ADVERTISEMENT

ಸರ್ಕಾರಿ ಶಾಲೆ: ಶೇ 35ರಷ್ಟು ದಾಖಲಾತಿ ಇಳಿಕೆ

ಎಫ್‌ಕೆಸಿಸಿಐ ಸಂವಾದದಲ್ಲಿ ಸಂಸದ ವರುಣ್‌ ಗಾಂಧಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 10:28 IST
Last Updated 19 ಜೂನ್ 2018, 10:28 IST
ಎಫ್‌ಕೆಸಿಸಿಐ ಅಧ್ಯಕ್ಷ ಕೆ. ರವಿ ಅವರು ಸಂಸದ ವರುಣ್‌ ಗಾಂಧಿ ಅವರನ್ನು ಸನ್ಮಾನಿಸಿ ದರು. ನಿಯೋಜಿತ ಅಧ್ಯಕ್ಷ ಸುಧಾಕರ್‌ ಎಸ್‌. ಶೆಟ್ಟಿ ಇದ್ದಾರೆ -ಪ್ರಜಾವಾಣಿ ಚಿತ್ರ
ಎಫ್‌ಕೆಸಿಸಿಐ ಅಧ್ಯಕ್ಷ ಕೆ. ರವಿ ಅವರು ಸಂಸದ ವರುಣ್‌ ಗಾಂಧಿ ಅವರನ್ನು ಸನ್ಮಾನಿಸಿ ದರು. ನಿಯೋಜಿತ ಅಧ್ಯಕ್ಷ ಸುಧಾಕರ್‌ ಎಸ್‌. ಶೆಟ್ಟಿ ಇದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿನ ಅವ್ಯವಸ್ಥೆಯಿಂದಾಗಿ 12 ವರ್ಷಗಳಲ್ಲಿ ದೇಶದಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ಶೇ 35ರಷ್ಟು ಇಳಿಕೆಯಾಗಿದೆ ಎಂದು ಸಂಸದ ವರುಣ್‌ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದರು.

‘ಭವಿಷ್ಯ ಭಾರತದ ಸವಾಲುಗಳು ಮತ್ತು ಅವಕಾಶಗಳು’ ವಿಷಯದ ಕುರಿತು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ 5.6 ಲಕ್ಷ ಶಿಕ್ಷಕರ ಕೊರತೆ ಇದೆ. ಈ ಸಂಖ್ಯೆಯನ್ನು ಮೀರಿಸುವಷ್ಟು 6.5 ಲಕ್ಷ ಅತಿಥಿ ಶಿಕ್ಷಕರಿದ್ದಾರೆ. ಇವರಲ್ಲಿ ಶೇ 58ರಷ್ಟು ಮಂದಿ ಪದವಿಯನ್ನೇ ಪೂರ್ಣಗೊಳಿಸಿಲ್ಲ. ಹೀಗಿದ್ದಾಗ ಗುಣಮಟ್ಟದ ಶಿಕ್ಷಣವನ್ನು ನಿರೀಕ್ಷಿಸುವುದು ಹೇಗೆ’ ಎಂದು ಪ್ರಶ್ನಿಸಿದರು.

ADVERTISEMENT

‘ನೀತಿ ಆಯೋಗ 1,200 ಶಾಲೆಗಳಲ್ಲಿ ಮೂರು ಹಂತಗಳಲ್ಲಿ ಸಮೀಕ್ಷೆ ನಡೆಸಿದ್ದು, ಶೇ 26ರಷ್ಟು ಶಿಕ್ಷಕರು ಎಲ್ಲಾ ಸಂದರ್ಭಗಳಲ್ಲಿಯೂ ಗೈರಾಗಿದ್ದರು ಎಂದು ವರದಿ ಹೇಳಿದೆ. ಈ ಎಲ್ಲಾ ಕಾರಣಗಳಿಂದ ಖಾಸಗಿ ಶಾಲೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಿದೆ. ಆದರೆ, ಎಷ್ಟು ಜನರಿಗೆ ದುಬಾರಿ ಶುಲ್ಕವನ್ನು ನೀಡಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಸಾಧ್ಯ’ ಎಂದರು.

ಶಿಕ್ಷಣಕ್ಕೆ ಪಿಪಿಪಿ ಮಾದರಿ: ‘ಪ‍್ರಸ್ತುತ ಜಿಡಿಪಿಯ ಶೇ 4ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ವಿನಿಯೋಗಿಸಲಾಗುತ್ತಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಇದು ಬಹಳ ಕಡಿಮೆ. ಹೆಚ್ಚು ವಿನಿಯೋಗಿಸಿದರೆ ಮಾತ್ರ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಅದಕ್ಕಾಗಿ ಶಿಕ್ಷಣದಲ್ಲಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವ (ಪಿಪಿಪಿ) ನೀತಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ದೇಶದಲ್ಲಿನ 13 ಕೋಟಿ ಯುವ ಸಮುದಾಯ (18–29 ವಯಸ್ಸು) ಶಿಕ್ಷಣ, ತರಬೇತಿ ಹಾಗೂ ಉದ್ಯೋಗ ವಂಚಿತವಾಗಿದೆ. ವಿಪ್ರೊ, ಇನ್ಫೊಸಿಸ್‌, ಹನಿವೆಲ್‌... ಹೀಗೆ ಪ್ರತಿಷ್ಠಿತ ಐ.ಟಿ ಕಂಪನಿಗಳು ಪ್ರತಿದಿನ ನೂರಾರು ಮಂದಿಯನ್ನು ಉದ್ಯೋಗದಿಂದ ತೆಗೆಯುತ್ತಿವೆ. ಇವರಿಗೆ ಕೌಶಲಯುಕ್ತಜನ ಬೇಕಾಗಿದ್ದಾರೆ. ಕೆಲಸಕ್ಕೆ ತೆಗೆದುಕೊಂಡು ಮತ್ತೆ ಅವರಿಗೆ ತರಬೇತಿ ನೀಡುವುದು ಕಂಪನಿಗಳಿಗೆ ಹೊರೆಯಾದ ಕಾರಣ, ಕೌಶಲಯುಕ್ತರನ್ನು ಅರಸುತ್ತಿದ್ದಾರೆ. ಸಿಐಐ ಸಂಸ್ಥೆಯು 5 ಸಾವಿರ ಎಂಜಿನಿಯರಿಂಗ್‌ ಕಾಲೇಜಿನಲ್ಲಿನ 36 ಸಾವಿರ ವಿದ್ಯಾರ್ಥಿಗಳ ಸಮೀಕ್ಷೆ ನಡೆಸಿದ್ದು, ಶೇ 4.7ರಷ್ಟು ವಿದ್ಯಾರ್ಥಿಗಳು ಮಾತ್ರ ಕನಿಷ್ಠ ಬೇಡಿಕೆಗಳನ್ನು ಪೂರೈಸಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ನವೋದ್ಯಮಗಳ ಆಯಸ್ಸು ಕಡಿಮೆ: ‘ಭಾರತದಲ್ಲಿ ಭಾರಿ ಉತ್ಸಾಹದಲ್ಲಿ ಪ್ರಾರಂಭವಾದ ನವೋದ್ಯಮಗಳು ಅಷ್ಟೇ ಬೇಗ ಕಮರುತ್ತಿವೆ. ಶೇ 93ರಷ್ಟು ನವೋದ್ಯಮಗಳು ವಿಫಲವಾಗಿವೆ. ಇದಕ್ಕೆ ಹೂಡಿಕೆದಾರರಲ್ಲಿನ ನಿರುತ್ಸಾಹವೇ ಕಾರಣ. ಹೂಡಿಕೆ ಮಾಡಿದ 2–3 ವರ್ಷಗಳಲ್ಲಿಯೇ ಲಾಭ ಗಳಿಸಬೇಕು ಎನ್ನುವ ಲೆಕ್ಕಾಚಾರದಲ್ಲಿಯೇ ಇಲ್ಲಿನ ಮಂದಿ ಕಂಪನಿಗಳನ್ನು ಪ್ರಾರಂಭಿಸುತ್ತಾರೆ’ ಎಂದರು.

‘ಅಮೆಜಾನ್‌ ಚಾಲನೆಗೊಳ್ಳುವ 8 ವರ್ಷಗಳ ಮುಂಚೆಯೇ 13,800 ಮಂದಿಯನ್ನು ನೇಮಿಸಿಕೊಂಡಿತ್ತು. ಇದು ಕೇವಲ ಮಾರುಕಟ್ಟೆಯ ಸಮೀಕ್ಷೆ ಹಾಗೂ ಸಮಗ್ರ ಅಧ್ಯಯನಕ್ಕಾಗಿ. ಇದರಿಂದಲೇ ಅತೀ ಶೀಘ್ರದಲ್ಲಿ ಎಲ್ಲೆಡೆ ವ್ಯಾಪಿಸಲು ಅದಕ್ಕೆ ಸಾಧ್ಯವಾಯಿತು’ ಎಂದು ಅವರು ಉದಾಹರಣೆ ನೀಡಿದರು.

‘ಗ್ರಂಥಾಲಯದಲ್ಲಿ ಮಾಹಿತಿ ಕೊರತೆ’
ಅಮೆರಿಕ ಸಂಸತ್ತಿನಲ್ಲಿನ ಗ್ರಂಥಾಲಯದಲ್ಲಿ ಮುಂದೆ ಮಂಡನೆಯಾಗುವ ಮಸೂದೆಗಳ ಸಾಧಕ–ಬಾಧಕಗಳ ಕುರಿತು ಸಂಸದನೊಬ್ಬ ತಿಳಿದುಕೊಳ್ಳಲು ಬಯಸಿದರೆ, ತಕ್ಷಣವೇ ಅಂಕಿ–ಅಂಶಗಳ ಸಮೇತ ಎಲ್ಲಾ ಮಾಹಿತಿಗಳನ್ನು ಒದಗಿಸುತ್ತಾರೆ. ಆದರೆ, ನಮ್ಮ ಸಂಸತ್ತಿನಲ್ಲಿನ ಗ್ರಂಥಾಲಯದವರಿಗೆ ಮಸೂದೆಯ ಬಗ್ಗೆಯೇ ತಿಳಿದಿರುವುದಿಲ್ಲ. ಅದು ಅವರ ತಪ್ಪಲ್ಲ ಬಿಡಿ ಎಂದು ವರುಣ್‌ ಗಾಂಧಿ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.