ADVERTISEMENT

ಸಂಕ್ರಾಂತಿ ಸ್ವಾಗತೋತ್ಸವ...

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 18:55 IST
Last Updated 14 ಜನವರಿ 2012, 18:55 IST
ಸಂಕ್ರಾಂತಿ ಸ್ವಾಗತೋತ್ಸವ...
ಸಂಕ್ರಾಂತಿ ಸ್ವಾಗತೋತ್ಸವ...   

ಬೆಂಗಳೂರು: `ಕುವೆಂಪು ಮತ್ತು ಚಂದ್ರಶೇಖರ ಕಂಬಾರರಂತಹ ಶೂದ್ರ ಸಾಹಿತಿಗಳು ತಮ್ಮ ಕೃತಿಯ ಮೂಲಕ ವಿಶ್ವಭಾತೃತ್ವವನ್ನು ಜಗತ್ತಿಗೆ ಸಾರಿದರು~ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಎಸ್. ಆರ್.ನಾಯಕ್ ಅಭಿಪ್ರಾಯಪಟ್ಟರು.

ಭಾರತ ಯುವಕೇಂದ್ರವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಂಕ್ರಾಂತಿ ಸ್ವಾಗತೋತ್ಸವ ಮತ್ತು ಸಾಂಸ್ಕ್ರತಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ವಿವಿಧ ಸಿದ್ಧಾಂತದ ನೆಲೆಯಲ್ಲಿ ಮೂಡಿಬರುವ ಸಾಹಿತ್ಯ ಕೃಷಿಯು ಓದುಗರನ್ನು ವಿಶ್ವಮಾನವ ಪಂಥವನ್ನು ಅನುಸರಿಸುವಂತೆ ಪ್ರೇರೇಪಿಸಬೇಕು. ಆಗ ಮಾತ್ರ ಸಾಹಿತ್ಯ ವಲಯವು ಸಾರ್ಥಕ್ಯ ಪಡೆಯುತ್ತದೆ~ ಎಂದು ಹೇಳಿದರು.

`ಮಣ್ಣಿನ ಸೊಗಡನ್ನು ಚಿಂತನೆಯಲ್ಲಿ ಆಳವಡಿಸಿಕೊಂಡು ಬರೆದಾಗ ಮಾತ್ರ ಸಾಹಿತ್ಯ ಕೃತಿಗಳು ಶ್ರೇಷ್ಠವೆನಿಸುತ್ತದೆ. ಈ ನಿಟ್ಟಿನಲ್ಲಿ ಯುವ ಸಾಹಿತಿಗಳು ಚಿಂತನೆ ನಡೆಸುವ ಅಗತ್ಯವಿದೆ~ ಎಂದರು.

ಸಂಸದ ಎನ್.ಚಲುವರಾಯಸ್ವಾಮಿ ಮಾತನಾಡಿ, `ಪ್ರಸ್ತುತ ದಿನಗಳಲ್ಲಿ ವಿವಿಧ ರಂಗಗಳಲ್ಲಿ ಸಾಧನೆ  ಮಾಡಿರುವ ಸಾಧಕರಿಗೆ ಕೊರತೆಯಿಲ್ಲ. ಅವರನ್ನು ಸೂಕ್ತ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸುವ ಜನರ ಕೊರತೆಯಿದೆ. ಸಾಧಕರಿಗೆ ನಿರಂತರವಾಗಿ ಪ್ರೋತ್ಸಾಹ ನೀಡಬೇಕು~ ಎಂದು ಹೇಳಿದರು.

ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು. ಸಾಹಿತಿ ಡಾ.ಚಂದ್ರಶೇಖರ ಕಂಬಾರ ದಂಪತಿ ಹಾಗೂ ಸಂಗೀತ ಕಲಾವಿದೆ ಶ್ಯಾಮಲಾ ಜಿ ಭಾವೆ ಅವರಿಗೆ ಸನ್ಮಾನ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಇ.ಕೃಷ್ಣಪ್ಪ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.