ADVERTISEMENT

ವಿಶ್ವಕಪ್ ಕ್ರಿಕೆಟ್ ಮುಂದೂಡಿಕೆ: ಅರ್ಜಿ ವಜಾ ಮಾಡಿದ ಕೋರ್ಟ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 18:50 IST
Last Updated 17 ಫೆಬ್ರುವರಿ 2011, 18:50 IST

ಬೆಂಗಳೂರು: ಶಾಲಾ- ಕಾಲೇಜುಗಳ ಪರೀಕ್ಷಾ ಸಂದರ್ಭದಲ್ಲಿಯೇ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಇದ್ದುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಗುರುವಾರ ವಜಾ ಮಾಡಿದೆ. ಪರೀಕ್ಷಾ ಸಂದರ್ಭದಲ್ಲಿ ಪಂದ್ಯಾವಳಿ ಇರುವ ಕಾರಣ, ವಿದ್ಯಾರ್ಥಿಗಳಿಗೆ ಅನಾನುಕೂಲ ಆಗುತ್ತಿದೆ. ಇದರಿಂದ ಪಂದ್ಯದ ದಿನಾಂಕವನ್ನು ಮುಂದೂಡುವಂತೆ ಆದೇಶಿಸಬೇಕು ಎನ್ನುವುದು ಅರ್ಜಿದಾರರಾಗಿದ್ದ ‘ಅಡ್ವೊಕೇಟ್ ಫಾರ್ ಸೋಷಿಯಲ್ ಕಾಸ್’ ಮನವಿಯಾಗಿತ್ತು. ಆದರೆ ಇದನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಮಾನ್ಯ ಮಾಡಲಿಲ್ಲ.

‘ವರ್ಷ ಪೂರ್ತಿ ಒಂದಿಲ್ಲೊಂದು ಪರೀಕ್ಷೆಗಳು ನಡೆಯುತ್ತಲೇ ಇರುತ್ತವೆ. ಹಾಗೆಂದು ಪಂದ್ಯವನ್ನು ನಡೆಸಲೇಬಾರದೆ.ಇವತ್ತು ಕರ್ನಾಟಕ, ನಾಳೆ ಇನ್ನೊಂದು, ನಾಡಿದ್ದು ಮತ್ತೊಂದು ಹೀಗೆ ಎಲ್ಲ ರಾಜ್ಯಗಳಲ್ಲೂ ಅರ್ಜಿ ಸಲ್ಲಿಸುತ್ತಾ ಹೋದರೆ ಹೇಗೆ’ ಎಂದು ಪೀಠ ಪ್ರಶ್ನಿಸಿತು. ‘ದಂಡ ವಿಧಿಸದಿರುವುದು ನಿಮ್ಮ ಪುಣ್ಯ. ಅದಕ್ಕಾಗಿ ನಿಮ್ಮ ದೇವರನ್ನು ನೀವೇ ಸ್ಮರಿಸಿಕೊಂಡು ಸಂತಸಪಟ್ಟುಕೊಳ್ಳಿ’ ಎಂದು ಹಾಸ್ಯಚಟಾಕಿಯನ್ನು ನ್ಯಾಯಮೂರ್ತಿಗಳು ಸಿಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.