ADVERTISEMENT

ಸಾಮಾಜಿಕ ಮೂಲಸೌಕರ್ಯ ಅಭಿವೃದ್ಧಿಗೆಆದ್ಯತೆ ಬೇಕು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ಬೆಂಗಳೂರು: `ನಗರದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಹೆಚ್ಚು ಗಮನ ಕೊಡುವ ಭರದಲ್ಲಿ ಸಾಮಾಜಿಕ ಮೂಲಸೌಕರ್ಯವನ್ನು ಕಡೆಗಣಿಸಲಾಗಿದೆ; ಸಾಂಸ್ಕೃತಿಕ ಜೀವನವಂತೂ ಸತ್ತೇ ಹೋಗಿದೆ~ ಎಂದು ವೆಂಕಟರಾಮನ್ ಅಸೋಸಿಯೇಟ್ಸ್ ಕಂಪೆನಿಯ ವ್ಯವಸ್ಥಾಪಕ ಪಾಲುದಾರ, ವಾಸ್ತುಶಿಲ್ಪಿ ವಿ.ನರೇಶ್ ನರಸಿಂಹನ್ ವಿಷಾದ ವ್ಯಕ್ತಪಡಿಸಿದರು.

`ಮೆಟ್ರೊ- ಬೆಂಗಳೂರಿನ ಬೆನ್ನೆಲುಬು~ ಕುರಿತ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, `ಉದ್ಯಾನ, ಆಟದ ಮೈದಾನ, ಕ್ರೀಡಾಂಗಣ, ಸಾಂಸ್ಕೃತಿಕ ಸಂಕೀರ್ಣಗಳು, ವಿಜ್ಞಾನ- ತಂತ್ರಜ್ಞಾನ ವಸ್ತುಸಂಗ್ರಹಾಲಯಗಳು ಮೊದಲಾದ ಸಾಮಾಜಿಕ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಅಗತ್ಯವಿದೆ~ ಎಂದರು.

`ನಗರದಲ್ಲಿ ಭಾರಿ ಭಾರಿ ಕಟ್ಟಡಗಳು, ಮಾಲ್‌ಗಳು, ಅಪಾರ್ಟ್‌ಮೆಂಟ್‌ಗಳು ಸಾಕೆನಿಸುವಷ್ಟು ಸಂಖ್ಯೆಯಲ್ಲಿ ನಿರ್ಮಾಣವಾಗಿವೆ. ಆದರೆ ಉದ್ಯೋಗಿಗಳು ಕೆಲಸದ ನಂತರ, ವಾರಾಂತ್ಯದಲ್ಲಿ ಕಾಲ ಕಳೆಯಲು ಒಳ್ಳೆಯ ಉದ್ಯಾನ, ಕ್ರೀಡಾಂಗಣಗಳು ಎಲ್ಲಿವೆ? ಎಲ್ಲರೂ ಬಾರ್‌ಗಳಿಗೆ ಹೋಗಬೇಕೆ ಅಥವಾ ಶಾಪಿಂಗ್ ಮಾಡಬೇಕೆ?~ ಎಂದು ಅವರು ಪ್ರಶ್ನಿಸಿದರು.

`ಮಕ್ಕಳು ಆಟವಾಡಲು, ನಡೆದಾಡಲು ಸುಸ್ಥಿತಿಯಲ್ಲಿರುವ ಮೈದಾನಗಳು ಇಲ್ಲ. ನಗರದಲ್ಲಿ ನಿರ್ಮಾಣವಾದ ಕೊನೆಯ ಉದ್ಯಾನ ಕಬ್ಬನ್ ಉದ್ಯಾನವನವಿರಬೇಕು; ಅದೂ 19ನೇ ಶತಮಾನದಲ್ಲಿ. ಇತ್ತೀಚಿನ ವರ್ಷಗಳಲ್ಲಿ ಅಂತಹ ಯಾವುದೇ ಉದ್ಯಾನ ನಿರ್ಮಾಣವಾಗಿಲ್ಲ~.

`ಮೊದಲ ಹಂತದ ಮೆಟ್ರೊ ಯೋಜನೆಗಾಗಿ 300 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಎಂ.ಜಿ ರಸ್ತೆ ಒಂದರಲ್ಲೇ ಎರಡು ಎಕರೆ ಜಮೀನು ಪಡೆಯಲಾಗಿದೆ. ಮೆಟ್ರೊ ನಿಗಮ, ಸರ್ಕಾರ ಮತ್ತು ಖಾಸಗಿ ಕಂಪೆನಿಗಳು ರಿಯಲ್ ಎಸ್ಟೇಟ್ ಅಭಿವೃದ್ಧಿ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿವೆ~.

`ನನಗೆ ಗೊತ್ತಿರುವ ಮಾಹಿತಿ ಪ್ರಕಾರ ನಗರದಲ್ಲಿ ಸಾಫ್ಟ್‌ವೇರ್ ಉದ್ಯಮದಲ್ಲಿ ನೇರ ಉದ್ಯೋಗಿಗಳಾಗಿರುವವರ ಸಂಖ್ಯೆ ಹತ್ತು ಲಕ್ಷ. ಅವರನ್ನು ಅವಲಂಬಿಸಿರುವವರ ಸಂಖ್ಯೆ 30 ಲಕ್ಷಕ್ಕೂ ಹೆಚ್ಚಿದೆ. ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಗುಣಮಟ್ಟದ ಜೀವನ ನಡೆಸಲು ಬೇಕಾದ ಪರಿಸರ ನಿರ್ಮಿಸುವ ಹೊಣೆಗಾರಿಕೆಯನ್ನು ಯಾರು ಹೊರಬೇಕು?~

`ಎಲ್ಲವನ್ನು ಸರ್ಕಾರವೇ ಮಾಡಬೇಕೆಂದು ಕುಳಿತರೇ ಆಗದು. ಸಾಫ್ಟ್‌ವೇರ್ ಉದ್ಯಮ ಸೇರಿದಂತೆ ನಗರದಲ್ಲಿ ಕಾರ್ಯನಿರ್ವಹಿಸುವ ವಾಣಿಜ್ಯೋದ್ಯಮಗಳು ಜೀವನಮಟ್ಟ ಸುಧಾರಿಸುವ ಯೋಜನೆಗಳಲ್ಲಿ ಸ್ವಯಂಪ್ರೇರಿತವಾಗಿ ತೊಡಗಿಸಿಕೊಳ್ಳಬೇಕು~ ಎಂದು ಅವರು ಕರೆ ನೀಡಿದರು.

`ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಹೆಸರಿನಲ್ಲಿ ಯಾವುದೋ ಒಂದು ಶಾಲೆಯನ್ನು ದತ್ತು ತೆಗೆದುಕೊಳ್ಳುವ ಅಥವಾ ಯಾವುದೋ ಒಂದು ಕಾರ್ಯಕ್ರಮಕ್ಕೆ ದೇಣಿಗೆ ನೀಡುವ ಬದಲು ನಗರದ ಸಮಗ್ರ ಅಭಿವೃದ್ಧಿ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು~ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.