ADVERTISEMENT

ರಾಜಧಾನಿಯಲ್ಲಿ ಮತ್ತೆ 18 ಕಾರ್ಮಿಕರಿಗೆ ಥಳಿತ

​ಪ್ರಜಾವಾಣಿ ವಾರ್ತೆ
Published 25 ಮೇ 2018, 20:23 IST
Last Updated 25 ಮೇ 2018, 20:23 IST

ಬೆಂಗಳೂರು: ‘ರಾಜ್ಯಕ್ಕೆ ಮಕ್ಕಳ ಕಳ್ಳರು ಬಂದಿದ್ದಾರೆ’ ಎಂಬ ವದಂತಿ ನಂಬಿ ಜನ ಅಮಾಯಕರನ್ನು ಥಳಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಬೆಂಗಳೂರಿ
ನಲ್ಲಿ ಮತ್ತೆ 18 ಕಾರ್ಮಿಕರು ಹಲ್ಲೆಗೊಳಗಾಗಿದ್ದಾರೆ.

ಪುಲಕೇಶಿನಗರದ ಪಾಟರಿಟೌನ್‌ ನಲ್ಲಿ ಗುರುವಾರ ರಾತ್ರಿ ನೇಪಾಳ ಹಾಗೂ ಬಿಹಾರದ 12 ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ. ಅಲ್ಲದೆ, ಅವರ ರಕ್ಷಣೆಗೆ ತೆರಳಿದ್ದ ಪೊಲೀಸರ ಜತೆ ವಾಗ್ವಾದ ನಡೆಸಿರುವ ಸ್ಥಳೀಯರು, ಹೊಯ್ಸಳ ವಾಹನಗಳ ಮೇಲೂ ಕಲ್ಲು ತೂರಿದ್ದಾರೆ.

ಕಾರ್ಮಿಕರು ಕೂಲಿ ಅರಸಿ ಮೂರು ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಬಾಡಿಗೆ ಮನೆ ಸಿಗದ ಕಾರಣ ಅವರು ಫುಟ್‌ಪಾತ್‌ನಲ್ಲೇ ಶೆಡ್‌ ಹಾಕಿಕೊಂಡು ಮಲಗುತ್ತಿದ್ದರು. ರಾತ್ರಿ 7.30ರ ಸುಮಾರಿಗೆ ಟಾರ್ಪಲ್ ಹಿಡಿದುಕೊಂಡು ಪಾಟರಿಟೌನ್‌ಗೆ ಬಂದ ಕಾರ್ಮಿಕರ ದಂಡನ್ನು ಕಂಡ ಮಹಿಳೆಯೊಬ್ಬರು, ‘ಮಕ್ಕಳ ಕಳ್ಳರು ಬಂದಿದ್ದಾರೆ’ ಎಂದು ಕಿರುಚಾಡಿ ಜನ ಸೇರಿಸಿದ್ದರು.

ADVERTISEMENT

ನೂರಕ್ಕೂ ಹೆಚ್ಚು ಮಂದಿ ಸೇರಿ ದೊಣ್ಣೆಗಳಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಗೃಹಬಂಧನದಲ್ಲಿಟ್ಟು ಹಿಂಸಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಕೂಡಲೇ ಕಾರ್ಮಿಕರನ್ನು ರಕ್ಷಿಸಿ ಹೊಯ್ಸಳ ವಾಹನಗಳಲ್ಲಿ ಕೂರಿಸಿಕೊಂಡಿದ್ದಾರೆ. ಇದರಿಂದ ಕೆರಳಿದ ಸ್ಥಳೀಯರು, ‘ನಿಮ್ಮ ಮಕ್ಕಳನ್ನು ಅಪಹರಿಸಿದರೆ ಗೊತ್ತಾಗುತ್ತದೆ’ ಎನ್ನುತ್ತ ಕಲ್ಲು ತೂರಲು ಶುರು ಮಾಡಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪುಲಕೇಶಿನಗರ ಉಪವಿಭಾಗ ವ್ಯಾಪ್ತಿಯ ಆರು ಠಾಣೆಗಳ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ. ಹಲ್ಲೆಯಿಂದ ನೇಪಾಳದ ಒಬ್ಬ ಕಾರ್ಮಿಕನಿಗೆ ಗಂಭೀರ ಗಾಯವಾಗಿದ್ದು, ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ
ಯುತ್ತಿದ್ದಾನೆ. ಕೊಲೆ ಯತ್ನ (ಐಪಿಸಿ 307) ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮಹಿಳೆಗೆ ಹಲ್ಲೆ: ವಿದ್ಯಾರಣ್ಯಪುರದ ವಡೇರಹಳ್ಳಿಯಲ್ಲಿ ಮನೆ ಬಾಡಿಗೆ ಕೇಳಲು ಬಂದ ಮಹಿಳೆ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ.

ಮತ್ತಿಕೆರೆ ನಿವಾಸಿಯಾದ ಆ ಮಹಿಳೆ, ಕೆಲ ದಿನಗಳಿಂದ ಬಾಡಿಗೆ ಮನೆಯ ಹುಡುಕಾಟದಲ್ಲಿದ್ದರು. ವಡೇರಹಳ್ಳಿ
ಯಲ್ಲಿ ಮನೆ ಖಾಲಿ ಇರುವುದಾಗಿ ತಿಳಿದ ಅವರು, ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಅಲ್ಲಿಗೆ ತೆರಳಿದ್ದರು. ಆಗ ಜನ ಮಕ್ಕಳ ಕಳ್ಳಿ ಎಂದು ಭಾವಿಸಿ ಹೊಡೆದಿದ್ದಾರೆ. ಪೊಲೀಸರು ಸ್ಥಳೀಯರ ವಶದಿಂದ ಅವರನ್ನು ರಕ್ಷಣೆ ಮಾಡಿದ್ದಾರೆ.

ಮಹಿಳೆಯ ಮಗಳನ್ನು ಸ್ಥಳಕ್ಕೆ ಕರೆಸಿ
ಕೊಂಡು ವಿಚಾರಣೆ ನಡೆಸಿದಾಗ, ‘ತಾಯಿ ಮನೆಗೆಲಸ ಮಾಡುತ್ತಾರೆ. ಮಾಸಿದ ಬಟ್ಟೆ ಧರಿಸಿದ ಕಾರಣಕ್ಕೆ ಕಳ್ಳಿಯ ಪಟ್ಟ ಕಟ್ಟಿದರೆ ಹೇಗೆ? ಕಡಿಮೆ ಬಾಡಿಗೆಯಲ್ಲಿ ನಮಗೆ ಮನೆ ಬೇಕಿತ್ತು. ಅದಕ್ಕಾಗಿಯೇ ಅಮ್ಮ ಇಲ್ಲಿಗೆ ಬಂದಿದ್ದರು’ ಎಂದು ಹೇಳಿಕೆ ಕೊಟ್ಟರು. ಆ ನಂತರ ಸ್ಥಳೀಯರಿಗೆ ಬುದ್ಧಿ ಹೇಳಿ ತಾಯಿ–ಮಗಳನ್ನು ಕಳುಹಿಸಿದೆವು. ಕೊನೆಗೆ, ಸ್ಥಳೀಯರೂ ಅವರಲ್ಲಿ ಕ್ಷಮೆಯಾಚಿಸಿದರು ಎಂದು ಗಂಗಮ್ಮನ ಗುಡಿ ಪೊಲೀಸರು ಹೇಳಿದರು.

ಕೂಡಿ ಹಾಕಿದರು: ವೈಟ್‌ಫೀಲ್ಡ್‌ನ ವಿಜಯನಗರಗುಟ್ಟೆ ಗ್ರಾಮದ ಮನೆಯೊಂದರಲ್ಲಿ ಕೂಡಿ ಹಾಕಲಾಗಿದ್ದ ಮೂವರು ಮಹಿಳೆಯರನ್ನು ಪೊಲೀ
ಸರು ಶುಕ್ರವಾರ ರಕ್ಷಿಸಿದ್ದಾರೆ.

ಉತ್ತರ ಪ್ರದೇಶದ ಈ ಮಹಿಳೆಯರು, ಕೂಲಿ ಮಾಡಿಕೊಂಡು ಹೂಡಿಯಲ್ಲಿ ನೆಲೆಸಿದ್ದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಗ್ರಾಮದಲ್ಲಿ ಇವರನ್ನು ಕಂಡ ಜನ, ಮಕ್ಕಳ ಕಳ್ಳರೆಂಬ ಸಂಶಯದಿಂದ ಎಳೆದೊಯ್ದು ಮನೆಯೊಂದರಲ್ಲಿ ಕೂಡಿ ಹಾಕಿದ್ದರು.

‘ರಾಜ್ಯದಲ್ಲಿ ಪ್ರತಿಭಟನೆ’

‘ಇದೊಂದು ಅಮಾನವೀಯ ಘಟನೆ. ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಕಿಡ್ನಿ ಮಾರಾಟ ಜಾಲದ ವಿಚಾರವನ್ನು ಬದಿಗಿಟ್ಟು, ವದಂತಿಯ ಕತೆ ಕಟ್ಟಿದರೆ ನಾವು ನಂಬುವುದಿಲ್ಲ. ಮೊದಲು ಅಂತ್ಯಕ್ರಿಯೆ ಮುಗಿಸುತ್ತೇವೆ. ನ್ಯಾಯ ಸಿಗದೆ ಹೋದರೆ, ರಾಜಸ್ಥಾನದಿಂದ ಜನರನ್ನು ಕರೆಸಿಕೊಂಡು ನ್ಯಾಯ ಸಿಗುವವರೆಗೂ ಪ್ರತಿಭಟನೆ ಮಾಡುತ್ತೇವೆ’ ಎಂದು ಕಾಲೂರಾಮ್ ಸಂಬಂಧಿ ಪ್ರದೀಪ್ ರಾಮ್ ಎಚ್ಚರಿಕೆ ನೀಡಿದರು.

ಕಿಡ್ನಿ ಮಾರಾಟ ಜಾಲದ ಬಗ್ಗೆಯೂ ತನಿಖೆ

‘ಕಿಡ್ನಿ ಮಾರಾಟ ಜಾಲಕ್ಕೆ ನನ್ನ ಅಣ್ಣ ಬಲಿಯಾಗಿದ್ದಾನೆ’ ಎಂದು ಕಾಲೂರಾಮ್ ಸೋದರ ಸೋನಾರಾಮ್ ಆರೋಪಿಸಿರುವ ಕಾರಣ, ಆ ಆಯಾಮದಲ್ಲೂ ತನಿಖೆ ನಡೆಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ ಕುಮಾರ್ ಹೇಳಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಕೆಲ ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಕ್ಕಳ ಕಳ್ಳರ ವದಂತಿ ಹರಿದಾಡುತ್ತಿತ್ತು. ಬುಧವಾರ ಅದು ರಾಜಧಾನಿಯನ್ನೂ ಪ್ರವೇಶಿಸಿತು. ರಾಜಸ್ಥಾನದ ಕಾರ್ಮಿಕ ಕಾಲೂರಾಮ್‌ನನ್ನು ಕೊಲೆಗೈದ ಪ್ರಕರಣ ಸಂಬಂಧ ಶುಕ್ರವಾರ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಶವ ಹಸ್ತಾಂತರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕಾಲೂರಾಮ್ ಇಷ್ಟು ದಿನ ಎಲ್ಲಿದ್ದ. ಯಾವಾಗ ನಗರಕ್ಕೆ ಬಂದ ಎಂಬುದು ಯಾರಿಗೂ ಗೊತ್ತಿಲ್ಲ. ಮೊದಲು ಆ ಮಾಹಿತಿಗಳನ್ನು ಕಲೆ ಹಾಕಬೇಕಿದೆ. ವದಂತಿಯ ಕಾರಣಕ್ಕೇ ಹತ್ಯೆ ನಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಕಿಡ್ನಿ ಮಾರಾಟ ಜಾಲದ ಕೈವಾಡದ ಬಗ್ಗೆ ಮೃತರ ಸಂಬಂಧಿಕರು ಸಂಶಯ ವ್ಯಕ್ತಪಡಿಸಿರುವುದರಿಂದ ಆ ನಿಟ್ಟಿನಲ್ಲೂ ತನಿಖೆ ಮಾಡುತ್ತೇವೆ’ ಎಂದು ಹೇಳಿದರು.

ಸೋದರನ ಆರೋಪ: ‘ಮಂಗಳವಾರ ಮಧ್ಯಾಹ್ನ 910****420 ಹಾಗೂ 916****943 ಸಂಖ್ಯೆಗಳಿಂದ ಎರಡು ಬಾರಿ ನನಗೆ ಕರೆ ಮಾಡಿದ್ದ ಕಾಲೂರಾಮ್, ‘ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು, ಕಿಡ್ನಿ ಮಾರಾಟ ಜಾಲದ ಸದಸ್ಯರು ಅಪಹರಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ಇದೇ ನನ್ನ ಕೊನೆಯ ದಿನವಂತೆ. ನೀವೆಲ್ಲ ಜಾಗ್ರತೆಯಿಂದ ಇರಿ’ ಎಂದು ಅಳುತ್ತ ಮಾತನಾಡಿ ಕರೆ ಸ್ಥಗಿತಗೊಳಿಸಿದ್ದ. ಯಾರೋ ಆತನಿಗೆ ಬೈಯ್ಯುತ್ತಿರುವುದೂ ಕೇಳಿಸುತ್ತಿತ್ತು. ಮರುದಿನವೇ ಆತ ಕೊಲೆಯಾದ’ ಎಂದು ಸೋನಾರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಪಹರಣಾಕಾರರು ಅಣ್ಣನನ್ನು ನಾಯಂಡಹಳ್ಳಿಯ ಮನೆಯಲ್ಲಿ ಕೂಡಿಟ್ಟಿದ್ದರಂತೆ. ಕೃತ್ಯ ನಡೆದ ಸ್ಥಳದಲ್ಲಿ ಪೊಲೀಸರಿಗೆ ಅಣ್ಣನ ಮೊಬೈಲ್ ಸಿಕ್ಕಿದೆ. ಆದರೆ, ಅದರಲ್ಲಿ ಸಿಮ್‌ ಕಾರ್ಡ್ ಇರಲಿಲ್ಲವೆಂದು ಪೊಲೀಸರು ಹೇಳುತ್ತಿದ್ದಾರೆ. ಹಾಗಾದರೆ, ಸಿಮ್ ಯಾರು ತೆಗೆದರು’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.