ADVERTISEMENT

ಶಾಲಾ ಮಕ್ಕಳೊಂದಿಗೆ ನಲಿದ ತೆರೆಸಾ ಮೇ!

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2016, 20:33 IST
Last Updated 8 ನವೆಂಬರ್ 2016, 20:33 IST
‘ಅಲ್ಲಿ ಬಂತು ನೋಡಿ ವಿಮಾನ...’ ತರಹುಣಸೆ ಗ್ರಾಮದ ಸ್ಟೋನ್‌ಹಿಲ್‌ ಸರ್ಕಾರಿ ಶಾಲೆಯಲ್ಲಿ ಮಕ್ಕಳೊಂದಿಗೆ ಬಾನಂಗಳದತ್ತ ಕಣ್ಣುನೆಟ್ಟ ಬ್ರಿಟನ್‌ ಪ್ರಧಾನಿ ತರೇಸಾ ಮೇ –ಪಿಟಿಐ ಚಿತ್ರ
‘ಅಲ್ಲಿ ಬಂತು ನೋಡಿ ವಿಮಾನ...’ ತರಹುಣಸೆ ಗ್ರಾಮದ ಸ್ಟೋನ್‌ಹಿಲ್‌ ಸರ್ಕಾರಿ ಶಾಲೆಯಲ್ಲಿ ಮಕ್ಕಳೊಂದಿಗೆ ಬಾನಂಗಳದತ್ತ ಕಣ್ಣುನೆಟ್ಟ ಬ್ರಿಟನ್‌ ಪ್ರಧಾನಿ ತರೇಸಾ ಮೇ –ಪಿಟಿಐ ಚಿತ್ರ   

ಬೆಂಗಳೂರು: ಶಾಲಾ ಅಂಗಳದಲ್ಲಿ ಬ್ರಿಟನ್‌ ಪ್ರಧಾನಿ ತೆರೇಸಾ ಮೇ ಅವರೊಂದಿಗೆ ಚರ್ಚೆ ಮಾಡುವ ಅದೃಷ್ಟ, ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ನೋಡುವ ಅವಕಾಶ! – ಹೀಗೆ ಏಕಕಾಲಕ್ಕೆ ಎರಡೆರಡು ಖುಷಿ ಅನುಭವಿಸಿದ್ದು ಬೆಂಗಳೂರು ಉತ್ತರ ತಾಲ್ಲೂಕು ಯಲಹಂಕ ಬಳಿಯ ತರಹುಣಸೆ ಗ್ರಾಮದ ಸ್ಟೋನ್‌ಹಿಲ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು.

‘ನಮ್ಮ ಶಾಲೆಗೆ ಬ್ರಿಟನ್‌ ಪ್ರಧಾನಿ ಭೇಟಿ ನೀಡಿರುವುದು ಬಹಳ ಖುಷಿಯಾಗಿದೆ. ಸಾಮಾನ್ಯವಾಗಿ ಅವರನ್ನು ಇಷ್ಟು ಹತ್ತಿರದಿಂದ  ನೋಡುವ ಅವಕಾಶ ಸಿಗುವುದಿಲ್ಲ’ ಎಂದು 8ನೇ ತರಗತಿ ವಿದ್ಯಾರ್ಥಿನಿ ಅನುಷಾ ಸಂತಸದಿಂದ ಹೇಳಿದಳು.

‘ನಾನು ಅವರೊಂದಿಗೆ ಮಾತನಾಡಿದೆ. ನಮ್ಮ ಶಾಲೆಗೆ ಭೇಟಿ ನೀಡಿದ್ದಕ್ಕೆ ಧನ್ಯವಾದ ತಿಳಿಸಿದೆ. ಅದಕ್ಕೆ ಪ್ರತಿಯಾಗಿ ಅವರೂ ವಂದನೆ ಹೇಳಿದರು. ಇದು ನನ್ನ ಜೀವನದಲ್ಲಿ ಮರೆಯಲಾಗದ ಘಟನೆ’ ಎಂದು ಅದೇ ತರಗತಿಯ ಮುಕೇಶ್‌ ಸಂತೋಷ ಹಂಚಿಕೊಂಡ.

ADVERTISEMENT

1942ರಲ್ಲಿ ಪ್ರಾರಂಭಗೊಂಡ ಈ ಸರ್ಕಾರಿ ಶಾಲೆ, ಖಾಸಗಿ ಶಾಲೆಯನ್ನು ಮೀರಿಸುವಂತೆ ಕಾರ್ಯನಿರ್ವಹಿಸುತ್ತಿದೆ.  ಕಳೆದ ವರ್ಷ ಈ ಶಾಲೆಯನ್ನು ದತ್ತು ಪಡೆದ ಎಂಬೆಸಿ ಕಾರ್ಪೊರೇಟ್ ಸಂಸ್ಥೆ ಹಾಗೂ ಬ್ರಿಟನ್ ರಾಯಭಾರಿ ಕಚೇರಿ ಸುಮಾರು ₹3 ಕೋಟಿ ವೆಚ್ಚದಲ್ಲಿ ಶಾಲೆಯನ್ನು ಅಭಿವೃದ್ಧಿಗೊಳಿಸಿವೆ. ಹೀಗಾಗಿ ಈ ಶಾಲೆಗೆ ತೆರೇಸಾ ಮೇ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ 124 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 224 ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.

ಶಾಲಾ ಮುಖ್ಯ ಶಿಕ್ಷಕಿ ಶೋಭಾ ದೇವಿ ಅವರು ಮಾತನಾಡಿ, ‘ತೆರೇಸಾ ಅವರಿಗೆ ಶಾಲೆಯ ಬಗ್ಗೆ ಸಂಪೂರ್ಣ ಪರಿಚಯ ಮಾಡಿಕೊಡಲಾಯಿತು. ರಾಜ್ಯದಲ್ಲಿಯೇ ನಮ್ಮ ಶಾಲೆ ಅತ್ಯುತ್ತಮ ಎನ್ನುವ ಕಾರಣಕ್ಕೆ  ವಿದೇಶಿ ಪ್ರಧಾನಿಯೊಬ್ಬರು ಭೇಟಿ ನೀಡುವುದು ನಮಗೆ ಹೆಮ್ಮೆಯ ವಿಷಯ. ಸುತ್ತಮುತ್ತ ಐದಾರು ಹಳ್ಳಿಯ ಮಕ್ಕಳು ನಮ್ಮ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ನಮ್ಮ ಮಕ್ಕಳಿಗೆ ಇದೊಂದು ಉತ್ತಮ ಅವಕಾಶ’ ಎಂದು ಹೇಳಿದರು.

ಏರ್ ಷೋ
ಭಾರತೀಯ ವಾಯುಪಡೆಯ ಮೂರು ತರಬೇತಿ ಯುದ್ಧ ವಿಮಾನಗಳು, ತೇಜಸ್ ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್‌ ಬಾನಂಗಳದಲ್ಲಿ ಹಾರಾಟ ಮಾಡುವ ಮೂಲಕ ಮಕ್ಕಳನ್ನು ಬೆರಗುಗೊಳಿಸಿದವು. ಈ ವೇಳೆ ತೆರೇಸಾ ಅವರು ಭಾರತ, ಕನ್ನಡ ಮತ್ತು ಬ್ರಿಟನ್‌ ಬಾವುಟದ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದರು.

ಸೋಮೇಶ್ವರಸ್ವಾಮಿ ದರ್ಶನ

ಬೆಂಗಳೂರು: ಬ್ರಿಟನ್‌ ಪ್ರಧಾನಮಂತ್ರಿ ತೆರೇಸಾ ಮೇ ಅವರು ಮಂಗಳವಾರ ಹಲಸೂರಿನ ಶ್ರೀ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಭಾರತೀಯ ನಾರಿಯ ಶೈಲಿಯಲ್ಲಿ ಸೀರೆಯುಟ್ಟಿದ್ದ ತೆರೇಸಾ, ಮಧ್ಯಾಹ್ನ 3.15ಕ್ಕೆ ದೇವಸ್ಥಾನಕ್ಕೆ ಬಂದರು. ಮೊದಲು ಮೂರು ಸುತ್ತು ಪ್ರದಕ್ಷಿಣೆ ಹಾಕಿದ ಅವರು, ಪ್ರಧಾನ ಅರ್ಚಕ ರಾಮನಾಥ್ ದೀಕ್ಷಿತ್ ಅವರಿಂದ ದೇವಾಲಯದ ಇತಿಹಾಸದ ಬಗ್ಗೆ ಮಾಹಿತಿ ಪಡೆದರು.

ವೇದಗೋಷ್ಠಿ, ಪೂರ್ಣಕುಂಭಗಳ ಮೂಲಕ ಬ್ರಿಟನ್ ಪ್ರಧಾನಿಯರನ್ನು ಸ್ವಾಗತಿಸಲಾಯಿತು. ಉಯ್ಯಾಲೆ ಮಂಟಪದ ಎದುರು ಪೂಜೆ ನೆರವೇರಿಸಿದ ಬಳಿಕ ಮುಜರಾಯಿ ಇಲಾಖೆ ಆಯುಕ್ತ ಷಡಕ್ಷರಸ್ವಾಮಿ  ಅವರು ತೆರೇಸಾ ಅವರನ್ನು ಸನ್ಮಾನಿಸಿದರು. ಶ್ರೀಗಂಧದ ನಟರಾಜನ ವಿಗ್ರಹವನ್ನು ಸ್ಮರಣಿಕೆಯಾಗಿ ಅವರಿಗೆ ನೀಡಿದರು.

ಪ್ರಧಾನಿ ಮೆಚ್ಚುಗೆ: ‘ವಿಶಿಷ್ಟ ಶೈಲಿಯ ವಾಸ್ತು ಶಿಲ್ಪವನ್ನು ಹೊಂದಿರುವ ಈ ದೇವಸ್ಥಾನದ ಪ್ರಾಂಗಣದಲ್ಲಿ 48 ಬೃಹತ್ ಕಂಬಗಳಿವೆ.

ಅವುಗಳ ಮೇಲೆ ಸನಾತನ ಧರ್ಮದ ಪುರಾಣದಲ್ಲಿ ಉಲ್ಲೇಖವಾಗುವ ವಿವಿಧ ದೇವರುಗಳ ಕೆತ್ತನೆ ಇರುವುದರಿಂದ ಪ್ರತಿ ಕಂಬವೂ ಭವ್ಯ ಇತಿಹಾಸವನ್ನು ಸಾರುತ್ತದೆ’ ಎಂದು ಅರ್ಚಕ ರಾಮನಾಥ್ ದೀಕ್ಷಿತ್ ತೆರೇಸಾ ಅವರಿಗೆ ವಿವರಿಸಿದರು.

ಪ್ರತಿ ಮಾತನ್ನೂ ಕುತೂಹಲದಿಂದ ಆಲಿಸಿ ದೇವಸ್ಥಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ತೆರೇಸಾ, ‘ಈ ಭೇಟಿ ಇಷ್ಟವಾಯಿತು’ ಎಂದು ಹೇಳಿ 3.50ಕ್ಕೆ ಹೊರಟರು. ಪ್ರಧಾನಿ ಭೇಟಿ ಕಾರಣದಿಂದ ದೇವಸ್ಥಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆ ರಸ್ತೆಯಲ್ಲಿ ವಾಹನಗಳ ಸಂಚಾರ ಹಾಗೂ ಪಾರ್ಕಿಂಗ್ ಕೂಡ ನಿರ್ಬಂಧಿಸಲಾಗಿತ್ತು.

ಪಟ್ಟಿಯಲ್ಲಿ 3 ದೇವಸ್ಥಾನ: ಬೆಂಗಳೂರು ಭೇಟಿ ಖಚಿತವಾಗುತ್ತಿದ್ದಂತೆಯೇ ತೆರೇಸಾ ಮೇ ಅವರು ಪುರಾತನ ದೇವಾಸ್ಥಾನವೊಂದಕ್ಕೆ ಭೇಟಿ ನೀಡಲು ಆಸಕ್ತಿ ತೋರಿದ್ದರು.

ಅದರಂತೆ ಬ್ರಿಟನ್ ರಾಯಭಾರಿ ಕಚೇರಿ ಅಧಿಕಾರಿಗಳು ಮಲ್ಲೇಶ್ವರದ ಕಾಡು ಮಲ್ಲೇಶ್ವರ, ಬಸವನಗುಡಿಯ ಗವಿ ಗಂಗಾಧರೇಶ್ವರ ಹಾಗೂ ಹಲಸೂರಿನ ಸೋಮೇಶ್ವರ ದೇವಸ್ಥಾನಗಳನ್ನು ಆಯ್ಕೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.