ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ವೆಂಕಟಸುಬ್ಬರಾವ್ ಅವರಿಗೆ ನಮ್ಮ ಬೆಂಗಳೂರು ಪ್ರತಿಷ್ಠಾನದ 2013ನೇ ಸಾಲಿನ ‘ವಾರ್ಷಿಕ ವ್ಯಕ್ತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ನಮ್ಮ ಬೆಂಗಳೂರು ಪ್ರತಿಷ್ಠಾನ ನಗರದಲ್ಲಿ ಶನಿವಾರ ಆಯೋಜಿಸಿದ್ದ 2013ನೇ ಸಾಲಿನ ‘ನಮ್ಮ ಬೆಂಗಳೂರು ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ನಾಗರಿಕ ವೈಯಕ್ತಿಕ ವಿಭಾಗದಲ್ಲಿ ಕರುಣಾಶ್ರಯ ಸಂಸ್ಥೆಯ ಸ್ಥಾಪಕ ಜಿ.ಮನೋಹರ್ ರೋ, ಯುವಜನ ವಿಭಾಗದಲ್ಲಿ ಗುಡ್‌ಹಾರ್ಟ್ ಸೋಲ್ ಸಂಸ್ಥೆಯ ಈಶ್ವರ್ ಮಹದೇವನ್, ವಿ.ಸುಭಾಷ್ ಚಂದ್ರ, ಅಮೃತ್ ಚರ್ಮನ, ನಾಗರಿಕ ಸಂಘಟನೆ ವಿಭಾಗದಲ್ಲಿ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸಬಿಲಿಟಿ, ಉದ್ದಿಮೆಗಳ ಸಾಮಾಜಿಕ ಹೊಣೆಗಾರಿಕೆ ವಿಭಾಗದಲ್ಲಿ ವಿಪ್ರೊ ಕಂಪೆನಿಗೆ ಪ್ರಶಸ್ತಿ ದೊರೆತಿದೆ.
ಸರ್ಕಾರಿ ಅಧಿಕಾರಿ ವಿಭಾಗದಲ್ಲಿ ಶಾಲಾ ಶಿಕ್ಷಕಿ ಟಿ.ಆರ್.ನಾಗಮಣಿ, ಸರ್ಕಾರಿ ಸಂಸ್ಥೆಗಳ ವಿಭಾಗದಲ್ಲಿ ಬೆಂಗಳೂರು ಒನ್, ಮಾಧ್ಯಮ ಸಂಸ್ಥೆ ವಿಭಾಗದಲ್ಲಿ ಅಂತರ್ಜಾಲ ಪತ್ರಿಕೆ ಸಿಟಿಜನ್ ಮ್ಯಾಟರ್ಸ್, ಮಾಧ್ಯಮ ವೈಯಕ್ತಿಕ ವಿಭಾಗದಲ್ಲಿ ನ್ಯೂಸ್9 ವರದಿಗಾರ ಹೇಮಂತ್ ಕಶ್ಯಪ್ ಮತ್ತು ಸಾಮಾಜಿಕ ಉದ್ದಿಮೆ ವಿಭಾಗದಲ್ಲಿ ಪೂನಂ ಬಿರ್ ಕಸ್ತೂರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಲೋಕಾಯುಕ್ತ ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ, ‘ನಗರದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಂಚಾರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆರೆಗಳು ಒತ್ತುವರಿಯಾಗುತ್ತಿವೆ. ನಗರದ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವವರನ್ನು ಗುರುತಿಸುವ ಕೆಲಸವನ್ನು ನಮ್ಮ ಬೆಂಗಳೂರು ಪ್ರತಿಷ್ಠಾನ ಮಾಡುತ್ತಿದೆ’ ಎಂದರು. ಪ್ರಶಸ್ತಿಯು ₨ 1 ಲಕ್ಷ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.