ADVERTISEMENT

ಮಹಿಷಿ ವರದಿ ಪರಿಷ್ಕರಣೆಗೆ ಸಮಿತಿ:ಸಿಎಂ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 20:00 IST
Last Updated 15 ಜೂನ್ 2013, 20:00 IST

ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಒದಗಿಸಲು ಅನುಕೂಲವಾಗುವಂತೆ ಡಾ.ಸರೋಜಿನಿ ಮಹಿಷಿ ವರದಿ ಪರಿಷ್ಕರಿಸಲು ಸದ್ಯದಲ್ಲೇ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಇಲ್ಲಿ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊರತಂದಿರುವ `ಕರ್ನಾಟಕ ಸಂಗಾತಿ' ಪರಿಷ್ಕೃತ ಆವೃತ್ತಿಯನ್ನು ಗೃಹ ಕಚೇರಿ `ಕೃಷ್ಣಾ'ದಲ್ಲಿ ಬಿಡುಗಡೆ ಮಾಡಿದ ನಂತರ ಅವರು ಮಾತನಾಡಿದರು.

ಸರೋಜಿನಿ ಮಹಿಷಿ ವರದಿ ನೀಡುವಾಗ ವೇತನ ಶ್ರೇಣಿ ಕಡಿಮೆ ಇತ್ತು. ಅಲ್ಲದೆ, ಆ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ವಲಯ ಇರಲಿಲ್ಲ. ಹೀಗಾಗಿ ಈಗಿನ ವೇತನ ಶ್ರೇಣಿಗಳು ಸೇರಿದಂತೆ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವರದಿಯನ್ನು ಪರಿಷ್ಕರಿಸಬೇಕಾದ ಅಗತ್ಯ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ' ಚಂದ್ರು ಸಲಹೆ ನೀಡಿದರು.

ಈ ಸಂಬಂಧ ಹೇಳಿಕೆ ನೀಡಿದ ಸಿದ್ದರಾಮಯ್ಯ `ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎನ್ನುವುದು ನಮ್ಮೆಲ್ಲರ ಬಯಕೆ. ಅದಕ್ಕೆ ಪೂರಕವಾಗಿ ವರದಿ ಪರಿಷ್ಕರಿಸಲು ಸಮಿತಿ ರಚಿಸಲಾಗುವುದು' ಎಂದರು.

ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕ ನಂತರ ಕನ್ನಡಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸುವ ಮತ್ತು ಕಾರ್ಯಕ್ರಮ ರೂಪಿಸುವ ಜವಾಬ್ದಾರಿಯನ್ನು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನಕ್ಕೆ ವಹಿಸಲಾಗಿತ್ತು. ಇದಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ವಿರೋಧ ವ್ಯಕ್ತಪಡಿಸಿದರು.

`ಇದರ ಬದಲು, ಸರ್ಕಾರವೇ ಕಾರ್ಯಕ್ರಮಗಳನ್ನು ರೂಪಿಸಬೇಕು. ಕೇಂದ್ರ ಸರ್ಕಾರ ನೀಡುವ ಅನುದಾನ ಕೂಡ ರಾಜ್ಯ ಸರ್ಕಾರಕ್ಕೇ ಬರಬೇಕು. ತಮಿಳುನಾಡಿನಲ್ಲಿ ಇದೇ ವ್ಯವಸ್ಥೆ ಇದೆ. ಆ ಪ್ರಕಾರ ಮಾಡಬೇಕು' ಎಂದು ಆಗ್ರಹಪಡಿಸಿದರು. ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ತಕ್ಷಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಎರಡು ತಿಂಗಳಲ್ಲಿ ಯೂನಿಕೋಡ್: ಇಂಟರ್‌ನೆಟ್‌ನಲ್ಲಿ ಕನ್ನಡದ ಶಿಷ್ಟತೆಯಾಗಿ ಯೂನಿಕೋಡ್ ಅನ್ನು ಎರಡು ತಿಂಗಳಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಸಿದ್ದರಾಮಯ್ಯ ವಿವರಿಸಿದರು.

ವಿಧಾನಸೌಧದಲ್ಲೇ ಇಲ್ಲ: ಆಡಳಿತದ ಕೆಳಹಂತದಲ್ಲಿ ಕನ್ನಡ ಬಳಕೆ ಇದೆ. ಆದರೆ, ವಿಧಾನಸೌಧದಲ್ಲೇ ಕನ್ನಡ ಬಳಕೆ ಕಡಿಮೆ ಆಗಿದೆ. ಈ ಸಂಬಂಧ ಅಧಿಕಾರಿಗಳ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಕನ್ನಡದಲ್ಲಿ ಇರದ ಕಡತಗಳನ್ನು ಹಿಂದಕ್ಕೆ ಕಳುಹಿಸುವಂತೆಯೂ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸ್ಪರ್ಧಾತ್ಮಾಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ `ಕರ್ನಾಟಕ ಸಂಗಾತಿ' ಹೆಚ್ಚು ಉಪಯೋಗ ಆಗಲಿದೆ. 720 ಪುಟಗಳ ಪುಸ್ತಕದಲ್ಲಿ ಕರ್ನಾಟಕ ಕುರಿತ ಎಲ್ಲ ರೀತಿಯ ಮಾಹಿತಿ ಇದೆ ಎಂದು ಚಂದ್ರು ವಿವರಿಸಿದರು.

ಸಾಹಿತಿಗಳಾದ ಹಂಪ ನಾಗರಾಜಯ್ಯ, ನಾಗತಿಹಳ್ಳಿ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.

ಅನುದಾನ: ತನಿಖೆ
ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕ ಸಂದರ್ಭದಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಬಿಡುಗಡೆ ಮಾಡಿರುವ ಅನುದಾನ ಹೇಗೆ ಬಳಕೆಯಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

`ಕರ್ನಾಟಕ ಸಂಗಾತಿ' ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಈ ಸಂಬಂಧ ವಿಷಯ ಪ್ರಸ್ತಾಪಿಸಿ, ತನಿಖೆಗೆ ಆಗ್ರಹಿಸಿದರು.

`ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಸಲುವಾಗಿ ಎಲ್ಲ  ವಿಶ್ವವಿದ್ಯಾಲಯಗಳಿಗೆ ರಾಜ್ಯ ಸರ್ಕಾರ ತಲಾ ಒಂದು ಕೋಟಿ ರೂಪಾಯಿ ಅನುದಾನ ನೀಡಿತ್ತು. ಇದನ್ನು ಕಟ್ಟಡ ನಿರ್ಮಾಣ ಸೇರಿದಂತೆ ಇತರ ಅನುಪಯುಕ್ತ ಕೆಲಸಗಳಿಗೆ ಬಳಸಲಾಗಿದೆ. ಈ ಕುರಿತು ತನಿಖೆ ನಡೆಸಬೇಕು' ಎಂದು ಬರಗೂರು ಒತ್ತಾಯಿಸಿದರು.

`ಆ ರೀತಿ ಆಗಿದ್ದರೆ ಅದು ತಪ್ಪು. ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.