ADVERTISEMENT

ಮತಪಟ್ಟಿಗೆ ಸೇರಲು ಇಂದು ಕೊನೆ ದಿನ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 19:32 IST
Last Updated 6 ಏಪ್ರಿಲ್ 2013, 19:32 IST

ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಭಾನುವಾರ ಕೊನೆ ದಿನ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ ಕಚೇರಿಗಳು ಭಾನುವಾರ ಸಂಜೆ 5.30ರವರೆಗೂ ಕಾರ್ಯನಿರ್ವಹಿಸಲಿವೆ ಎಂದು ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ಶನಿವಾರ ತಿಳಿಸಿದರು.

ಜ.28ರ ನಂತರ 9.25 ಲಕ್ಷ ಅರ್ಜಿಗಳು ಬಂದಿವೆ. ಈ ಪೈಕಿ 5.68 ಲಕ್ಷ ಜನರ ಹೆಸರನ್ನು ಪಟ್ಟಿಗೆ ಸೇರಿಸಲಾಗಿದೆ. ಬಾಕಿ ಇರುವ ಅರ್ಜಿದಾರರ ಹೆಸರನ್ನೂ ಆದಷ್ಟು ಬೇಗ ಪಟ್ಟಿಗೆ ಸೇರಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪಟ್ಟಿಯಲ್ಲಿ ಹೆಸರು ಸೇರಿಸುವುದಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಭಾನುವಾರ ಮಧ್ಯರಾತ್ರಿ 12 ಗಂಟೆವರೆಗೂ ಅವಕಾಶ ಇದೆ. ಸಾರ್ವಜನಿಕರು ಉತ್ಸಾಹದಿಂದ ಹೆಸರು ನೋಂದಾಯಿಸುತ್ತಿದ್ದಾರೆ. ಇದನ್ನು ಗಮನಿಸಿದರೆ ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ ಎಂದರು.

ಶುಕ್ರವಾರ ಒಂದೇ ದಿನ 95,423 ಅರ್ಜಿಗಳು ಬಂದಿವೆ. ಇಂಟರ್‌ನೆಟ್ ಮೂಲಕ 3,079 ಅರ್ಜಿಗಳು ಸಲ್ಲಿಕೆಯಾಗಿವೆ. ಇದುವರೆಗೆ ಹೆಸರು ನೋಂದಾಯಿಸದೆ ಇರುವವರು ಕೂಡಲೇ ಹೆಸರು ನೋಂದಾಯಿಸುವ ಮೂಲಕ ಮತದಾನದ ಹಕ್ಕು ಪಡೆಯಬೇಕು ಎಂದು ಮನವಿ ಮಾಡಿದರು.

ಸಹಾಯವಾಣಿ: ಚುನಾವಣೆಗೆ ಸಂಬಂಧಿಸಿದ ಸಲಹೆ ಅಥವಾ ದೂರು ದಾಖಲಿಸಲು ಸ್ಥಾಪಿಸಲಾಗಿರುವ ಸಹಾಯವಾಣಿ ಸಂಖ್ಯೆ 1950ರ ನಾಲ್ಕು ಲೈನ್‌ಗಳನ್ನು 30ಕ್ಕೆ ಹೆಚ್ಚಿಸಲಾಗುವುದು. ಇದರಿಂದ ಏಕಕಾಲಕ್ಕೆ  ಹೆಚ್ಚಿನ ಜನ ದೂರು ದಾಖಲಿಸಲು ಅವಕಾಶವಾಗಲಿದೆ.        
            
ರಾಜ್ಯದಲ್ಲಿ ಇದುವರೆಗೆ ಚುನಾವಣೆಗೆ ಸಂಬಂಧಿಸಿದ 2,900 ದೂರುಗಳು ಬಂದಿವೆ. ಅದರಲ್ಲಿ 1,500 ದೂರುಗಳು ಬೆಂಗಳೂರು ನಗರಕ್ಕೆ ಸಂಬಂಧಪಟ್ಟಿವೆ. 900 ದೂರುಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ ಎಂದು ಅವರು ಹೇಳಿದರು. 

ಆಯುಕ್ತರ ಭೇಟಿ: ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ನೇತೃತ್ವದ ಚುನಾವಣಾ ಆಯೋಗದ ತಂಡ  ಏಪ್ರಿಲ್ 8ರಂದು ನಗರಕ್ಕೆ ಭೇಟಿ ನೀಡಲಿದೆ. ಆ ದಿನ ಸಂಜೆ  4ಕ್ಕೆ  ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಚರ್ಚಿಸಲಿದೆ.  9ರಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಡಿ.ಐ.ಜಿ., ಐ.ಜಿ.ಪಿ ಮೊದಲಾದ  ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದೆ ಎಂದು ತಿಳಿಸಿದರು.

ಕಾರು ವಾಪಸ್: ರಾಜ್ಯದ ವಿವಿಧ ನಿಗಮ - ಮಂಡಳಿಗಳ ಅಧ್ಯಕ್ಷರು ಸರ್ಕಾರಿ ಕಾರುಗಳನ್ನು ವಾಪಸ್ ಮಾಡದೆ ಈಗಲೂ ಬಳಸುತ್ತಿರುವ ಕುರಿತು ಪ್ರಶ್ನಿಸಿದಾಗ, ಕಾರುಗಳನ್ನು ವಾಪಸ್ ಪಡೆಯಲು ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.