ADVERTISEMENT

ಮನೆ ಬೀಗ ಒಡೆದು ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 18:40 IST
Last Updated 9 ಫೆಬ್ರುವರಿ 2011, 18:40 IST

ಬೆಂಗಳೂರು: ಮನೆ ಬೀಗ ಒಡೆದು ಒಳ ನುಗ್ಗಿದ ದುಷ್ಕರ್ಮಿಗಳು ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಬೇಗೂರಿನ ವಿಶ್ವಪ್ರಿಯ ಲೇಔಟ್‌ನಲ್ಲಿ ನಡೆದಿದೆ.

ಈ ಸಂಬಂಧ ಮನೆಯ ಮಾಲೀಕ ವಿಜಯ್‌ಕುಮಾರ್ ಎಂಬುವರು ದೂರು ನೀಡಿದ್ದಾರೆ. ವಿಜಯ್‌ಕುಮಾರ್ ಕುಟುಂಬ ಸದಸ್ಯರ ಜತೆ ಫೆ.4ರಂದು ಮೈಸೂರಿಗೆ ಹೋಗಿದ್ದರು. ಅವರು ಮಂಗಳವಾರ ರಾತ್ರಿ ಮನೆಗೆ ವಾಪಸ್ ಬಂದಾಗ ಕಳವು ನಡೆದಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲೆಕ್ಟ್ರಾನಿಕ್‌ಸಿಟಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಬಂಧನ
ಸಾರ್ವಜನಿಕರಿಗೆ ಸಾಲ ನೀಡಿ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ರೋಹಿತ್ ಗಣೇಶ್ (32) ಎಂಬಾತನನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಸಣ್ಣಪುಟ್ಟ ಉದ್ಯಮಿಗಳಿಗೆ ಸಾಲ ನೀಡಿ ತಿಂಗಳಿಗೆ ಶೇ 10ರಿಂದ 20ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದ. ಸಾಲದ ಕಂತು ಕಟ್ಟದವರಿಗೆ ಮೀಟರ್ ಬಡ್ಡಿ ವಿಧಿಸಿ, ದೌರ್ಜನ್ಯದಿಂದ ಅವರ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳುತ್ತಿದ್ದ.

ಆತ ಎಚ್.ಎಸ್.ಆರ್ ಲೇಔಟ್‌ನ 18ನೇ ಮುಖ್ಯರಸ್ತೆಯಲ್ಲಿ ಕಚೇರಿ ಇಟ್ಟುಕೊಂಡು ಸಾಲ ನೀಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ರೋಹಿತ್‌ನಿಂದ ಸಾಲಗಾರರು ಸಹಿ ಹಾಕಿಕೊಟ್ಟಿದ್ದ ವಿವಿಧ ಬ್ಯಾಂಕ್‌ಗಳ ಖಾಲಿ ಚೆಕ್‌ಗಳು, ಛಾಪಾ ಕಾಗದ, ದಾಖಲೆ ಪತ್ರಗಳು, ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.