ADVERTISEMENT

`ವೈದ್ಯರಿಗೆ ಬೇಕು ಎರಡು ಹೃದಯ'

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2013, 20:03 IST
Last Updated 20 ಫೆಬ್ರುವರಿ 2013, 20:03 IST
ಸೇಂಟ್ ಜಾನ್ಸ್ ನ್ಯಾಶನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್‌ನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬುಧವಾರ ಪದವಿ ಪ್ರದಾನ ಮಾಡಿದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಹೊಸ ವೈದ್ಯರೊಂದಿಗೆ ಸಂವಾದ ನಡೆಸಿದರು 	-ಪ್ರಜಾವಾಣಿ ಚಿತ್ರ
ಸೇಂಟ್ ಜಾನ್ಸ್ ನ್ಯಾಶನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್‌ನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬುಧವಾರ ಪದವಿ ಪ್ರದಾನ ಮಾಡಿದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಹೊಸ ವೈದ್ಯರೊಂದಿಗೆ ಸಂವಾದ ನಡೆಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: `ದೇಶದ ಸಾವಿರ, ಸಾವಿರ ನಿರ್ಭಾಗ್ಯ ಹಳ್ಳಿಗಳು ನಿಮಗಾಗಿ ಎದುರು ನೋಡುತ್ತಿವೆ. ಜೈವಿಕ ಹೃದಯದ ಜೊತೆಗೆ ಕರುಣಾ ಹೃದಯವನ್ನೂ ಹೊತ್ತು ಪ್ರೀತಿಯಿಂದ ಅವರ ಸೇವೆಗೆ ಧಾವಿಸಿ'

-ಪದವಿ ಪೂರೈಸಿದ ಹೊಸ ವೈದ್ಯರಿಗೆ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ನೀಡಿದ ಕರೆ ಇದು. ನಗರದ ಸೇಂಟ್ ಜಾನ್ಸ್ ನ್ಯಾಶನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್‌ನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬುಧವಾರ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

`ಸಾಮಾನ್ಯ ಮನುಷ್ಯನಿಗೆ ಒಂದೇ ಹೃದಯ ಇದ್ದರೆ ವೈದ್ಯರಿಗೆ ಎರಡು ಹೃದಯ ಇರುತ್ತವೆ. ಒಂದು ಎಲ್ಲರಿಗೂ ಇರುವಂತಹ ಜೈವಿಕ ಹೃದಯವಾದರೆ ಮತ್ತೊಂದು ಮಾನವೀಯ ಅಂತಃಕರಣವನ್ನು ಸ್ಫುರಿಸುವಂತಹ ಕರುಣಾ ಹೃದಯ. ಅಂತಹ ಹೃದಯವನ್ನು ಎಲ್ಲ ವೈದ್ಯರೂ ಹೊಂದಬೇಕು' ಎಂದು ಕಿವಿಮಾತು ಹೇಳಿದರು.

`ಎಲ್ಲ ವೈದ್ಯರೂ ಹಳ್ಳಿಗಳಲ್ಲಿ ಸೇವೆ ಸಲ್ಲಿಸಬೇಕು ಎಂಬುದು ನನ್ನ ಉತ್ಕಟ ಅಭಿಲಾಷೆ. ನನ್ನ ಈ ಬೇಡಿಕೆ ಈಡೇರುವುದಿಲ್ಲ ಎನ್ನುವುದು ಕೂಡ ನನಗೆ ಚೆನ್ನಾಗಿ ಗೊತ್ತು. ಆದರೆ, ನಿಮ್ಮಲ್ಲಿ ಕೆಲವರಾದರೂ ಗ್ರಾಮೀಣ ಭಾಗದಲ್ಲಿ ಖಂಡಿತವಾಗಿ ಸೇವೆ ಸಲ್ಲಿಸುತ್ತೀರಿ ಎಂಬ ಭರವಸೆ ನನಗಿದೆ' ಎಂದು ಹೇಳಿದರು.

`ಮೈಸೂರು ಬಳಿ ಬಿಳಿಗಿರಿರಂಗನ ಬೆಟ್ಟದಲ್ಲಿ ಡಾ.ಎಚ್. ಸುದರ್ಶನ್ ಗಿರಿಜನರ ಸೇವೆಗೆ ಗುಡಿಸಲಲ್ಲಿಯೇ ಆಸ್ಪತ್ರೆ ಆರಂಭಿಸಿದ್ದು ನನ್ನ ಮನಸ್ಸನ್ನು ಗಾಢವಾಗಿ ತಟ್ಟಿದೆ. ತಮಿಳುನಾಡಿನಲ್ಲಿ ಸಾವಿರ, ಸಾವಿರ ಮಂದಿಗೆ ಕಣ್ಣು ನೀಡಿದ ಡಾ.ಜಿ. ವೆಂಕಟಸ್ವಾಮಿ ಜನರ ಪಾಲಿಗೆ ದೇವರಂತೆಯೇ ಕಂಡಿದ್ದಾರೆ. ಇವರ ಸೇವೆಯಿಂದ ಗ್ರಾಮೀಣ ಭಾಗದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಿದೆ. ಇಂತಹ ಸಾವಿರಾರು ಸುದರ್ಶನ-ವೆಂಕಟಸ್ವಾಮಿಗಳು ದೇಶಕ್ಕೆ ಈಗ ಬೇಕಾಗಿದೆ' ಎಂದು ಆದರ್ಶಗಳನ್ನು ಕಟ್ಟಿಕೊಟ್ಟರು.

`ತತ್ವಾದರ್ಶ, ತಾಳ್ಮೆ, ಏಕಾಗ್ರತೆ, ಜಾಣ್ಮೆ, ಅಂತಃಕರಣ ಮತ್ತು ಸೇವಾ ಮನೋಭಾವ ಹೊಂದಿದ ವ್ಯಕ್ತಿ ಉತ್ತಮ ವೈದ್ಯನಾಗಬಲ್ಲ' ಎಂದ ಹೇಳಿದರು. `ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ಜೊತೆ, ಜೊತೆಯಾಗಿ ಹೆಜ್ಜೆ ಹಾಕಬೇಕಿದೆ. ಪರಿಸರವನ್ನು ಅಲಕ್ಷಿಸುವ ಯಾವುದೇ ನಡೆಯೂ ಅಪಾಯಕಾರಿ' ಎಂದು ತಿಳಿಸಿದರು.

`ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಸಮ್ಮಿಳಿತದಿಂದ ಜೈವಿಕ ಮಾಹಿತಿ ಶಾಸ್ತ್ರವೇ ಹುಟ್ಟಿಕೊಂಡಿದೆ. ಸೂಕ್ಷ್ಮ ರೋಬಾಟ್‌ಗಳನ್ನು ಶೋಧಿಸಲಾಗಿದ್ದು, ಇವುಗಳು ಮಾನವನ ಹೃದಯದ ತುಂಬಾ ಅಲೆದಾಡಿ ಅಗತ್ಯ ಮಾಹಿತಿ ರವಾನಿಸುತ್ತವೆ. ಕೊನೆಗೆ ಅಲ್ಲಿಯೇ ಜೀರ್ಣ ಹೊಂದುತ್ತವೆ. ತಂತ್ರಜ್ಞಾನದ ಆಳ-ಅಗಲ ನಿತ್ಯವೂ ಬದಲಾಗುತ್ತಿದೆ. ಸೂಕ್ಷ್ಮ ವಿಜ್ಞಾನ ವೇಗವಾಗಿ ಬೆಳೆಯುತ್ತಿದೆ' ಎಂದು ಪ್ರತಿಪಾದಿಸಿದರು.

ಆರ್ಚ್‌ಬಿಷಪ್ ಅಲ್ಫಾನ್ಸಸ್ ಮಥಾಯಿಸ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಡಾ ಲಾರೆನ್ಸ್ ಡಿ'ಸೋಜಾ, ಸಹ ನಿರ್ದೇಶಕ ಮ್ಯಾಥ್ಯೂ ಕಟ್ಟಿಯಾಂಗಲ್, ಡೀನ್ ಡಾ. ಪ್ರೇಮ್ ಪಿ. ಹಾಜರಿದ್ದರು.

`ನಾನು ಹಾರುವೆ'
`ಐ ವಿಲ್ ಫ್ಲೈ, ಐ ವಿಲ್ ಫ್ಲೈ'
(ನಾನು ಹಾರುವೆ, ನಾನು ಹಾರುವೆ)
-ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಕೇಳಿದ `ಮಕ್ಕಳಿಗೆ ನಿಮ್ಮ ಸಂದೇಶ ಏನು' ಎಂಬ ಪ್ರಶ್ನೆಗೆ ಈ ಹಾಡು ಹೇಳಿದ ಡಾ. ಕಲಾಂ, ಅವಳ ಪ್ರಶ್ನೆಗೆ ಇದೇ ನನ್ನ ಉತ್ತರ ಎಂದು ತಿಳಿಸಿದರು.

ಹಾಡಿನ ಮುಂದಿನ ಸಾಲುಗಳು ಹೀಗಿದ್ದವು:
ನನಗೆ ಶಕ್ತಿ ಇದೆ, ಯುಕ್ತಿ ಇದೆ
ಆತ್ಮ ವಿಶ್ವಾಸ ಪುಟಿದೇಳುತಿದೆ
ನನಗೆ ರೆಕ್ಕೆಗಳಿವೆ, ಕನಸುಗಳಿವೆ
ನಾನು ಹಾರುವೆ, ನಾನು ಹಾರುವೆ'
ಸಭಾಂಗಣದಲ್ಲಿ ನೆರೆದಿದ್ದ ಎಲ್ಲರಿಂದಲೂ ಈ ಹಾಡು ಹೇಳಿಸಿದ ಅವರು, ಇದಕ್ಕಿಂತ ಬೇರೆ ಯಾವ ಸಂದೇಶ ಬೇಕು ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.