ಬೆಂಗಳೂರು: ಆಂಧ್ರಪ್ರದೇಶದ `ಲಕ್ಷ್ಮಿಂಪೇಟ ದಲಿತರ ಹತ್ಯಾಕಾಂಡ' ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಸಮತಾ ಸೈನಿಕ ದಳ ಮತ್ತು ಭಾರತೀಯ ರಿಪಬ್ಲಿಕ್ ಪಕ್ಷದ ಕಾರ್ಯಕರ್ತರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಉಪವಾಸ ಸತ್ಯಾಗ್ರಹ ನಡೆಸಿದರು.
`ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಲಕ್ಷ್ಮೀಪೇಟದಲ್ಲಿ 2012ರ ಜೂ.12 ರಂದು ದಲಿತರ ಮೇಲೆ ಸವರ್ಣೀಯರು ನಡೆಸಿದ ದಾಳಿಯಲ್ಲಿ ಐದು ಮಂದಿ ಸಾವನ್ನಪ್ಪಿದ್ದರು. ಸುಮಾರು 20 ಮಂದಿ ಕೈ-ಕಾಲುಗಳನ್ನು ಕಳೆದುಕೊಂಡು ಶಾಶ್ವತ ಅಂಗವಿಕಲರಾದರು. ಪ್ರಕರಣದ ಆರೋಪಿಗಳಿಗೆ ಈವರೆಗೂ ಶಿಕ್ಷೆಯಾಗಿಲ್ಲ' ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
`ಮಡ್ಡುವಲಸ ಎಂಬ ನೀರು ಸಂಗ್ರಹ ಯೋಜನೆಗಾಗಿ ಸರ್ಕಾರ 4,000 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿತ್ತು. ಆ ಯೋಜನಾ ಕಾಮಗಾರಿ ನಂತರ 250 ಎಕರೆ ಫಲವತ್ತಾದ ಭೂಮಿ ಉಳಿದಿತ್ತು. ಆ ಉಳಿಕೆ ಭೂಮಿಯನ್ನು ತಮಗೆ ಹಂಚಬೇಕು ಎಂದು ಆಗ್ರಹಿಸಿ ದಲಿತರು ಹೋರಾಟ ಆರಂಭಿಸಿದ್ದರು. ಇದೇ ಹೋರಾಟ ಅಂದಿನ ಹತ್ಯಾಕಾಂಡಕ್ಕೆ ಕಾರಣವಾಯಿತು ಎಂದರು.
ಎಪಿಸಿಸಿ ಅಧ್ಯಕ್ಷ ಬೊಚ್ಚಾ ಸತ್ಯನಾರಾಯಣ ಅವರ ಸಂಬಂಧಿ ಬೊಚ್ಚಾ ವಾಸುದೇವರಾವ್ ನೇತೃತ್ವದಲ್ಲೇ ಈ ದಾಳಿ ನಡೆದಿದ್ದರಿಂದ ಆರೋಪಿಗಳಿಗೆ ಶಿಕ್ಷೆ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ' ಎಂದು ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ ವೆಂಕಟಸ್ವಾಮಿ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.