ADVERTISEMENT

‘ಸುಪ್ರೀಂ’ ತೀರ್ಪು 29ರೊಳಗೆ ಜಾರಿ

​ಪ್ರಜಾವಾಣಿ ವಾರ್ತೆ
Published 28 ಮೇ 2018, 19:41 IST
Last Updated 28 ಮೇ 2018, 19:41 IST
‘ಸುಪ್ರೀಂ’ ತೀರ್ಪು 29ರೊಳಗೆ ಜಾರಿ
‘ಸುಪ್ರೀಂ’ ತೀರ್ಪು 29ರೊಳಗೆ ಜಾರಿ   

ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರ ವೇತನ ಶ್ರೇಣಿಯಲ್ಲೇ ಹೈಕೋರ್ಟ್ ನೌಕರರಿಗೂ ವೇತನ ನೀಡಬೇಕೆಂಬ ಸುಪ್ರೀಂ ಕೋರ್ಟ್‌ ತೀರ್ಪನ್ನು ಮಂಗಳವಾರ (ಮೇ 29) ಸಂಜೆಯೊಳಗೆ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಹೈಕೋರ್ಟ್ ನೌಕರರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹಾಗೂ ಬಿ.ವಿ.ನಾಗರತ್ನ ನೇತೃತ್ವದ ವಿಶೇಷ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಹಾಜರಿದ್ದು, ವೇತನ ಜಾರಿ ಕುರಿತಂತೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ನ್ಯಾಯಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿದರು. ಪರಿಷ್ಕೃತ ವೇತನದ ಬಾಕಿಯನ್ನು ಜೂನ್ ಅಂತ್ಯದೊಳಗೆ ಪಾವತಿಸುವುದಾಗಿಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ವೇತನ ಜಾರಿಗೊಳಿಸಿದ ಬಗ್ಗೆ ಇದೇ 30ರಂದು ವರದಿ ಸಲ್ಲಿಸಿ’ ಎಂದು ನ್ಯಾಯಪೀಠ ಸರ್ಕಾರಕ್ಕೆ ಸೂಚಿಸಿದೆ.

ಹೊಸ ವೇತನ ಶ್ರೇಣಿ 2004ರ ಅಕ್ಟೋಬರ್‌ನಿಂದ ಅನ್ವಯ ಆಗಲಿದೆ. ಇದರಿಂದ ನಿವೃತ್ತರೂ ಸೇರಿದಂತೆ 3,500ಕ್ಕೂ ಹೆಚ್ಚು ನೌಕರರಿಗೆ ಪ್ರಯೋಜನವಾಗಲಿದೆ. ಸಾಮಾನ್ಯ ಗ್ರೂಪ್‌ ‘ಡಿ’ ನೌಕರರಿಂದ ಹಿಡಿದು ಜಂಟಿ ರಿಜಿಸ್ಟ್ರಾರ್‌ವರೆಗಿನ ‘ಎ’ ದರ್ಜೆ ನೌಕರರವರೆಗೆ ಪರಿಷ್ಕೃತ ವೇತನವು ಶೇ 8ರ ಬಡ್ಡಿ ಸಮೇತ ದೊರೆಯಲಿದೆ.

ಪ್ರಕರಣವೇನು?: ‘ಹೈಕೋರ್ಟ್ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ವೇತನ ಶ್ರೇಣಿಯ ಅನುಸಾರ ವೇತನ ನಿಗದಿಪಡಿಸಬೇಕು’ ಎಂದು 2004ರಲ್ಲಿ ಅಂದಿನ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ಕೆ.ಜೈನ್‌ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ಆದರೆ ಸರ್ಕಾರ ಇದಕ್ಕೆ ಒಪ್ಪಿರಲಿಲ್ಲ. ಇದನ್ನು ನೌಕರರ ಸಂಘವು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. 2008ರಲ್ಲಿ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ನೌಕರರ ಬೇಡಿಕೆಯನ್ನು ಒಪ್ಪಿ ಅವರ ಪರವಾಗಿ ತೀರ್ಪು ನೀಡಿತ್ತು. ವಿಭಾಗೀಯ ನ್ಯಾಯಪೀಠದ ಈ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಮೂಲಕ ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟ್ 2016ರಲ್ಲಿ ಅಂತಿಮ ತೀರ್ಪು ನೀಡಿ, ನೌಕರರ ಬೇಡಿಕೆಗೆ ಅಸ್ತು ಎಂದಿತ್ತು.

ಈ ತೀರ್ಪನ್ನು ರಾಜ್ಯ ಸರ್ಕಾರ ಜಾರಿಗೊಳಿಸಿಲ್ಲ ಎಂದು ನಿಜಗುಣ ಎಂ.ಕರಡಿಗುಡ್ಡ, ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದರು.

ಸರ್ಕಾರದ ಧೋರಣೆಗೆ ಅಸಮಾಧಾನ

ಹೈಕೋರ್ಟ್‌ ನೌಕರರಿಗೆ ಪ್ರಸಕ್ತ ಸಾಲಿನ ಏಪ್ರಿಲ್ ಮತ್ತು ಮೇ ತಿಂಗಳ ವೇತನ ಪಾವತಿಸದ ಸರ್ಕಾರದ ಕ್ರಮಕ್ಕೆ ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.

ಅರ್ಜಿದಾರರ ಪರ ವಕೀಲರು, 'ಎರಡು ತಿಂಗಳಿನಿಂದ ನೌಕರರು ವೇತನವಿಲ್ಲದೆ ತೊಂದರೆ ಎದುರಿಸುತ್ತಿದ್ದಾರೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಸರ್ಕಾರದ ಪರ ವಕೀಲರು, ‘ವೇತನ ಪಾವತಿಗಾಗಿ ಸಿದ್ಧಪಡಿಸಿರುವ ಹೊಸ ಸಾಫ್ಟ್‌ವೇರ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಸರಿಯಾದ ಸಮಯಕ್ಕೆ ವೇತನ ಪಾವತಿಸಲು ಸಾಧ್ಯವಾಗಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ‘ಎರಡು ತಿಂಗಳಿನಿಂದ ವೇತನವನ್ನೇ ನೀಡಿಲ್ಲ ಎಂದರೆ ನೌಕರರು ಬದುಕು ಸಾಗಿಸುವುದಾದರೂ ಹೇಗೆ, ಅವರೇನು ಬದುಕಬೇಕೋ ಅಥವಾ ಸಾಯಬೇಕೋ, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳಿಗೂ ಸರ್ಕಾರ ಬೆಲೆ ನೀಡುವುದಿಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.