ADVERTISEMENT

ಹಲವು ಕಡೆ ಇನ್ನೂ ವಿಲೇವಾರಿಯಾಗದ ಕಸ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST
ಹಲವು ಕಡೆ ಇನ್ನೂ ವಿಲೇವಾರಿಯಾಗದ ಕಸ
ಹಲವು ಕಡೆ ಇನ್ನೂ ವಿಲೇವಾರಿಯಾಗದ ಕಸ   

ಮುಂದುವರಿದ ಸಮಸ್ಯೆ

ಬೆಂಗಳೂರು: ನಗರದ ತ್ಯಾಜ್ಯ ವಿಲೇವಾರಿ ಸಮಸ್ಯೆ ಸೋಮವಾರವೂ ಮುಂದುವರಿದಿದೆ. ಚಾಮರಾಜಪೇಟೆ, ಶಿವಾಜಿನಗರ, ಪುಲಿಕೇಶಿನಗರ, ದೇವರಜೀವನಹಳ್ಳಿ, ಇಟ್ಟುಮಡು, ಸಂಪಂಗಿರಾಮನಗರ, ಅಗ್ರಹಾರ ದಾಸರಹಳ್ಳಿ, ಯಲಚೇನಹಳ್ಳಿ, ಕೋಣನಕುಂಟೆ ಸೇರಿದಂತೆ  ನಗರದ ವಿವಿಧ ಬಡಾವಣೆಗಳ ರಸ್ತೆಗಳ   ಪಕ್ಕ ಹಾಗೂ ಖಾಲಿ ಜಾಗಗಳಲ್ಲಿ ಕಸ ತುಂಬಿದ್ದು ಕಂಡುಬಂತು.

`ಬಿಬಿಎಂಪಿ ಮೂರು ದಿನಗಳಿಗೊಮ್ಮೆ ಕಸ ಸಂಗ್ರಹ ಮಾಡುತ್ತಿರುವುದರಿಂದ ಮನೆಯೊಳಗೆ ಹಸಿತ್ಯಾಜ್ಯವನ್ನು ಸಂಗ್ರಹ ಮಾಡಿಟ್ಟುಕೊಳ್ಳುವುದು ಕಷ್ಟವಾಗುತ್ತಿದೆ. ಮೂರ‌್ನಾಲ್ಕು ದಿನ ಕಸವನ್ನು ಮನೆಯೊಳಗೆ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಕೆಟ್ಟ ವಾಸನೆ ತುಂಬುತ್ತದೆ. ಇದು ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ. ಹೀಗಾಗಿ ದಿನ ನಿತ್ಯ ಕಡ್ಡಾಯವಾಗಿ ಕಸ ಸಂಗ್ರಹ ಮಾಡಲು ಬಿಬಿಎಂಪಿ ಮುಂದಾಗಬೇಕು~ ಎಂದು ಪುಲಿಕೇಶಿ ನಗರದ ನಿವಾಸಿ ಮಹಮ್ಮದ್ ಯೂನಿಸ್ ಒತ್ತಾಯಿಸಿದರು.

`ನಗರದಲ್ಲಿ ಮಳೆ ಬೀಳುತ್ತಿರುವುದರಿಂದ ಕಸದೊಂದಿಗೆ ಮಳೆ ನೀರು ಸೇರಿ ಎಲ್ಲೆಂದರಲ್ಲಿ ಹರಿಯುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ತ್ಯಾಜ್ಯದ ಸಮಸ್ಯೆಯೊಂದಿಗೆ ತ್ಯಾಜ್ಯದಿಂದ ಉಂಟಾಗುವ ಕೊಳಚೆ ನೀರಿನ ಸಮಸ್ಯೆಯೂ ಜತೆಗೂಡಿಕೊಳ್ಳುತ್ತಿದೆ. ಇದರಿಂದ ಬಡಾವಣೆ ಕಸ ಹಾಗೂ ಕೊಳಚೆಯ ಗುಂಡಿಯಾಗುತ್ತಿದೆ~ ಎಂದು ಅವರು ದೂರಿದರು.

`ಬಡಾವಣೆಯಲ್ಲಿ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹ ಮಾಡುವ ವ್ಯವಸ್ಥೆಯೇ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಸಮರ್ಪಕ ತ್ಯಾಜ್ಯ ಸಂಗ್ರಹಣೆಯಿಂದ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮನೆಗಳಿಂದ ಕಸ ಸಂಗ್ರಹ ಮಾಡದೇ ಇರುವ ಸಂದರ್ಭದಲ್ಲಿ ಮನೆಯ ಕಸವನ್ನು ಮನೆಯಿಂದ ಹೊರಹಾಕಲೇ ಬೇಕಾಗುತ್ತದೆ. ಹೀಗಾಗಿ ರಸ್ತೆಗಳು ಹಾಗೂ ಖಾಲಿ ಜಾಗಗಳಲ್ಲಿ ಕಸ ರಾಶಿ ಬೀಳುತ್ತಿದೆ~ ಎಂದು ಅಗ್ರಹಾರ ದಾಸರಹಳ್ಳಿಯ ನಿವಾಸಿ ನವೀನ್ ತಿಳಿಸಿದರು.

`ಬಿಬಿಎಂಪಿ ಕಸ ಸಂಗ್ರಹ ವ್ಯವಸ್ಥೆಯನ್ನು ಆದಷ್ಟು ಬೇಗ ಸರಿಪಡಿಸದೇ ಇದ್ದಲ್ಲಿ ನಗರದ ತ್ಯಾಜ್ಯ ವಿಲೇವಾರಿ ಬೃಹತ್ ಸಮಸ್ಯೆಯಾಗಿ ಪರಿಣಮಿಸಲಿದೆ. ಹೀಗಾಗಿ ಬಿಬಿಎಂಪಿ ಕಸದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿ     ಸಬೇಕು~ ಎಂದು ಅವರು ಒತ್ತಾಯಿಸಿದರು.

`ಬೆಂಗಳೂರು ನಗರ ಬೃಹತ್ ಪ್ರಮಾಣದಲ್ಲಿ ಬೆಳೆದಿದ್ದು ಕಸದ ಸಮಸ್ಯೆಯ ನಿವಾರಣೆಗೆ ಬಿಬಿಎಂಪಿ ಸಮರ್ಪಕ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ. ಹೀಗಾಗಿ ಕಸ ನಿರ್ವಹಣೆ ಜಟಿಲ ಸಮಸ್ಯೆಯಾಗಿದೆ. ಇದು ಹೀಗೇ ಮುಂದುವರಿದರೆ ನಗರದ ತುಂಬಾ ಕಸವೇ ತುಂಬಿಕೊಳ್ಳಲಿದೆ~ ಎಂದು ಕೋಣನಕುಂಟೆ ನಿವಾಸಿ ಶ್ರೀನಿವಾಸ್ ಹೇಳಿದರು.

ವಿಲೇವಾರಿಗೆ ಮಳೆಯ ಅಡ್ಡಿ
ನಗರದ ಕಸ ವಿಲೇವಾರಿಗೆ ಮಳೆ ಅಡ್ಡಿಯಾಗುತ್ತಿದೆ. ಮಳೆಯಿಂದಾಗಿ ಮಂಡೂರಿನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ತ್ಯಾಜ್ಯ ಹೊತ್ತ ಟ್ರಕ್‌ಗಳು ಚಲಿಸಲಾಗದೇ ತೊಂದರೆಯಾಗುತ್ತಿದೆ. ಟ್ರಕ್‌ಗಳ ಚಕ್ರಗಳು ಮಣ್ಣಿನಲ್ಲಿ ಹೂತು ಹೋಗುತ್ತಿರುವುದರಿಂದ ತ್ಯಾಜ್ಯ ವಿಲೇವಾರಿ ಸ್ಥಳಕ್ಕೆ ಹೋಗಲು ತೊಂದರೆಯಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಗರದಿಂದ ಮಂಡೂರಿಗೆ ಹೋಗುವ ತ್ಯಾಜ್ಯ ನಗರದಲ್ಲೇ ಉಳಿಯುವ ಸಾಧ್ಯತೆಯಿದೆ.

`ಮಳೆಯಿಂದಾಗಿ ಟ್ರಕ್‌ಗಳಲ್ಲಿರುವ ತ್ಯಾಜ್ಯವನ್ನು ಸುರಿದು ಬರಲು ಸಾಧ್ಯವಾಗುತ್ತಿಲ್ಲ. ಜತೆಗೆ ತ್ಯಾಜ್ಯ ಸುರಿಯಲು ಸ್ಥಳೀಯರ ವಿರೋಧವೂ ಮುಂದುವರಿದಿದೆ~ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಹಬ್ಬಗಳು ಬರುತ್ತಿರುವುದರಿಂದ ನಗರದ ತ್ಯಾಜ್ಯದ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವನ್ನು ಬಿಬಿಎಂಪಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT