ADVERTISEMENT

ಹಕ್ಕ-ಬುಕ್ಕ ಪ್ರತಿಮೆ ಸ್ಥಾಪನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:35 IST
Last Updated 18 ಏಪ್ರಿಲ್ 2012, 19:35 IST

ಬೆಂಗಳೂರು: `ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಬಿಎಂಪಿ ವತಿಯಿಂದ ಕನಕದಾಸರು ಹಾಗೂ ಹಕ್ಕ-ಬುಕ್ಕರ ಪ್ರತಿಮೆ ಸ್ಥಾಪಿಸಬೇಕು, ನಗರದಲ್ಲಿ ನಿರ್ಮಾಣವಾಗುತ್ತಿರುವ ಹೊರವರ್ತುಲ ರಸ್ತೆಗೆ ಹಕ್ಕ- ಬುಕ್ಕರ ಹೆಸರು ಇಡಬೇಕು~ ಎಂದು ನಗರದಲ್ಲಿ ಬುಧವಾರ ನಡೆದ ವಿಜಯನಗರ ಸಂಸ್ಥಾಪನಾ ದಿನಾಚರಣೆ ಮತ್ತು 676ನೇ ಹಕ್ಕ-ಬುಕ್ಕ ಜಯಂತ್ಯುತ್ಸವದಲ್ಲಿ ಆಗ್ರಹಿಸಲಾಯಿತು.

ಕನಕ ನಾಗರಿಕ ವೇದಿಕೆ, ರಾಜ್ಯ ಹಾಲುಮತ ಮಹಾಮಂಡಲ ಹಾಗೂ ಕುರುಬ ವಿಕಾಸ ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ಎ.ಡಿ.ಎ. ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಬೇಡಿಕೆ ಮಂಡಿಸಲಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಎಚ್.ಎಂ. ರೇವಣ್ಣ ಮುಖ್ಯ ಅತಿಥಿಯಾಗಿ ಮಾತನಾಡಿ, `ಕುರುಬ ಸಮುದಾಯದ ಮುಖಂಡರು ಸಮಾಜದ ಏಳಿಗೆಗೆ ಒಗ್ಗಟ್ಟಿನಿಂದ ಶ್ರಮಿಸಬೇಕು. ರಾಜಕಾರಣಿಗಳು ಮೊದಲು ಕುರುಬರಾಗಿ ಗುರುತಿಸಿಕೊಳ್ಳಬೇಕು. ಬಳಿಕ ಪಕ್ಷಕ್ಕೆ ನಿಷ್ಠೆ ತೋರಬೇಕು~ ಎಂದು ಕಿವಿಮಾತು ಹೇಳಿದರು.

ಬಿಬಿಎಂಪಿ ಸದಸ್ಯ ವೆಂಕಟೇಶಮೂರ್ತಿ ಮಾತನಾಡಿ, `ಕುರುಬ ಸಮುದಾಯದವರು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಆದರೂ ಕುರುಬ ಸಮುದಾಯದ ಅಭಿವೃದ್ಧಿ ಕುಂಠಿತವಾಗಿದೆ. ಸಮಾಜದಲ್ಲಿ ಅನೇಕ ಕುರುಬ ಸಂಘಟನೆಗಳಿವೆ. ಆ ಸಂಘಟನೆಗಳು ಒಂದೇ ವೇದಿಕೆಯಡಿ ಬಂದು ಕಾರ್ಯನಿರ್ವಹಿಸಬೇಕು~ ಎಂದು ಸಲಹೆ ನೀಡಿದರು.

ಬಿಜೆಪಿ ಮುಖಂಡ ಆರ್. ರವೀಂದ್ರ ಮಾತನಾಡಿ, `ಸಮಾಜ ಹಕ್ಕ-ಬುಕ್ಕರನ್ನು ಮರೆತಿದೆ. ಈ ನಿಟ್ಟಿನಲ್ಲಿ ಅವರ ಸಾಧನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗಬೇಕು~ ಎಂದರು. ಪಶು ಸಂಗೋಪನೆ ಇಲಾಖೆ ಅಧಿಕಾರಿ ಎಂ.ಸಿ. ಶೇಖರಬಾಬು ಕಾರ್ಯಕ್ರಮ ಉದ್ಘಾಟಿಸಿದರು.

ಬಿಬಿಎಂಪಿ ನೌಕರರ ಸಂಘದ ಮುಖಂಡ ತರೀಕೆರೆ ಗುರುಮೂರ್ತಿ, ಕುರುಬರ ಸೇನೆ ಅಧ್ಯಕ್ಷ ಸತ್ಯಪ್ರಕಾಶ್, ಕರ್ನಾಟಕ ರಕ್ಷಣಾ ವೇದಿಕೆಯ ಕೆ.ಸಿ. ಮೂರ್ತಿ, ವಕೀಲ ಮಂಜುನಾಥ್, ಅಹಲ್ಯಬಾಯಿ ಹೋಳ್ಕರ್ ಮಹಿಳಾ ಸಂಘಟನೆಯ ಅಧ್ಯಕ್ಷೆ ವನಜಾ, ಪರಿಸರವಾದಿ ಸುರೇಶ್ ಕುಮಾರ್, ಬೆಂಗಳೂರು ಉತ್ತರ ಕುರುಬರ ಸಂಘದ ಅಧ್ಯಕ್ಷ ಮುನಿಯಪ್ಪ ಉಪಸ್ಥಿತರಿದ್ದರು.

ಕನಕ ನಾಗರಿಕ ವೇದಿಕೆ ಅಧ್ಯಕ್ಷ ಬಿ.ಕೆ. ಪ್ರಭಾಕರ್, ರಾಜ್ಯ ಹಾಲುಮತ ಮಹಾಮಂಡಲ ಅಧ್ಯಕ್ಷ ಮ.ನಾ.ಮೂರ್ತಿ, ಕುರುಬ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ಎಂ. ಸೀತಾರಾಮ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.