ADVERTISEMENT

ಪರಿಸರ ಸ್ನೇಹಿಯಾಗಿ ಸರ್ಕಾರಿ ಶಾಲೆ- ಚಿಂತನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 19:30 IST
Last Updated 21 ಫೆಬ್ರುವರಿ 2011, 19:30 IST

ಮಹದೇವಪುರ: ‘ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳನ್ನು ಪರಿಸರ ಸ್ನೇಹಿ ಶಾಲೆಗಳನ್ನಾಗಿ ಮಾಡಲು ಇಕೊ ವಾಚ್ ಸಂಸ್ಥೆ ಚಿಂತಿಸಿದ್ದು, ಈ ನಿಟ್ಟಿನಲ್ಲಿ ಇಮ್ಮಡಿಹಳ್ಳಿಯ ಶಾಲೆಯನ್ನು ದತ್ತು ಪಡೆದು ಮಕ್ಕಳಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸಲಾಗುವುದು’ ಎಂದು ಪರಿಸರವಾದಿ ಸುರೇಶ್ ಹೆಬ್ಳೀಕರ್ ಹೇಳಿದರು.

ಇಮ್ಮಡಿಹಳ್ಳಿ ಸರ್ಕಾರಿ ಶಾಲೆಯಲ್ಲಿ ಇತ್ತೀಚೆಗೆ ಸ್ಯಾಫ್ ಲ್ಯಾಬ್ ಸಂಸ್ಥೆ ಮತ್ತು ಇಕೊ ವಾಚ್ ಸಂಸ್ಥೆ ಹಮ್ಮಿಕೊಂಡಿದ್ದ ಹಸಿರು ಶಾಲೆ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಳೆ ನೀರು ಸಂಗ್ರಹ ಹಾಗೂ ಸೌರಶಕ್ತಿಯನ್ನು ಸಮರ್ಪಕವಾಗಿ ಬಳಸುವ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲಾಗುವುದು. ಅಲ್ಲದೇ ಈ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ತೋರಿಸಿ ಮಾಹಿತಿ ನೀಡಲಾಗುವುದು ಎಂದರು.

‘ಇಮ್ಮಡಿಹಳ್ಳಿ ಶಾಲೆಯ ವ್ಯಾಪ್ತಿ 10 ಎಕರೆ ಇದ್ದು, ಇಲ್ಲಿ ಮಳೆ ನೀರು ಸಂಗ್ರಹ ಸಾಧನವನ್ನು ಅಳವಡಿಸಲಾಗುವುದು. ಹಾಗೆಯೇ ಗಿಡ ನೆಡುವ ಮನೋಭಾವ ಮೂಡಿಸುವ ಸಲುವಾಗಿ ಮುಂದಿನ ತಿಂಗಳು ವಿದ್ಯಾರ್ಥಿಗಳಿಂದಲೇ ಶಾಲೆಯ ಆವರಣದಲ್ಲಿ 500 ಸಸಿಗಳನ್ನು ನೆಡಲಾಗುವುದು’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಾಲೆಯನ್ನು ಪ್ಲಾಸ್ಟಿಕ್ ನಿಷೇಧಿತ ವಲಯವನ್ನಾಗಿ ಪರಿವರ್ತಿಸಲು ನಿರ್ಧರಿಸಲಾಯಿತು. ಸ್ಯಾಫ್ ಲ್ಯಾಬ್ ಕಂಪೆನಿ ವತಿಯಿಂದ ಶಾಲೆಯಲ್ಲಿ ಉಚಿತವಾಗಿ ಸೌರಶಕ್ತಿ ದೀಪಗಳನ್ನು ಅಳವಡಿಸಲಾಯಿತು. ಶಾಸಕ ಅರವಿಂದ ಲಿಂಬಾವಳಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.