ಬೆಂಗಳೂರು: ‘ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ತಮ್ಮ ರಾಜಕೀಯ ಜೀವನ ಅಂತ್ಯವಾಗುತ್ತದೆ ಎನ್ನುವ ಭೀತಿಯಲ್ಲಿ ಕಾಂಗ್ರೆಸ್ ಮುಖಂಡರು ಹೂಡಿದ ಆಟವೇ ಗುಜರಾತ್ ಗಲಭೆ’ ಎಂದು ಲೇಖಕಿ ಮಧು ಕಿಶ್ವರ್ ಪ್ರತಿಪಾದಿಸಿದರು.
ನವಚೇತನ ಸಂಸ್ಥೆಯಿಂದ ನಗರದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ತಮ್ಮ ‘ಮೋದಿ, ಮುಸ್ಲಿಮ್ಸ್ ಅಂಡ್ ಮೀಡಿಯಾ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಗುಜರಾತ್ ಗಲಭೆ ಸಂಪೂರ್ಣವಾಗಿ ಕಾಂಗ್ರೆಸ್ ಪ್ರಾಯೋಜಿತ ವಾಗಿತ್ತು. ಮಾತ್ರವಲ್ಲ, ಸಮಾಜಘಾತುಕ ಶಕ್ತಿಗಳನ್ನು ಬಳಸಿಕೊಂಡು ಈ ಗಲಭೆಯನ್ನು ಸೃಷ್ಟಿಸಲಾಗಿತ್ತು’ ಎಂದು ಆಪಾದಿಸಿದರು.
‘ಕಾಂಗ್ರೆಸ್ ‘ನಿಧಿ’ಯಿಂದ ಲಾಭ ಪಡೆದ ಬುದ್ಧಿಜೀವಿಗಳು, ಚಿಂತಕರು ಮೋದಿಯನ್ನು ಅನಗತ್ಯವಾಗಿ ಟೀಕಿಸಿದರು. ವಿದೇಶಿ ಪ್ರವಾಸಗಳು ಅವರಿಗೆ ಕಾಣಿಕೆಗಳಾಗಿ ಬಂದವು. ಹಿಂದೆ ನನ್ನ ಜತೆಗಿದ್ದ ಕೆಲವು ಚಿಂತಕರೂ ಮೋದಿ ವಿರುದ್ಧದ ಕಾಂಗ್ರೆಸ್ ಪ್ರಾಯೋಜಿತ ಅಭಿಯಾನದಲ್ಲಿ ಪಾಲ್ಗೊಂಡು ಲಾಭ ಪಡೆದಿದ್ದಾರೆ’ ಎಂದು ಕುಟುಕಿದರು. ‘ಗುಜರಾತ್ ಗಲಭೆಗೆ ಕಾರಣರಾದ ವ್ಯಕ್ತಿಗಳನ್ನು ಶಿಕ್ಷಿಸುವುದು ಕಾಂಗ್ರೆಸ್ ಅಭಿಯಾನದ ಉದ್ದೇಶವಲ್ಲ. ಅದರ ಹೆಸರಿನಲ್ಲಿ ಮೋದಿಯನ್ನು ಮುಗಿಸಬೇಕೆಂಬುದೇ ಆ ಪಕ್ಷದ ಮುಖ್ಯ ಗುರಿಯಾಗಿದೆ’ ಎಂದು ಹೇಳಿದರು.
‘ಸಮಾಜದ ಯಾವ ವ್ಯಕ್ತಿಗೂ ಹಿಂಸೆ ಬೇಕಿಲ್ಲ. ಇದುವರೆಗೆ ನಡೆದ ಎಲ್ಲ ಕೋಮು ಸಂಘರ್ಷಗಳು ರಾಜಕೀಯ ಪ್ರೇರಿತವಾಗಿವೆ. ಭೂಗತ ಮಾಫಿಯಾವನ್ನು ಪೋಷಿಸಿ, ಬೆಳೆಸಿದ ಇತಿಹಾಸ ಕಾಂಗ್ರೆಸ್ ಪಕ್ಷದ್ದಾಗಿದೆ. 1984ರ ಸಿಖ್ ಹತ್ಯಾಕಾಂಡದ ಕೀರ್ತಿಯೂ ಅದೇ ಪಕ್ಷಕ್ಕೆ ಸಲ್ಲಬೇಕು’ ಎಂದು ಟೀಕಿಸಿದರು.
‘ಗುಜರಾತ್ ಘಟನೆ ಕುರಿತಂತೆ ರಾಜ್ಯದ ತುಂಬಾ ಓಡಾಡಿ ಅಲ್ಲಿನ ಜನರಿಂದ ವಾಸ್ತವ ಸಂಗತಿ ತಿಳಿದುಕೊಂಡು, ಘಟನೆಗಳ ಮಾಹಿತಿ ಕಲೆಹಾಕಿದ ಮೇಲೆ ಸೂಕ್ತ ನಿರ್ಧಾರಕ್ಕೆ ಬರಲು ಸಾಧ್ಯವಾಯಿತು. ವಾಸ್ತವಾಂಶಗಳ ಆಧಾರದ ಮೇಲೆಯೇ ಈ ಕೃತಿ ಸಿದ್ಧಪಡಿಸಿದ್ದೇನೆ’ ಎಂದು ತಿಳಿಸಿದರು.
‘ಗುಜರಾತ್ ವಾಸ್ತವಾಂಶಗಳ ಕುರಿತು ಇನ್ನೂ ಕೆಲವು ಕೃತಿಗಳನ್ನು ತರಲಿದ್ದೇನೆ’ ಎಂದು ತಿಳಿಸಿದರು. ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ, ‘ಗುಜರಾತ್‌ನಲ್ಲಿ ಮುಸ್ಲಿಮರು ಸಂತೋಷವಾಗಿದ್ದು, ಮೋದಿ ಅವರನ್ನು ಬೆಂಬಲಿಸುತ್ತಿದ್ದಾರೆ’ ಎಂದು ಹೇಳಿದರು.
ಲೋಕಸತ್ತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಾ. ಅಶ್ವಿನ್ ಮಹೇಶ್, ‘ಮಾಧ್ಯಮಗಳೇ ದೇಶದ ಸಮಸ್ಯೆಯಾಗಿ ಪರಿಣಮಿಸಿವೆ. ಸುಳ್ಳು ಸಂಗತಿಗಳನ್ನೇ ಸತ್ಯವೆಂದು ಪ್ರತಿಬಿಂಬಿಸುತ್ತಿವೆ’ ಎಂದು ಅಭಿಪ್ರಾಯಪಟ್ಟರು. ‘ಕಿಶ್ವರ್ ಅವರ ಕೃತಿ ಸುಳ್ಳಿನ ತೆರೆ ಸರಿಸಿ, ಸತ್ಯಗಳನ್ನು ಹೇಳುತ್ತಿದೆ. ಗುಜರಾತ್‌ನಲ್ಲಿ ನಡೆದ ನೈಜ ಸಂಗತಿಗಳನ್ನು ತಿಳಿದುಕೊಳ್ಳಲು ಇದರಿಂದ ಸಾಧ್ಯವಾಗಿದೆ’ ಎಂದು ಹೇಳಿದರು.
ಐಐಎಂಬಿ ಪ್ರಾಧ್ಯಾಪಕ ಪ್ರೊ. ಆರ್.ವೈದ್ಯನಾಥನ್ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಗೋಪಿನಾಥ್ ವೇದಿಕೆ ಮೇಲಿದ್ದರು.
ಮೋದಿ, ಮುಸ್ಲಿಮ್ಸ್ ಅಂಡ್ ಮೀಡಿಯಾ
ಲೇಖಕಿ: ಮಧು ಕಿಶ್ವರ್
ಪುಟಗಳು: 404, ಬೆಲೆ: ₨ 400
ಪ್ರಕಾಶಕರು: ಮಾನುಷಿ ಪಬ್ಲಿಕೇಷನ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.