ADVERTISEMENT

ವಾರ್ಡ್ ಮೀಸಲಾತಿ ಕರಡು ಇಂದು ಪ್ರಕಟ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST

ಬೆಂಗಳೂರು: ರಾಜ್ಯದ ಏಳು ಮಹಾನಗರ ಪಾಲಿಕೆಗಳೂ ಸೇರಿದಂತೆ 209 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿಯ ಕರಡು ಪಟ್ಟಿ ಮಂಗಳವಾರ ಪ್ರಕಟವಾಗಲಿದೆ. ಹೈಕೋರ್ಟ್‌ಗೆ ನವೆಂಬರ್ 29ರಂದು ಸಲ್ಲಿಸಿದ್ದ ಪ್ರಮಾಣಪತ್ರದಂತೆ ರಾಜ್ಯಪತ್ರದಲ್ಲಿ ಕರಡು ಪಟ್ಟಿಯನ್ನು ಪ್ರಕಟಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಬರುವ ಫೆಬ್ರುವರಿ-ಮಾರ್ಚ್ ತಿಂಗಳಿನಲ್ಲಿ ಅವಧಿ ಕೊನೆಗೊಳ್ಳುವ 209 ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಕರಡು ಮೀಸಲಾತಿ ಪಟ್ಟಿ ಏಕಕಾಲಕ್ಕೆ ಪ್ರಕಟವಾಗಲಿದೆ.

ಈ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಇದೇ 12ರವರೆಗೆ ಕಾಲಾವಕಾಶ ನೀಡಲಾಗುತ್ತದೆ. ಆಕ್ಷೇಪಣೆಗಳನ್ನು ಆಲಿಸಿ, ವಿಲೇವಾರಿ ಮಾಡಿ ಡಿ.17 ಅಥವಾ ಅದಕ್ಕೂ ಮುನ್ನವೇ ವಾರ್ಡ್‌ವಾರು ಮೀಸಲಾತಿಯ ಅಂತಿಮ ಪಟ್ಟಿ ಪ್ರಕಟಿಸಲು ಸರ್ಕಾರ ಮುಂದಾಗಿದೆ. ಮೇಯರ್, ಉಪ ಮೇಯರ್, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಬರುವ ಜನವರಿ 31ರೊಳಗೆ ಅಂತಿಮಗೊಳಿಸುವುದಾಗಿ ಸರ್ಕಾರ ಈಗಾಗಲೇ ಹೈಕೋರ್ಟ್‌ಗೆ ತಿಳಿಸಿದೆ.

ADVERTISEMENT

ಫೆಬ್ರುವರಿ- ಮಾರ್ಚ್ ತಿಂಗಳಿನಲ್ಲಿ ಅವಧಿ ಕೊನೆಗೊಳ್ಳುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿ ಪಟ್ಟಿ ಸಲ್ಲಿಸದ ಸರ್ಕಾರದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ತ್ವರಿತವಾಗಿ ಮೀಸಲಾತಿ ಪಟ್ಟಿ ಒದಗಿಸುವಂತೆ ಸರ್ಕಾರಕ್ಕೆ ಆದೇಶಿಸುವಂತೆಯೂ ಮನವಿ ಮಾಡಿತ್ತು. ಈ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ನೀಡಿದ್ದ ವಾಗ್ದಾನದಂತೆ ಕರಡು ಪಟ್ಟಿ ಪ್ರಕಟಣೆಗೆ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.

ರಾಜ್ಯಪತ್ರದಲ್ಲಿ ಕರಡು ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ಅದರ ಪ್ರತಿಗಳನ್ನು ಆಯಾ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸುವ ಸಾಧ್ಯತೆ ಇದೆ.

ತ್ವರಿತವಾಗಿ ಆಕ್ಷೇಪಣೆಗಳ ವಿಲೇವಾರಿಗೂ ಸರ್ಕಾರ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.