ಬೆಂಗಳೂರು: `ಮೆಟ್ರೊ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರುವ ರಸ್ತೆಗಳಲ್ಲಿ ಬಿದ್ದಿರುವ ತ್ಯಾಜ್ಯವನ್ನು ಇನ್ನು ಮೂರು ತಿಂಗಳಲ್ಲಿ ಸಂಪೂರ್ಣವಾಗಿ ತೆಗೆದುಹಾಕುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ರಾಮಲಿಂಗಾರೆಡ್ಡಿ ಸೂಚಿಸಿದರು.
ಮೇಯರ್ ಡಿ.ವೆಂಕಟೇಶಮೂರ್ತಿ, ಶಾಸಕ ಆರ್. ಅಶೋಕ ಅವರೊಂದಿಗೆ ಸೋಮವಾರ ಬಸವನಗುಡಿ ಮತ್ತು ಜಯನಗರ ಪ್ರದೇಶದಲ್ಲಿ ನಡೆದಿರುವ ಮೆಟ್ರೊ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳಿಗೆ ಈ ಆದೇಶ ನೀಡಿದರು.
`ಕಾಮಗಾರಿಗೆ ಬಳಸಿದ ಸಾಮಗ್ರಿಗಳನ್ನು ರಸ್ತೆಯಲ್ಲಿಯೇ ಉಳಿಸಲಾಗಿದ್ದು, ತ್ಯಾಜ್ಯವೂ ಬಹಳ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಇದರಿಂದ ವಾಹನಗಳ ಓಡಾಟಕ್ಕೆ ಅಡಚಣೆಯಾಗಿದ್ದು, ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಮೂರು ತಿಂಗಳಲ್ಲಿ ನಗರದ ರಸ್ತೆಗಳ ಮೇಲಿನ ತ್ಯಾಜ್ಯವನ್ನು ಸಂಪೂರ್ಣವಾಗಿ ತೆಗೆಯಬೇಕು' ಎಂದು ಮೆಟ್ರೊ ರೈಲು ನಿಗಮದ ಅಧಿಕಾರಿಗಳಿಗೆ ಹೇಳಿದರು. `ಮುಂದಿನ ವಾರ ಮತ್ತೆ ಮೆಟ್ರೊ ಕಾಮಗಾರಿ ತಪಾಸಣೆ ನಡೆಸಲಾಗುವುದು' ಎಂದರು.
ಅಶೋಕ ಮಾತನಾಡಿ, `ಮೆಟ್ರೊ ಕಾಮಗಾರಿ ವಿಳಂಬವಾಗಿದ್ದು, ಕಟ್ಟಡ ತ್ಯಾಜ್ಯವೂ ಬಹಳ ಪ್ರಮಾಣದಲ್ಲಿ ಬಿದ್ದಿದೆ. ಕಾಮಗಾರಿ ಮುಗಿದ ರಸ್ತೆಗಳು ಸಹ ದುರಸ್ತಿಗೊಂಡಿಲ್ಲ. ಮೆಟ್ರೊ ರೈಲು ನಿಗಮ ಮತ್ತು ಬಿಬಿಎಂಪಿ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯೇ ಇದಕ್ಕೆ ಕಾರಣ' ಎಂದು ದೂರಿದರು.
`ಮಾಗಡಿ ರಸ್ತೆ ದುರಸ್ತಿಗೆ ಅಗತ್ಯವಾದ ಹಣಕಾಸಿನ ನೆರವು ನೀಡಲು ನಿಗಮ ಬದ್ಧವಾಗಿದ್ದು, ಶೀಘ್ರವೇ ಬಿಬಿಎಂಪಿ ಆಯುಕ್ತರು ಟೆಂಡರ್ ಕರೆಯಲಿದ್ದಾರೆ' ಎಂದು ಮೆಟ್ರೊ ರೈಲು ನಿಗಮದ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.