ಬೆಂಗಳೂರು: `ಸಮಕಾಲೀನ ಸಾಹಿತ್ಯದ ವಿಷಯವನ್ನು ತಿಳಿಸುವ ಮೂಲಕ ಸಂಚಯ ಪತ್ರಿಕೆಯು ಸಾಹಿತ್ಯದ ಅಧ್ಯಯನಕ್ಕೆ ಹೊಸ ಆಯಾಮವನ್ನು ನೀಡುತ್ತಿದೆ~ ಎಂದು ಚಿಂತಕ ಡಾ.ಜಿ.ರಾಮಕೃಷ್ಣ ಹೇಳಿದರು.
ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಯೋಜಿಸಿದ್ದ ಸಂಚಯ ಪತ್ರಿಕೆಯ ಬೆಳ್ಳಿಹಬ್ಬದ ಸಮಾರಂಭದಲ್ಲಿ ಪತ್ರಿಕೆಯ ನೂರನೇ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, `ಸಂಚಯ ಒಂದು ವಿಶಿಷ್ಟ ಸಾಹಿತ್ಯಿಕ ಪತ್ರಿಕೆ. ಯಾವುದೇ ಒಂದು ಪತ್ರಿಕೆ ಎಷ್ಟು ಪ್ರಸಾರವಾಗುತ್ತದೆ ಎಂಬುದಕ್ಕಿಂತ ಆ ಪತ್ರಿಕೆ ಪ್ರತಿಪಾದಿಸುವ ಮೌಲ್ಯ ದೊಡ್ಡದು~ ಎಂದರು.
ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, `ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯ ಪತ್ರಿಕೆಗಳ ಪ್ರಸ್ತುತೆಯ ಕುರಿತು ಚರ್ಚೆ, ಸಂವಾದಗಳು ನಡೆಯಬೇಕಾದ ಅಗತ್ಯವಿದೆ~ ಎಂದು ಹೇಳಿದರು.`ಪತ್ರಿಕೆಯ ಗಾತ್ರಕ್ಕಿಂತ ಅದು ಎಷ್ಟು ಜನರನ್ನು ತಲುಪುತ್ತದೆ ಎಂಬುದು ಮುಖ್ಯ. ಒಂದು ಸಾಹಿತ್ಯದ ಪತ್ರಿಕೆ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ಕನ್ನಡದ ಹೆಮ್ಮೆ~ ಎಂದರು.
`ಒಂದು ಪತ್ರಿಕೆ ಹೆಚ್ಚು ದಿನ ಉಳಿಯಬೇಕಾದರೆ ಓದುಗರಲ್ಲಿ ಹೆಚ್ಚು ವಿಶ್ವಾಸಾರ್ಹತೆಯನ್ನು ಮೂಡಿಸಬೇಕು ಮತ್ತು ಲಾಭ - ನಷ್ಟಗಳ ಬಗ್ಗೆ ಯೋಚಿಸದೇ ಬದ್ದತೆಯಿಂದ ಕೆಲಸ ಮಾಡಬೇಕು~ ಎಂದು ಹೇಳಿದರು.
ವಿಮರ್ಶಕಿ ತಾರಿಣಿ ಶುಭದಾಯಿನಿ, ಲೇಖಕ ಕೃಷ್ಣಮೂರ್ತಿ ಬಿಳಿಗೆರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.