ADVERTISEMENT

ಬಿಬಿಎಂಪಿ ಸದಸ್ಯನ ಪುತ್ರ ಸಾವು

ನಾಗರಬಾವಿ ರಸ್ತೆಯಲ್ಲಿ ಅಪಘಾತ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2013, 20:16 IST
Last Updated 27 ಸೆಪ್ಟೆಂಬರ್ 2013, 20:16 IST
ನಾಗರಬಾವಿ ಮುಖ್ಯರಸ್ತೆಯಲ್ಲಿ ಶುಕ್ರವಾರ ಅಪಘಾತಕ್ಕೀಡಾದ ಬೈಕನ್ನು ಸಂಚಾರ ಪೊಲೀಸ್‌ ಸಿಬ್ಬಂದಿ ಪರಿಶೀಲಿಸಿದರು (ಎಡ ಚಿತ್ರ). ಬೈಕ್‌ಗೆ ಡಿಕ್ಕಿ ಹೊಡೆದ ಶಾಲಾ ವಾಹನ ಮತ್ತು ಘಟನೆಯಲ್ಲಿ ಸಾವನ್ನಪ್ಪಿದ ತೇಜಸ್‌ (ಒಳ ಚಿತ್ರ) –ಪ್ರಜಾವಾಣಿ ಚಿತ್ರ
ನಾಗರಬಾವಿ ಮುಖ್ಯರಸ್ತೆಯಲ್ಲಿ ಶುಕ್ರವಾರ ಅಪಘಾತಕ್ಕೀಡಾದ ಬೈಕನ್ನು ಸಂಚಾರ ಪೊಲೀಸ್‌ ಸಿಬ್ಬಂದಿ ಪರಿಶೀಲಿಸಿದರು (ಎಡ ಚಿತ್ರ). ಬೈಕ್‌ಗೆ ಡಿಕ್ಕಿ ಹೊಡೆದ ಶಾಲಾ ವಾಹನ ಮತ್ತು ಘಟನೆಯಲ್ಲಿ ಸಾವನ್ನಪ್ಪಿದ ತೇಜಸ್‌ (ಒಳ ಚಿತ್ರ) –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ನಾಗರಬಾವಿ ಮುಖ್ಯರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಶಾಲಾ ವಾಹನ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬಿಬಿಎಂಪಿ ಮಾರುತಿಮಂದಿರ ವಾರ್ಡ್‌ನ ಬಿಜೆಪಿ ಸದಸ್ಯ ವಾಗೀಶ್‌ ಅವರ ಪುತ್ರ ತೇಜಸ್‌ (16) ಸಾವನ್ನಪ್ಪಿದ್ದಾನೆ.
ಬೆಳಿಗ್ಗೆ ಕಾಲೇಜಿಗೆ ಹೋಗಿದ್ದ ಆತ ಸ್ನೇಹಿತನ ಬೈಕ್‌ ತೆಗೆದುಕೊಂಡು ನಾಗರ ಬಾವಿ ಮುಖ್ಯರಸ್ತೆಯಲ್ಲಿ ಹೋಗುತ್ತಿ ದ್ದಾಗ ಈ ದುರ್ಘಟನೆ ನಡೆದಿದೆ.

ತೇಜಸ್‌ನ ಬೈಕ್‌ ಮತ್ತು ನ್ಯಾಷನಲ್‌ ಹಿಲ್‌ವ್ಯೂವ್‌ ಪಬ್ಲಿಕ್‌ ಶಾಲೆಯ ವಾಹನ ಅಕ್ಕಪಕ್ಕದಲ್ಲಿ ಹೋಗುತ್ತಿದ್ದಾಗ ಒಂದಕ್ಕೊಂದು ತಾಗಿವೆ. ಈ ವೇಳೆ ನಿಯಂತ್ರಣ ತಪ್ಪಿ ಬೈಕ್‌ನಿಂದ ಕೆಳಗೆ ಬಿದ್ದ  ತೇಜಸ್‌ನ ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ಪೆಟ್ಟಾಗಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.
ವಾಗೀಶ್‌ ಅವರ ಹಿರಿಯ ಮಗನಾದ ತೇಜಸ್‌, ರಾಜರಾಜೇಶ್ವರಿನಗರದ ಭಗವಾನ್‌ ಮಹಾವೀರ್‌ ಜೈನ್‌ ಕಾಲೇ ಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ.

‘ತೇಜಸ್‌ನ ಬಳಿ ಚಾಲನಾ ಪರವಾನಗಿ (ಡಿ.ಎಲ್‌) ಇರಲಿಲ್ಲ ಮತ್ತು ಘಟನಾ ಸಂದರ್ಭದಲ್ಲಿ ಆತ ಹೆಲ್ಮೆಟ್‌ ಧರಿಸಿರಲಿಲ್ಲ. ಶಾಲಾ ವಾಹನದ ಚಾಲಕ ಪರಾರಿಯಾಗಿದ್ದು, ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂಜೆ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಪೋಷಕರಿಗೆ ಒಪ್ಪಿಸಲಾಯಿತು. ವಿಧಾನ ಪರಿಷತ್‌ ಸದಸ್ಯರಾದ ವಿ.ಸೋಮಣ್ಣ, ಪುಟ್ಟಣ ಮತ್ತಿತರರು ಆಸ್ಪತ್ರೆಗೆ ಬಂದು ತೇಜಸ್‌ನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಘಟನೆ ಸಂಬಂಧ ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರು ಅಜಾಗ ರೂಕ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಂಭವಿಸಿದ ಸಾವು ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

15 ದಿನದಲ್ಲಿ ಎರಡನೇ ಅಪಘಾತ: ಮೂಡಲಪಾಳ್ಯ ವೃತ್ತ ಸಮೀಪ ಸೆ.13 ರಂದು ನ್ಯಾಷನಲ್‌ ಹಿಲ್‌ವ್ಯೂವ್‌ ಪಬ್ಲಿಕ್‌ ಶಾಲೆಗೆ ಸೇರಿದ ವಾಹನ, ಬೈಕ್‌ ಗೆ ಡಿಕ್ಕಿ ಹೊಡೆದು ರವಿ (20) ಎಂಬ ಎರಡನೇ ವರ್ಷದ ಬಿ.ಕಾಂ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.