ADVERTISEMENT

ಬಸವ ಚೈತನ್ಯ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 19 ಮೇ 2018, 19:37 IST
Last Updated 19 ಮೇ 2018, 19:37 IST
ಸಂಜೀವ ಯಲ್ಲಪ್ಪ ಉಪ್ಪಾರ, ಎಂ.ತಿಮ್ಮಯ್ಯ, ಪಿ.ಮಲ್ಲಕಾರ್ಜುನಪ್ಪ, ನಾಗಣ್ಣ ಎಸ್‌.ಹಳ್ಳಿ ಅವರಿಗೆ ಮುಖ್ಯಮಂತ್ರಿ ಚಂದ್ರು ಅವರು ಬಸವ ಚೈತನ್ಯ ಪ್ರಶಸ್ತಿ ಪ್ರದಾನ ಮಾಡಿದರು. ಎಂ.ಪುಟ್ಟರಾಜು, ಡಾ.ಆರ್‌.ಕೆ. ನಲ್ಲೂರು ಪ್ರಸಾದ್‌, ಪ್ರೊ.ಎಲ್‌.ಎನ್‌.ಮುಕುಂದರಾಜ್‌ ಇದ್ದರು    –ಪ್ರಜಾವಾಣಿ ಚಿತ್ರ
ಸಂಜೀವ ಯಲ್ಲಪ್ಪ ಉಪ್ಪಾರ, ಎಂ.ತಿಮ್ಮಯ್ಯ, ಪಿ.ಮಲ್ಲಕಾರ್ಜುನಪ್ಪ, ನಾಗಣ್ಣ ಎಸ್‌.ಹಳ್ಳಿ ಅವರಿಗೆ ಮುಖ್ಯಮಂತ್ರಿ ಚಂದ್ರು ಅವರು ಬಸವ ಚೈತನ್ಯ ಪ್ರಶಸ್ತಿ ಪ್ರದಾನ ಮಾಡಿದರು. ಎಂ.ಪುಟ್ಟರಾಜು, ಡಾ.ಆರ್‌.ಕೆ. ನಲ್ಲೂರು ಪ್ರಸಾದ್‌, ಪ್ರೊ.ಎಲ್‌.ಎನ್‌.ಮುಕುಂದರಾಜ್‌ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಖಜಾಂಚಿ ಪಿ.ಮಲ್ಲಿಕಾರ್ಜುನಪ್ಪ, ಎಫ್‌ಕೆಸಿಸಿಐ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಗಾಯಕ ಸಂಜೀವ ಯಲ್ಲಪ್ಪ ಉಪ್ಪಾರ, ಸಮಾಜ ಸೇವಕ ನಾಗಣ್ಣ ಎಸ್‌.ಹಳ್ಳಿ  ಅವರಿಗೆ ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನ ‘ಬಸವ ಚೈತನ್ಯ ಪ್ರಶಸ್ತಿ’ ನೀಡಿ ಗೌರವಿಸಿತು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಚಂದ್ರು ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿಗೆ ಭಾಜನರಾಗಿರುವ ದೊರೆಸ್ವಾಮಿ ಅವರು ಸಮಾರಂಭಕ್ಕೆ ಬಂದಿರಲಿಲ್ಲ.

‘ಇಲ್ಲಿ ಪ್ರಶಸ್ತಿ ಪಡೆದ ನೀವೇ ನಿಜವಾದ ರಾಷ್ಟ್ರಪ್ರೇಮಿಗಳು. ಬೆಳಿಗ್ಗೆಯಿಂದ ರಾಜಕೀಯ ಚದುರಂಗದಾಟ ನೋಡಿದ ಮೇಲೆ ಇಲ್ಲಿನ ವಾತಾವರಣ ಮನಸ್ಸಿಗೆ ಹಿತ ನೀಡಿದೆ’ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

ADVERTISEMENT

‘ಪ್ರಜಾಪ್ರಭುತ್ವಕ್ಕೆ ಇಂದು ಕೆಟ್ಟ ದಿನ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಾಷ್ಟ್ರಗೀತೆಗೆ ಗೌರವ ಕೊಡುವ ಸೌಜನ್ಯ ತೋರಲಿಲ್ಲ. ಸಂವಿಧಾನ ಬದಲಿಸುತ್ತೇವೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದ ಪಕ್ಷದವರು ಇಂದು ಅಧಿಕಾರ, ದುಡ್ಡಿನ ರಾಜಕಾರಣ ಮಾಡುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ’ ಎಂದು ಟೀಕಿಸಿದರು.

‘ದೊರೆಸ್ವಾಮಿ ಅವರು ಯಾವುದೇ ಆಮಿಷಗಳಿಗೆ ಬಲಿಯಾಗದೆ ಬದುಕಿದ್ದಾರೆ. ಸಂಪ್ರದಾಯ, ಮೌಢ್ಯ ಮೀರಿ ನಿಂತು ಬರೆಯುವವರು ನಿಜವಾದ ಕವಿಗಳು’ ಎಂದು ಪಿ. ಮಲ್ಲಿಕಾರ್ಜುನಪ್ಪ ಹೇಳಿದರು.

‘ಅಲ್ಪಸಂಖ್ಯಾತ ಸಮುದಾಯವನ್ನು ಗುರಿ ಮಾಡಿ ಕೆಟ್ಟ ರಾಜಕೀಯ ಮಾಡಲಾಗುತ್ತಿದೆ. ಇದನ್ನು ನಾವು ಸಹಿಸಬಾರದು. ರಾಜಕಾರಣಿಗಳ ವಿರುದ್ಧದ ಅಸಹನೆ ಪ್ರಜಾಪ್ರಭುತ್ವದ ವಿರುದ್ಧದ ಅಸಹನೆಯಾಗಬಾರದು ಎಂಬ ಉದ್ದೇಶದಿಂದ ನಾವು ತಾಳ್ಮೆ ವಹಿಸಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.