ADVERTISEMENT

ಬಿಎಚ್‌ಇಎಲ್‌ಗೆ 250 ಕೋಟಿ ರೂ ದಂಡ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2012, 19:30 IST
Last Updated 11 ಆಗಸ್ಟ್ 2012, 19:30 IST

ರಾಯಚೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) 250 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯದ 8ನೇ ಘಟಕದ  ಕಾರ್ಯನಿರ್ವಹಣೆಯ ಮೇಲುಸ್ತುವಾರಿ ವಹಿಸಿಕೊಂಡಿರುವ ಭಾರತ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್(ಬಿಎಚ್‌ಇಎಲ್)ಗೆ 250 ಕೋಟಿ ರೂಪಾಯಿ ದಂಡ ವಿಧಿಸಲು ಸರ್ಕಾರ ನೋಟಿಸ್ ಜಾರಿ ಮಾಡಿದೆ ಎಂದು ರಾಜ್ಯ ಇಂಧನ ಖಾತೆ ಸಚಿವ ಶೋಭಾ ಕರಂದ್ಲಾಜೆ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 8ನೇ ಘಟಕವು ಒಂದು ವರ್ಷದಿಂದ ನಿತ್ಯ 250 ಮೆಗಾವಾಟ್ ವಿದ್ಯುತ್ ಖೋತಾಕ್ಕೆ ಕಾರಣವಾಗಿದೆ. ಈ ಘಟಕದ ನಿರ್ಮಾಣದಲ್ಲಿ ತಾಂತ್ರಿಕ ದೋಷಕ್ಕೆ ಬಿಎಚ್‌ಇಎಲ್ ಕಂಪೆನಿಯೇ  ಹೊಣೆಯಾಗಿದೆ ಎಂದು ಆಪಾದಿಸಿದರು.

ಘಟಕದ ನಿರ್ಮಾಣದ ತಂತ್ರಿಕ ದೋಷಕ್ಕೆ ಬಿಎಚ್‌ಇಎಲ್ ಕಂಪೆನಿಯ ಜವಾಬ್ದಾರಿಯಾಗಿರುವುದರಿಂದ ಸರ್ಕಾರ 250 ಕೋಟಿ ದಂಡ ವಿಧಿಸಿದೆ. ಅಲ್ಲದೇ ಘಟಕದ ದುರಸ್ತಿ ಕಾರ್ಯವನ್ನು ಸ್ವಂತ ವೆಚ್ಚದಲ್ಲಿ ಮಾಡಿ 2ತಿಂಗಳಲ್ಲಿ ವಿದ್ಯುತ್ ಉತ್ಪಾದನೆಗೆ  ಸೂಚನೆ ನೀಡಲಾಗಿದೆ ಎಂದರು.

ಒಂದೂವರೆ ವರ್ಷದಿಂದ ವಿದ್ಯುತ್ ನಷ್ಟವನ್ನು ಬಿಎಚ್‌ಇಎಲ್ ಕಂಪೆನಿ ತುಂಬಿ ಕೊಡಲು ನೋಟಿಸ್ ನೀಡಲಾಗಿದೆ. ಬಳ್ಳಾರಿಯ ವಿದ್ಯುತ್ ಉತ್ಪಾದನೆಯ 3ನೇ ಘಟಕ, ಯರಮರಸ್‌ನ ಥರ್ಮಲ್ ಘಟಕ ನಿರ್ಮಾಣವನ್ನು ಕಂಪೆನಿಗೆವಹಿಸಿಕೊಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.