ADVERTISEMENT

ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 20:16 IST
Last Updated 4 ಡಿಸೆಂಬರ್ 2012, 20:16 IST

ಬೆಂಗಳೂರು: ಮೂಡಲಪಾಳ್ಯ ಸಮೀಪದ ಸಂಜೀವಿನಿನಗರದಲ್ಲಿ ಸೋಮವಾರ ಸಂಜೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಂಜೀವಿನಿನಗರ ಮೂರನೇ ಅಡ್ಡರಸ್ತೆ ನಿವಾಸಿ ಪರಶಿವಮೂರ್ತಿ ಎಂಬುವರ ಪುತ್ರ ವಿನಯ್‌ಕುಮಾರ್ (17) ಆತ್ಮಹತ್ಯೆ ಮಾಡಿಕೊಂಡವನು. ಆತ ಶೇಷಾದ್ರಿಪುರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ.

ಕನಕಪುರ ರಸ್ತೆಯಲ್ಲಿ ಹೋಟೆಲ್ ಇಟ್ಟುಕೊಂಡಿರುವ ಪರಶಿವಮೂರ್ತಿ ಅವರಿಗೆ ಇಬ್ಬರು ಗಂಡು ಮಕ್ಕಳು. ಹಿರಿಯ ಮಗನಾದ ವಿನಯ್‌ಕುಮಾರ್, ಕುಟುಂಬ ಸದಸ್ಯರು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಚಂದ್ರಾಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧನ: ಚೀಟಿ ವ್ಯವಹಾರದಲ್ಲಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದ ಆರೋಪದ ಮೇಲೆ ತಂದೆ ಮತ್ತು ಮಗನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ಲಕ್ಕಸಂದ್ರ 16ನೇ ಅಡ್ಡರಸ್ತೆಯ ನಾಗರಾಜ್ (50) ಮತ್ತು ಅವರ ಮಗ ವಿಕ್ರಮ್‌ರೆಡ್ಡಿ (21) ಬಂಧಿತರು. ನಾಗರಾಜ್, ಪತ್ನಿ ಅನುಸೂಯಮ್ಮ ಮತ್ತು ಮಗನ ಜತೆ ಸೇರಿಕೊಂಡು 15 ವರ್ಷಗಳಿಂದ ಚೀಟಿ ವ್ಯವಹಾರ ಮಾಡುತ್ತಿದ್ದರು. ನೆರೆಹೊರೆಯವರಿಂದ ಲಕ್ಷಾಂತರ ರೂಪಾಯಿ ಹಣ ಕಟ್ಟಿಸಿಕೊಂಡಿದ್ದ ಅನುಸೂಯಮ್ಮ ದಂಪತಿ, ಹಣ ಹಿಂದಿರುಗಿಸದೆ ವಂಚಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಲಕ್ಕಸಂದ್ರ ನಿವಾಸಿ ರವೀಂದ್ರ ಎಂಬುವರು ದೂರು ಕೊಟ್ಟಿದ್ದರು. ಅಲ್ಲದೇ, ದಂಪತಿಯಿಂದ ವಂಚನೆಗೊಳಗಾಗಿದ್ದ 20ಕ್ಕೂ ಹೆಚ್ಚು ಸ್ಥಳೀಯರು ದೂರು ದಾಖಲಿಸಿದ್ದರು. ಈ ದೂರುಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಅನುಸೂಯಮ್ಮ ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.