ADVERTISEMENT

ಪೌರಕಾರ್ಮಿಕರ ಸಮಸ್ಯೆ: ಮಾತುಕತೆಗೆ ಸಿಎಂ ಆಹ್ವಾನ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 19:30 IST
Last Updated 14 ಏಪ್ರಿಲ್ 2012, 19:30 IST

ಬೆಂಗಳೂರು:  `ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಮನಸ್ಸಿನ ನೋವು ಅರಿವಾಗಿದೆ. ಸಮಸ್ಯೆ ಪರಿಹಾರಕ್ಕೆ ಪೌರಕಾರ್ಮಿಕರು ತಮ್ಮ ಬಳಿ ಮುಕ್ತವಾಗಿ ಮಾತುಕತೆಗೆ ಬರಲಿ. ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಬದ್ಧ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಭರವಸೆ ನೀಡಿದರು.

ಬಿಬಿಎಂಪಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಶನಿವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 121ನೇ ಜನ್ಮದಿನಾಚರಣೆ ಹಾಗೂ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ಪೌರಕಾರ್ಮಿಕರು ಕೇಳುತ್ತಿ ರುವುದು ಭಿಕ್ಷೆ ಅಲ್ಲ. ಅವರ ಬೇಡಿಕೆ ಈಡೇರಿಸುವುದು ನಮ್ಮ ಜವಾಬ್ದಾರಿ. ಹಂತ ಹಂತವಾಗಿ ಪೌರಕಾರ್ಮಿಕರ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗು ವುದು. ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯನ್ನು ಪೌರಕಾರ್ಮಿಕರಿಗೂ ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗಿದೆ~ ಎಂದು ಅವರು ತಿಳಿಸಿದರು.

ಪೌರಕಾರ್ಮಿಕರು ಎದುರಿ ಸುತ್ತಿ ರುವ ಬವಣೆಗಳ ಬಗ್ಗೆ ಪೌರಕಾರ್ಮಿಕ ಎನ್. ನಾರಾಯಣ್ ಮಾಹಿತಿ ನೀಡಿ, `ಪೌರಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಈಡೇರಿಸಲು ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಒಂದೂ ಬಾರಿಯೂ ಬಿಬಿಎಂಪಿ ಸ್ಪಂದಿಸಿಲ್ಲ~ ಎಂದು ದೂರಿದರು.

`ಬಿಬಿಎಂಪಿಯಲ್ಲಿರುವ ಗುತ್ತಿಗೆ ಕಾರ್ಮಿಕರಿಗೆ ತಿಂಗಳಿಗೆ ನೀಡುವುದು ರೂ 2,300. ಎರಡು ವರ್ಷಗಳ ಹಿಂದೆಯೇ ಪೌರಕಾರ್ಮಿಕರಿಗೆ ತಿಂಗಳಿಗೆ ರೂ 6900 ನೀಡಬೇಕು ಎಂದು ಸರ್ಕಾರಿ ಆದೇಶ ಆಗಿದೆ. ಬಿಬಿಎಂಪಿ ಆದೇಶವನ್ನು ಜಾರಿಗೆ ತಂದಿಲ್ಲ. ಈ ಬಗ್ಗೆ ಧರಣಿ ನಡೆಸಿದರೆ ಪೊಲೀಸ್ ಅಧಿಕಾರಿಗಳನ್ನು ಬಿಟ್ಟು ಓಡಿಸಲಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಪೌರಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪಮೇಯರ್ ಹರೀಶ್ ಮಾತನಾಡಿ, `ಅಂಬೇಡ್ಕರ್ ಅವರನ್ನು ಒಂದೇ ಜಾತಿಗೆ ಸೀಮಿತ ಮಾಡಬಾರದು. ಅವರನ್ನು ಪ್ರತಿದಿನ ನಾವು ನೆನಪಿಸಿಕೊಳ್ಳಬೇಕು~ ಎಂದರು.

ಈ ಸಂದರ್ಭ 160 ಪೌರಕಾರ್ಮಿಕರಿಗೆ ಪ್ರಶಸ್ತಿ ನೀಡಲಾಯಿತು. ಸಾಂಕೇತಿಕವಾಗಿ ಆಂಜನೇಯ, ಅನಿತಮ್ಮ, ಲಿಂಗಪ್ಪ, ಓಬಳೇಶ್, ಶ್ರೀರಾಮುಲು ಅವರಿಗೆ ಮುಖ್ಯಮಂತ್ರಿ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ರೂ. 5 ಸಾವಿರ ಒಳಗೊಂಡಿದೆ. ನಿವೃತ್ತ ಪೌರ ಕಾರ್ಮಿಕರನ್ನು ಇದೇ ಸಂದರ್ಭದಲ್ಲಿ ಗೌರವಿ ಲಾಯಿತು.
ಶಾಸಕ ಡಾ.ಹೇಮಚಂದ್ರ ಸಾಗರ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಶಾರದಮ್ಮ, ಆಡಳಿತ ಪಕ್ಷದ ನಾಯಕ ನಂಜುಂಡಪ್ಪ, ವಿರೋಧ ಪಕ್ಷದ ನಾಯಕರಾದ ಉದಯಶಂಕರ್, ಪದ್ಮನಾಭ ರೆಡ್ಡಿ, ಮಾಜಿ ಮೇಯರ್ ನಟರಾಜ್, ಪಾಲಿಕೆ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ, ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಬಿಡಿಎ ಆಯುಕ್ತ ಭರತ್‌ಲಾಲ್ ಮೀನಾ ಉಪಸ್ಥಿತರಿದ್ದರು.


ಸಿಎಂ ಅಸಮಾಧಾನ
ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ವಿಧಾನಸೌಧದ ಬಳಿ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಸಂದರ್ಭ ದಲಿತ ಸಂಘಟನೆಯ ಮುಖಂಡರು ಧಿಕ್ಕಾರ ಕೂಗಿದ್ದಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ತೀವ್ರ ಅಸಮಾಧಾನ ಸೂಚಿಸಿದರು.

`ಧಿಕ್ಕಾರ ಕೂಗಲು ಬೇರೆ ದಿನಗಳು ಇವೆ. ಅಂಬೇಡ್ಕರ್ ಜಯಂತಿ ಹೋರಾಟದ ದಿನ ಅಲ್ಲ, ಗೌರವ ಸಲ್ಲಿಸುವ ದಿನ. ಆ ದಿನವೇ ಪ್ರತಿರೋಧ ವ್ಯಕ್ತಪಡಿಸಬಾರದು. ಧಿಕ್ಕಾರ ಕೂಗಿ ಮಹಾನ್ ಚೇತನಕ್ಕೆ ಅವಮಾನ ಮಾಡಲಾಗಿದೆ~ ಎಂದು ಅವರು ಸಮಾರಂಭದಲ್ಲಿ ಅಸಮಾಧಾನ ಸೂಚಿಸಿದರು.

ನೇಮಕಾತಿಗೆ ಸೂಚನೆ
`ಬಿಬಿಎಂಪಿಯಲ್ಲಿ 12 ಸಾವಿರ ಪೌರಕಾರ್ಮಿಕರು ಇದ್ದಾರೆ. ಮತ್ತೆ ನಾಲ್ಕು ಸಾವಿರ ಪೌರಕಾರ್ಮಿಕರ ನೇಮಕಕ್ಕೆ ಸರ್ಕಾರದ ಒಪ್ಪಿಗೆ ಸಿಕ್ಕಿದೆ. ನೇಮಕಕ್ಕೆ ಆಯುಕ್ತರು ಕೂಡಲೇ ಕ್ರಮ ಕೈಗೊಳ್ಳಬೇಕು~ ಎಂದು ಮೇಯರ್ ಶಾರದಮ್ಮ ಸೂಚಿಸಿದರು.

`ನಾಲ್ಕು ಸಾವಿರ ಪೌರ ಕಾರ್ಮಿಕರ ನೇಮಕ ಸಂಬಂಧ ಬಿಬಿಎಂಪಿ ಆಯುಕ್ತರು ಕಡತ ವನ್ನು ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸಿದ್ದಾರೆ. ರಾಜ್ಯ ಸರ್ಕಾರ ಪೌರಕಾರ್ಮಿಕರ ನೇಮಕಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು~ ಎಂದು ವಿರೋಧ ಪಕ್ಷದ ನಾಯಕ ಉದಯಶಂಕರ್ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT