ADVERTISEMENT

ಕೆಲಸ ಮಾಡುತ್ತಿದ್ದ ಜೈಲಿನಲ್ಲೇ ಬಂದಿಯಾದ!

ಕೈದಿಗಳಿಗೆ ಗಾಂಜಾ ತಂದುಕೊಟ್ಟ ಪ್ರಥಮ ದರ್ಜೆ ಬೋಧಕ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 20:49 IST
Last Updated 20 ಡಿಸೆಂಬರ್ 2018, 20:49 IST
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ   

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೂರು ವರ್ಷಗಳಿಂದ ಪ್ರಥಮ ದರ್ಜೆ ಬೋಧಕನಾಗಿದ್ದ ಬಿ.ಕುಮಾರಸ್ವಾಮಿ (32) ಎಂಬಾತ, ಕೈದಿಗಳಿಗೆ ಗಾಂಜಾ ಪೂರೈಸಿ ಈಗ ಅದೇ ಜೈಲಿನಲ್ಲಿ ತಾನೂ ಬಂದಿಯಾಗಿದ್ದಾನೆ!

ಆಗಸ್ಟ್ 21ರ ಬೆಳಿಗ್ಗೆ 8.45ಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದ ಕುಮಾರಸ್ವಾಮಿ, ಸಜಾಬಂದಿಗಳಾದ ಕೃಷ್ಣ ಅಲಿಯಾಸ್ ದಂಡುಪಾಳ್ಯ ಕೃಷ್ಣ ಹಾಗೂ ಮಂಜುನಾಥ ಎಂಬುವರಿಗೆ 100 ಗ್ರಾಂನ ಗಾಂಜಾ ಪೊಟ್ಟಣಗಳನ್ನು ಕೊಟ್ಟಿದ್ದ. ಈ ಬಗ್ಗೆ ಅಧಿಕಾರಿಗಳಿಗೆ ವಿಷಯ ಗೊತ್ತಾಗುತ್ತಿದ್ದಂತೆಯೇ ಕೆಲಸಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಬುಧವಾರ ಆತನನ್ನು ಹಿರಿಯೂರು ತಾಲ್ಲೂಕು ಹಾಲಮಾದೇನಹಳ್ಳಿ ಗ್ರಾಮದಲ್ಲಿ ಪತ್ತೆ ಮಾಡಲಾಯಿತು ಎಂದು ಪೊಲೀಸರು ಹೇಳಿದರು.

ತಪಾಸಣೆಗೆ ಒಳಪಡಲಿಲ್ಲ: ‘ಆ.20ರ ಸಂಜೆ ಕಾರಾಗೃಹದ ಸರ್ವರ್ ಕೊಠಡಿಗೆ ಹೋಗಿ ಕುಮಾರಸ್ವಾಮಿಯನ್ನು ಭೇಟಿಯಾಗಿದ್ದ ಕೃಷ್ಣ ಹಾಗೂ ಮಂಜುನಾಥ, ತಮಗೆ ಗಾಂಜಾ ತಂದು ಕೊಟ್ಟರೆ ಹಣ ನೀಡುವುದಾಗಿ ಆಮಿಷವೊಡ್ಡಿದ್ದರು. ಅದಕ್ಕೆ ಒಪ್ಪಿಕೊಂಡಿದ್ದ ಆತ, ಅದೇ ದಿನ ರಾತ್ರಿ ಹೊಸೂರು ರಸ್ತೆಯಲ್ಲಿ ಕೃಷ್ಣನ ಸಹಚರನೊಬ್ಬನಿಂದ 4 ಗಾಂಜಾ ಪೊಟ್ಟಣಗಳನ್ನು ಪಡೆದುಕೊಂಡಿದ್ದ’ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ಮರುದಿನ ಬೆಳಿಗ್ಗೆ 8.45ಕ್ಕೆ ಕರ್ತವ್ಯಕ್ಕೆ ಹಾಜರಾದ ಆತ, ಪ್ರವೇಶ ದ್ವಾರದ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ತಪಾಸಣೆಗೆ ಒಳಪಡದೆ ಜೈಲಿನೊಳಗೆ ಬಂದಿದ್ದ. ಸ್ವಲ್ಪ ಸಮಯದಲ್ಲೇ ಕೃಷ್ಣ ಹಾಗೂ ಮಂಜುನಾಥ ಸರ್ವರ್ ಕೊಠಡಿಗೆ ತೆರಳಿ ಆತನಿಂದ ಗಾಂಜಾ ಪೊಟ್ಟಣಗಳನ್ನು ಪಡೆದುಕೊಂಡಿದ್ದರು.’

‘ಕೈದಿಗಳಿಬ್ಬರು ಸರ್ವರ್ ಕೊಠಡಿಯಿಂದ ಹೊರಗೆ ಬಂದಿದ್ದನ್ನು ನೋಡಿ ಅನುಮಾನಗೊಂಡ ಇನ್ನೊಬ್ಬ ಸಿಬ್ಬಂದಿ ಶ್ರೀನಿವಾಸ್ ಭಜಂತ್ರಿ, ಇಬ್ಬರನ್ನೂ ಕರೆದು ತಪಾಸಣೆ ನಡೆಸಿದ್ದರು. ಆಗ ಗಾಂಜಾ ಪೊಟ್ಟಣ ಪತ್ತೆಯಾಗಿದ್ದರಿಂದ ಮುಖ್ಯ ಅಧೀಕ್ಷಕ ಸೋಮಶೇಖರ್ ಅವರಿಗೆ ವಿಷಯ ಮುಟ್ಟಿಸಿದ್ದರು. ಅವರು ಕೈದಿಗಳನ್ನು ಕರೆಸಿ ವಿಚಾರಿಸಿದಾಗ ಕುಮಾರಸ್ವಾಮಿಯ ಹೆಸರು ಹೊರಬಿದ್ದಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಸರ್ವರ್ ಕೊಠಡಿಯಲ್ಲಿ ಗಾಂಜಾ ಹೇಗೆ ಬಂತೋ ನನಗೆ ಗೊತ್ತಿಲ್ಲ. ನಾನು ತಪ್ಪು ಮಾಡಿಲ್ಲ. ಬೇಕಿದ್ದರೆ ತನಿಖೆ ಮಾಡಿಸಿ’ ಎಂದು ಕುಮಾರಸ್ವಾಮಿ ಹೇಳಿದ್ದರಿಂದ ಸೋಮಶೇಖರ್ ಅವರು ಪರಪ್ಪನ ಅಗ್ರಹಾರ ಠಾಣೆಗೆ ದೂರು ಕೊಟ್ಟಿದ್ದರು. ಆದರೆ, ಮರುದಿನದಿಂದಲೇ ಕೆಲಸಕ್ಕೆ ಗೈರಾಗಿದ್ದರಿಂದ ಆತನೇ ಆರೋಪಿ ಎಂಬುದು ಖಚಿತವಾಗಿತ್ತು.

**

ಜಾಮೀನು ಅರ್ಜಿ ತಿರಸ್ಕೃತ

‘ಬಂಧನದ ಭೀತಿಯಲ್ಲಿದ್ದ ಆತ, ಜಾಮೀನು ಕೋರಿ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ‘ಆರೋಪಿ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ’ ಎಂದು ನ್ಯಾಯಾಧೀಶರು ಆ ಅರ್ಜಿಯನ್ನು ತಿರಸ್ಕರಿಸಿದ್ದರು. ಆ ನಂತರ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.