ADVERTISEMENT

ಯುವಜನೋತ್ಸವಕ್ಕೆ ಯಕ್ಷಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:40 IST
Last Updated 6 ಜನವರಿ 2012, 19:40 IST

ಬೆಂಗಳೂರು: ಮಂಗಳೂರಿನಲ್ಲಿ ಜ. 12ರಿಂದ 16ರವರೆಗೆ ನಡೆಯಲಿರುವ 17ನೇ ರಾಷ್ಟ್ರೀಯ ಯುವ ಜನೋತ್ಸವದ ಲಾಂಛನವನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಶುಕ್ರವಾರ ನಗರದಲ್ಲಿ ಬಿಡುಗಡೆ ಮಾಡಿದರು.

ಯುವ ಜನಸೇವಾ ಮತ್ತು ಕ್ರೀಡಾ ಇಲಾಖೆಯು ನಗರದ ಯವನಿಕಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ `ಯಕ್ಷಿ~ (ಆನೆಯ ಮೇಲೆ ಯಕ್ಷ ಮುಕುಟ) ಲಾಂಛನವನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳು, ರಾಷ್ಟ್ರೀಯ ಯುವ ಜನೋತ್ಸವಕ್ಕಾಗಿ ಕೇಂದ್ರ ಸರ್ಕಾರ 2 ಹಾಗೂ ರಾಜ್ಯ ಸರ್ಕಾರ 10 ಕೋಟಿ ರೂಪಾಯಿಗಳ್ನು ಬಿಡುಗಡೆ ಮಾಡಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಮಂಗಳೂರಿನಲ್ಲಿ ಭರದ ಸಿದ್ಧತೆಗಳು ನಡೆದಿವೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಜನೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಲಿದೆ ಎಂಬುದು ಸರ್ಕಾರದ ಆಶಯವಾಗಿದೆ ಎಂದರು.

`ಇದೊಂದು ಹೊಸನಾಡು ಕಟ್ಟಲು ಯುವಕರನ್ನು ಪ್ರೇರೇಪಿಸುವ ಅದ್ಭುತ ಕಾರ್ಯಕ್ರಮ. ಬೆಂಗಳೂರಿನ ಜನ ಕೂಡ ರಜೆ ಹಾಕಿ ಜನೋತ್ಸವ ನೋಡಲು ಬರಬೇಕು~ ಎಂದು ಮುಖ್ಯಮಂತ್ರಿಗಳು ಮುಕ್ತ ಆಹ್ವಾನ ನೀಡಿದರು.

ಕವಿ ಗೋಪಾಲಕೃಷ್ಣ ಅಡಿಗರ `ಕಟ್ಟುವೆವು ನಾಡೊಂದನು~ ಕವಿತೆ ಹೇಳುವ ಮೂಲಕ ಮುಖ್ಯಮಂತ್ರಿಗಳು ರಾಷ್ಟ್ರೀಯ ಯುವ ಜನೋತ್ಸವವು ಯುವಕರ ಸ್ಫೂರ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಲಿ ಎಂದು ಹಾರೈಸಿದರು.

ರಾಷ್ಟ್ರೀಯ ಯುವ ಜನೋತ್ಸವದಲ್ಲಿ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಐದು ಸಾವಿರ ಮಂದಿ ಯುವ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಎಲ್ಲ ಪ್ರತಿನಿಧಿಗಳಿಗೆ ವಸತಿ ಮತ್ತು ಭೋಜನ ವ್ಯವಸ್ಥೆ ಮಾಡಲಾಗಿದೆ. ಮಂಗಳೂರಿನ ರೈಲ್ವೆ ನಿಲ್ದಾಣದಿಂದ ವಸತಿ ಸ್ಥಳ, ಭೋಜನಾಲಯ, ಸ್ಪರ್ಧೆ ಹಾಗೂ ಸ್ಪರ್ಧೇತರ ಚಟುವಟಿಕೆಗಳು ನಡೆಯುವ ಸ್ಥಳಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.

ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿರುವ ಈ ರಾಷ್ಟ್ರೀಯ ಯುವ ಜನೋತ್ಸವವನ್ನು 12ರಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಉದ್ಘಾಟಿಸಲಿದ್ದು, ಕೇಂದ್ರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅಜಯ್ ಮಾಕನ್ ರಾಷ್ಟ್ರೀಯ ಯುವಜನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕೇಂದ್ರ ಸಚಿವ ಎಂ. ವೀರಪ್ಪ ಮೊಯಿಲಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. 16ರಂದು ಸಂಜೆ 4.30ಕ್ಕೆ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಭಾಗವಹಿಸಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್, ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಆರ್. ಪೆರುಮಾಳ್, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್, ಕೇಂದ್ರ ಕ್ರೀಡಾ ಇಲಾಖೆಯ ಜಂಟಿ ಕಾರ್ಯದರ್ಶಿ ರಾಕೇಶ್ ಮೋಹನ್, ಕೇಂದ್ರ ನೆಹರು ಯುವ ಕೇಂದ್ರದ ಜಂಟಿ ಕಾರ್ಯದರ್ಶಿ ವೀರೇಂದ್ರ ಖತ್ರಿ ಮತ್ತಿತರರು ಲಾಂಛನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಪ್ರೀತಿ- ವಿಶ್ವಾಸದಿಂದ ಕೆಲಸ ಮಾಡಿಸುವೆ..: `ಅಧಿಕಾರಿಗಳಿಂದ ಪ್ರೀತಿ- ವಿಶ್ವಾಸದಿಂದಲೇ ಕೆಲಸ ಮಾಡಿಸಲು ಪ್ರಯತ್ನಿಸುವೆ. ಇದು ನನ್ನ ಕಾರ್ಯಶೈಲಿ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಶುಕ್ರವಾರ ಇಲ್ಲಿ ಹೇಳಿದರು.

17ನೇ ರಾಷ್ಟ್ರೀಯ ಯುವ ಜನೋತ್ಸವದ ಲಾಂಛನ ಬಿಡುಗಡೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರೆ ಮುಖ್ಯಮಂತ್ರಿಗಳಿಗೆ ಆಡಳಿತದ ಮೇಲೆ ಹಿಡಿತ ಸಿಗಲಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.