ADVERTISEMENT

ರಾಮ್‌ದೇವ್‌ ವಿರುದ್ಧ ದಲಿತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಮೇ 2014, 18:47 IST
Last Updated 5 ಮೇ 2014, 18:47 IST
ಬಾಬಾ ರಾಮ್‌ದೇವ್‌ ಅವರ ಹೇಳಿಕೆಯನ್ನು ಖಂಡಿಸಿ ನೆಲಮಂಗಲ ಪಟ್ಟಣದ ತಾಲ್ಲೂಕು ಕಚೇರಿ ಎದುರು ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು
ಬಾಬಾ ರಾಮ್‌ದೇವ್‌ ಅವರ ಹೇಳಿಕೆಯನ್ನು ಖಂಡಿಸಿ ನೆಲಮಂಗಲ ಪಟ್ಟಣದ ತಾಲ್ಲೂಕು ಕಚೇರಿ ಎದುರು ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು   

ನೆಲಮಂಗಲ: ಬಾಬಾ ರಾಮ್‌ ದೇವ್‌ ಅವರು ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಅಣಕು ಶವಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಭಾಸ್ಕರ್‌ಪ್ರಸಾದ್‌, ‘ರಾಮ್‌ ದೇವ್‌ ಅವರು ತಮ್ಮ ಜನ್ಮರಹಸ್ಯ ತಿಳಿಸಲಿ. ಗುರುಗಳ ಸ್ಥಾನದಲ್ಲಿರುವವರು ಸರ್ವರಿಗೂ ಜ್ಞಾನದ ಬೆಳಕನ್ನುಂಟು ಮಾಡುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ರಾಜಕೀಯ ಪಕ್ಷದ ವಕ್ತಾರನಂತೆ ಮಾತನಾಡಬಾರದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಕೂಲಿ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಗಂಗಬೈಲಪ್ಪ ಮಾತನಾಡಿದರು. ಒಕ್ಕೂಟದ ವತಿಯಿಂದ ತಹಶೀಲ್ದಾರ್‌ ರಾಮಕೃಷ್ಣಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ಸಂಚಾಲಕ ಟಿ.ನಾರಾಯಣಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ಎನ್‌.ನಾಗರಾಜು ಮತ್ತಿತರರು ಇದ್ದರು.

ಹೊಸಕೋಟೆ ವರದಿ: ಯೋಗಗುರು ಬಾಬಾ ರಾಮ್ ದೇವ್ ಅವರು ದಲಿತ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ತಾಲ್ಲೂಕು ಘಟಕದ ಪರಿಶಿಷ್ಟ ಜಾತಿ/ಪಂಗಡ ಘಟಕದ ಸದಸ್ಯರು ಸೋಮವಾರ ಪ್ರತಿಭಟನೆ ಮಾಡಿದರು. ಕಾಂಗ್ರೆಸ್ ಕಚೇರಿಯಿಂದ ತಾಲ್ಲೂಕು ಕಚೇರಿಯವರೆಗೆ ಮೆರವಣಿಗೆಯಲ್ಲಿ ತೆರಳಿದ ಅವರು ತಾಲ್ಲೂಕು ಕಚೇರಿ ಎದುರು ರಾಮ್ ದೇವ್ ಅವರ ಪ್ರತಿಕೃತಿ ದಹನ ಮಾಡಿದರು.

ನಂತರ ಉಪತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಪುರಸಭೆ ಅಧ್ಯಕ್ಷೆ ಗುಲಾಬ್ ಜಾನ್, ಉಪಾಧ್ಯಕ್ಷೆ ಗಿರಿಜಮ್ಮ, ಮುಖಂಡರಾದ ಮಂಜುನಾಥ್, ಚಿನ್ನಸ್ವಾಮಿ, ಅಬ್ದುಲ್ಲಾ, ಕೆ.ರಮೇಶ್, ಎನ್.ಕುಮಾರ್, ನರಸಿಂಹಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.