ADVERTISEMENT

ಯುದ್ಧ ಟ್ಯಾಂಕರ್ ಪರೀಕ್ಷೆಗೆ ಗ್ರಾಮಸ್ಥರ ವಿರೋಧ

​ಪ್ರಜಾವಾಣಿ ವಾರ್ತೆ
Published 7 ಜೂನ್ 2017, 19:59 IST
Last Updated 7 ಜೂನ್ 2017, 19:59 IST
ಟ್ಯಾಂಕ್ ಪರೀಕ್ಷೆಗೆ ಕೋರಿರುವ ಐವರಕಂಡಪುರ ಕೆರೆ ಪ್ರದೇಶ
ಟ್ಯಾಂಕ್ ಪರೀಕ್ಷೆಗೆ ಕೋರಿರುವ ಐವರಕಂಡಪುರ ಕೆರೆ ಪ್ರದೇಶ   

ಬೆಂಗಳೂರು: ಭಾರತ್ ಎಲೆಕ್ಟ್ರಾನಿಕ್ ಕಂಪೆನಿ ಹೆಸರಘಟ್ಟ ಹೋಬಳಿಯಲ್ಲಿನ ಐವರಕಂಡಪುರ ಕೆರೆಯಲ್ಲಿ ಯುದ್ಧ ಟ್ಯಾಂಕರ್‌ ಪರೀಕ್ಷೆ ನಡೆಸಲು ಮುಂದಾಗಿದ್ದು, ಇದಕ್ಕೆ ಇಲ್ಲಿನ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬುಧವಾರ ನಡೆದ ಹುರುಳಿ ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿ ವಾರ್ಡ್ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಯಿತು.  ಇದಕ್ಕೆ ವಿರೋಧ ವ್ಯಕ್ತಪಡಿಸಿದ ಜನರು ‘ಕೇಂದ್ರ ರಕ್ಷಣಾ ಇಲಾಖೆ ಸಹಯೋಗದೊಂದಿಗೆ ನಡೆಯುವ ರಾಡಾರ್ ವಿಭಾಗದಿಂದ ಉನ್ನತೀಕರಿಸಿದ ಯುದ್ಧ ಟ್ಯಾಂಕರ್‌ ಪರೀಕ್ಷೆಗೆ ಯಾವುದೇ ಅನುಮತಿ ನೀಡಬಾರದು’ ಎಂದು  ಒತ್ತಾಯಿಸಿದರು.

‘ಕೆರೆಯ ಸುತ್ತಮುತ್ತ ಅನೇಕ ಜೀವ ಸಂಕುಲಗಳಿವೆ. ದನಕರುಗಳಿಗೆ ಮೇವು ದೊರೆಯುತ್ತಿದೆ. ಪಂಚಾಯಿತಿ ವತಿಯಿಂದ ಕೆರೆಯ ಹೂಳು ತೆಗೆದು ಅಭಿವೃದ್ಧಿ ಪಡಿಸಬೇಕು. ಇದರಿಂದ ಸುತ್ತಮುತ್ತ ಗ್ರಾಮಗಳ ನೀರಿನ ಸಮಸ್ಯೆ ಪರಿಹಾರವಾಗುತ್ತದೆ’ ಎಂದು ಹೇಳಿದರು.

ADVERTISEMENT

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಆರ್.ನಾರಾಯಣ ಸ್ವಾಮಿ,  ‘ಸರ್ವ ಸದಸ್ಯರ ಸಭೆಯಲ್ಲಿ ಈ ವಿಷಯವನ್ನು ಚರ್ಚೆ ಮಾಡಿ ಇದರ ಸಾಧಕ ಬಾಧಕಗಳನ್ನು ಪರಿಶೀಲಿಸುತ್ತೇವೆ’ ಎಂದರು.

ಕಂದಾಯ ಕಟ್ಟಲು ಮನವಿ: ಗ್ರಾಮ ಪಂಚಾಯಿತಿಗೆ ಒಟ್ಟು ಬರಬೇಕಾದ ಕಂದಾಯ ಹಣ ₹ 7 ಲಕ್ಷ. ಆದರೆ, ಪಾವತಿಯಾಗಿರುವುದು ಕೇವಲ ₹ 1 ಲಕ್ಷ. ಉಳಿದ ಕಂದಾಯ ಹಣವನ್ನು ಗ್ರಾಮಸ್ಥರು ಶೀಘ್ರ ಕಟ್ಟುವಂತೆ ಅಧಿಕಾರಿಗಳು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.