ADVERTISEMENT

ಬಿಎಚ್‌ಇಎಲ್‌ನಿಂದ ಸೌರ ವಿದ್ಯುತ್ ಸ್ಥಾವರ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:30 IST
Last Updated 6 ಮಾರ್ಚ್ 2012, 19:30 IST

ಬೆಂಗಳೂರು: ಲಕ್ಷದ್ವೀಪದ ವಿವಿಧ ದ್ವೀಪಗಳಲ್ಲಿ 1.9 ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡಿದ್ದ ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, 1.1 ಮೆಗಾವಾಟ್ ಸಾಮರ್ಥ್ಯದ ಘಟಕದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ.

ಲಕ್ಷದ್ವೀಪದ ಕಾವರಟ್ಟಿ ದ್ವೀಪದಲ್ಲಿ ಡೀಸೆಲ್ ವಿದ್ಯುತ್ ಯೋಜನೆಯೊಂದಿಗೆ 760 ಕಿಲೋವಾಟ್ ಸಾಮರ್ಥ್ಯದ ಘಟಕದ  ಜೊತೆಗೆ ಆಂಡ್ರಾಟ್ ದ್ವೀಪದಲ್ಲಿ 320 ಕಿಲೋವಾಟ್‌ನ ಸೌರ ವಿದ್ಯುತ್ ಘಟಕವನ್ನು ಸ್ಥಾಪಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಅವಧಿಯಲ್ಲಿ ಇಲ್ಲಿಯವರೆಗೆ ದೇಶದ ವಿವಿಧ ಕಡೆಗಳಲ್ಲಿ 13 ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕವನ್ನು ಬಿಎಚ್‌ಇಎಲ್ ಸ್ಥಾಪಿಸಿದೆ.

ಬಿಎಚ್‌ಇಎಲ್‌ನ ವಿದ್ಯುನ್ಮಾನ ವಿಭಾಗವು ರಾಜ್ಯದ ರಾಯಚೂರು ಬಳಿಯ ಯಾಪಲದಿನ್ನಿ ಗ್ರಾಮದಲ್ಲಿ ಮೂರು ಮೆಗಾವಾಟ್, ರಾಜಸ್ತಾನದಲ್ಲಿ ಐದು ಮೆಗಾವಾಟ್, ಮಹಾರಾಷ್ಟ್ರದಲ್ಲಿ ಎರಡು ಮೆಗಾವಾಟ್ ಸಾಮರ್ಥ್ಯದ ಎರಡು ಘಟಕಗಳು ಮತ್ತು ಲಕ್ಷದ್ವೀಪದಲ್ಲಿ ಒಂದು ಮೆಗಾವಾಟ್‌ಗೂ ಹೆಚ್ಚಿನ ಸಾಮರ್ಥ್ಯದ ಘಟಕವನ್ನು ಸ್ಥಾಪಿಸಿದೆ.

ಇದರೊಂದಿಗೆ ಈ ವರ್ಷದಲ್ಲಿಯೇ ಇನ್ನೂ 7.5 ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆಗಳನ್ನು ಬಿಎಚ್‌ಇಎಲ್ ಆರಂಭಿಸಿದ್ದು, ಇದರಿಂದ ಸಂಸ್ಥೆ ಈ ಹಣಕಾಸು ವರ್ಷದಲ್ಲಿ ಒಟ್ಟು 20 ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಿದಂತಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.