತ್ರಿಕಾ ಮಂಡಳಿ ಏನು ಎತ್ತ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿ ಏರ್ಪಡಿಸಲಾಗಿತ್ತು. `ಪ್ರಜಾವಾಣಿ~ಯ ಸಹಾಯಕ ಸಂಪಾದಕ ದಿನೇಶ್ ಅಮೀನ್ ಮಟ್ಟು, ಹಿರಿಯ ವರದಿಗಾರ್ತಿ ಸುಚೇತನಾ ನಾಯ್ಕ, ಪತ್ರಕರ್ತರಾದ ವೈ.ಗ.ಜಗದೀಶ್, ಪಿ.ರಾಜೇಂದ್ರ, ರುದ್ರಣ್ಣ ಹರ್ತಿಕೋಟೆ, ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ನಾರಾಯಣ ಮತ್ತಿತರರು ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.