ADVERTISEMENT

ಪ್ರತ್ಯೇಕ ಪ್ರಕರಣ:ಮೂವರ ಆತ್ಮಹತ್ಯೆ

ಸ್ನೇಹಿತೆ ಸಾವಿನ ಖಿನ್ನತೆಯಿಂದ ವಿದ್ಯಾರ್ಥಿನಿ ಆತ್ಮಹತ್ಯೆ * ನೇಣಿಗೆ ಶರಣಾದ ಮೆಟ್ರೊ ನೌಕರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 19:58 IST
Last Updated 5 ಅಕ್ಟೋಬರ್ 2017, 19:58 IST

ಬೆಂಗಳೂರು: ಶ್ರೀರಾಂಪುರ, ಯಶವಂತಪುರ, ಕಾಮಾಕ್ಷಿಪಾಳ್ಯ‌ ಠಾಣೆಗಳ ವ್ಯಾಪ್ತಿಯಲ್ಲಿ ಬುಧವಾರ ಹಾಗೂ ಗುರುವಾರ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಯುವತಿ ಸೇರಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಪ್ತ ಸ್ನೇಹಿತೆಯ ಸಾವಿನ ನಂತರ ಖಿನ್ನತೆಗೆ ಒಳಗಾಗಿದ್ದ ಭುವನೇಶ್ವರಿ (24) ಎಂಬುವರು ಬುಧವಾರ ಸಂಜೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸೆಕ್ಯುರಿಟಿ ಗಾರ್ಡ್ ಜಗನ್‌ಮೂರ್ತಿ ಎಂಬುವರ ಮಗಳಾದ ಭುವನೇಶ್ವರಿ, ಶೇಷಾದ್ರಿಪುರ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದಿದ್ದರು. ಬುಧವಾರ ಸಂಜೆ 5 ಗಂಟೆ ಸುಮಾರಿಗೆ ತಾಯಿ ರಾಣಿ ಅವರು ತರಕಾರಿ ತರಲು ಮಾರುಕಟ್ಟೆಗೆ ಹೋಗಿದ್ದಾಗ ನೇಣು ಹಾಕಿಕೊಂಡಿದ್ದಾರೆ. 6.30ರ ಸುಮಾರಿಗೆ ತಾಯಿ ಮನೆಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ಮಗಳ ಆಪ್ತ ಸ್ನೇಹಿತೆ ರಶ್ಮಿ ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಯನ್ನು ತುಂಬ ಹಚ್ಚಿಕೊಂಡಿದ್ದ ಭುವನೇಶ್ವರಿ, ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದಳು. ರಾತ್ರಿಯೆಲ್ಲ ಆಕೆಯ ಹೆಸರನ್ನೇ ಕನವರಿಸುತ್ತಿದ್ದಳು. ಅದೇ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಮೃತರ ಪೋಷಕರು ಹೇಳಿಕೆ ಕೊಟ್ಟಿರುವುದಾಗಿ ಶ್ರೀರಾಂಪುರ ಪೊಲೀಸರು ತಿಳಿಸಿದರು.

ಬೆಂಕಿ ಹಚ್ಚಿಕೊಂಡ ಗೃಹಿಣಿ: ಯಶವಂತಪುರ ಸಮೀಪದ ಎಲ್‌.ಎನ್‌.ಕಾಲೊನಿಯಲ್ಲಿ ಗುರುವಾರ ಬೆಳಗಿನ ಜಾವ ವೀಣಾ (31) ಎಂಬುವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೀಣಾ ಅವರು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಎಂಜಿನಿಯರ್ ಶಿವಲಿಂಗಪ್ಪ ಎಂಬುವರನ್ನು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಎರಡು ವರ್ಷದ ಗಂಡು ಮಗು ಹಾಗೂ 9 ತಿಂಗಳ ಹೆಣ್ಣು ಮಗುವಿದೆ.

ಬೆಳಿಗ್ಗೆ 5.30ರ ಸುಮಾರಿಗೆ ಅಡುಗೆ ಕೋಣೆಯಲ್ಲಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡಿರುವ ವೀಣಾ, ನಂತರ ನಡುಮನೆಗೆ ಬಂದು ಬೆಂಕಿ ಹಚ್ಚಿಕೊಂಡಿದ್ದಾರೆ. ಪತ್ನಿಯ ಚೀರಾಟ ಕೇಳಿ ಎಚ್ಚರಗೊಂಡ ಶಿವಲಿಂಗಪ್ಪ, ನೀರೆರಚಿ ಬೆಂಕಿ ನಂದಿಸಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ವೀಣಾ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಯಶವಂತಪುರ ಪೊಲೀಸರು ತಿಳಿಸಿದ್ದಾರೆ.

ಮೆಟ್ರೊ ನೌಕರ ಆತ್ಮಹತ್ಯೆ: ಸುಂಕದಕಟ್ಟೆಯ ಮೆಟ್ರೊ ವಸತಿ ಸಮುಚ್ಚಯದಲ್ಲಿ ಬುಧವಾರ ರಾತ್ರಿ ಮೆಟ್ರೊ ನೌಕರ ಸಂತೋಷ್ (25) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನವರಾದ ಸಂತೋಷ್, ಮೂರು ವರ್ಷಗಳಿಂದ ಮೆಟ್ರೊದ ಮೆಕ್ಯಾನಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ತಮ್ಮ ಕೊಠಡಿಯಲ್ಲೇ ನೇಣು ಹಾಕಿಕೊಂಡಿದ್ದು, ಗುರುವಾರ ಬೆಳಿಗ್ಗೆ ಸ್ನೇಹಿತ ಮನೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

‘ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾರದೆ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಸಹೋದ್ಯೋಗಿಗಳು ಆರೋಪಿಸಿದ್ದಾರೆ. ಆದರೆ, ಅವರ ಪೋಷಕರು ಯಾರ ಮೇಲೂ ಆರೋಪ ಮಾಡಿಲ್ಲ. ಹೀಗಾಗಿ, ಅಸಹಜ ಸಾವು ಎಂದು ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ’ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.