ADVERTISEMENT

‘ವೈಟ್ ಟಾಪಿಂಗ್ ಅವೈಜ್ಞಾನಿಕ’ : ಬಿಬಿಎಂಪಿ ವಿರುದ್ಧ ಸಿಟಿಜನರ ಸಿಟ್ಟು

White topping stroy

ಪ್ರಜಾವಾಣಿ ಚಿತ್ರ
Published 14 ಏಪ್ರಿಲ್ 2019, 20:00 IST
Last Updated 14 ಏಪ್ರಿಲ್ 2019, 20:00 IST
.
.   

ಸೌ ತ್ ಎಂಡ್ ಸರ್ಕಲ್‌ನ ಮಾಧವನ್ ಪಾರ್ಕ್‌ನಿಂದ ನೆಟ್ಟಕಲ್ಲಪ್ಪ ವೃತ್ತದವರೆಗಿನ ಮಾರ್ಗದಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಅಪ್ಪಟ ಅವೈಜ್ಞಾನಿಕ. ಅಷ್ಟೇ ಅಲ್ಲ, ಸಾರ್ವಜನಿಕರ ನಿತ್ಯದ ಬದುಕಿಗೆ ಅಡ್ಡಿ.

–ಇದು ಇಲ್ಲಿನ ನಾಗರಿಕರ ಅಭಿಪ್ರಾಯ. ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಈ ಯೋಜನೆ ವಿರೋಧಿಸಿ ಬಸವನಗುಡಿಯ ನಾಗರಿಕರಾದಎ.ಸಿ. ಚಂದ್ರಶೇಖರ್ ರಾಜು, ಜಿ.ಎಸ್. ಭಾಸ್ಕರ್, ಜಯಶೇಖರ್ ಆರ್., ಕೆ.ಆರ್. ಸಂಜಯ್, ಕೆ.ವಿ. ಕುಪ್ಪರಾಜು, ಕೆ.ವಿ. ಭಾಸ್ಕರ್ ರಾಜು, ಕೆ.ವಿ. ಸುಬ್ರಮಣ್ಯ ರಾಜು, ಸಚಿನ್ ಸುರೇಶ್, ಮಂಜು ಇದೀಗ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಗಣಿಸಿದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಎಲ್. ನಾರಾಯಣ ಸ್ವಾಮಿ ಮತ್ತು ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಈಗಾಗಲೇ ಈ ಸಂಬಂಧ ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದೆ.

ಕಾಮಗಾರಿಯಲ್ಲಿ ದೋಷವಿಲ್ಲ

ADVERTISEMENT

ವೈಟ್‌ಟಾಪಿಂಗ್ ಮಾಡಲಾಗುವ ರಸ್ತೆಯ ಅಕ್ಕಪಕ್ಕಗಳಲ್ಲಿ ಒಂದೂವರೆ ಎರಡು ಮೀಟರ್‌ಗಳಲ್ಲಿ ಬಫರ್ ಜೋನ್ ಮಾಡ್ತೀವಿ. ಅದರಲ್ಲಿ ಎಲೆಕ್ಟ್ರಾನಿಕ್ ಕೇಬಲ್ಸ್, ಕುಡಿಯುವ ನೀರು, ಒಳಚರಂಡಿ ನೀರು ಪೈಪ್‌ಗಳನ್ನು ಪ್ರತ್ಯೇಕವಾಗಿ ಅಳವಡಿಸಲಾಗುತ್ತದೆ. ಇದುವರೆಗಿನ ಕಾಮಗಾರಿಗಳಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಯೋಜನೆಯ ನೀಲನಕ್ಷೆಯೂ ಇದೆ. ಅಗೆದಿರುವ ಫುಟ್‌ಪಾತ್ ಬ್ಯೂಟಿಫಿಕೇಶ್ ಆಗುತ್ತದೆ. ಸ್ಲ್ಯಾಬ್‌ಗಳನ್ನೂ ಮುಚ್ಚಲಾಗುತ್ತದೆ. ಈ ಬಗ್ಗೆ ಸ್ಥಳೀಯ ಎಂಜಿನಿಯರ್ ಸೂಕ್ತ ಕ್ರಮ ಕೈಗೊಳ್ಳುತ್ತಾರೆ.

–ವೆಂಕಟೇಶ್,ಮುಖ್ಯ ಎಂಜಿನಿಯರ್

***

ಅವೈಜ್ಞಾನಿಕ ಯೋಜನೆ

ಯಾವ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಬೇಕು? ಹೇಗೆ ಮಾಡಬೇಕು? ಅನ್ನುವ ಬಗ್ಗೆ ಯಾವುದೇ ವೈಜ್ಞಾನಿಕ ವಿಧಾನಗಳಿಲ್ಲ. ಯೋಜನೆಯನ್ನು ಕಾರ್ಯಗತಗೊಳಿಸಲು ವೈಜ್ಞಾನಿಕ ಯೋಜನೆಯೂ ಇಲ್ಲ. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಇಂಥ ಯೋಜನೆಗಳು ಅನುಷ್ಠಾನವಾಗುವ ಮುನ್ನ ಜನಾಭಿಪ್ರಾಯವೂ ಬೇಕಿತ್ತಲ್ಲವೇ? ಜನಾಭಿಪ್ರಾಯ ಒಪ್ಪುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಆದರೆ, ಕನಿಷ್ಠ ಇಲ್ಲಿನ ನಿವಾಸಿಗಳನ್ನು ಕೇಳಬಹುದಿತ್ತು. ಜನರೇನು ಅಭಿವೃದ್ಧಿಯ ವಿರೋಧಿಗಳಲ್ಲ...

–ಎಸ್. ಶೆಟ್ಕರ್, ಅರ್ಜಿದಾರರ ಪರ ವಕೀಲ, ಹೈಕೋರ್ಟ್

***

ಉತ್ತರ ನೀಡುತ್ತೇವೆ...

ಹೈಕೋರ್ಟ್ ನೋಟಿಸ್ ಸಿಕ್ಕಿದೆ. ಇದಕ್ಕೆ ಬಿಬಿಎಂಪಿ ಪ್ರತಿಕ್ರಿಯೆ ನೀಡಲಿದೆ. ಬೆಂಗಳೂರಿನಲ್ಲಿ ಇದುವರೆಗೆ ಶೇ 30ರಷ್ಟು ಆಂದರೆ 25 ಕಿ.ಮೀ. ರಸ್ತೆ ವೈಟ್‌ ಟಾಪಿಂಗ್ ಆಗಿದೆ. ಇದುವರೆಗೆ ಕಾಮಗಾರಿಯಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಒಂದು ಸಲ ರಸ್ತೆ ವೈಟ್ ಟಾಪಿಂಗ್ ಆದ್ಮೇಲೆ ಮುಂದಿನ 35 ವರ್ಷಗಳ ತನಕ ಈ ರಸ್ತೆಗಳನ್ನು ಅಗೆಯುವ ಅಗತ್ಯವೇ ಇಲ್ಲ. ಇದು ಸಾರ್ವಜನಿಕ ಹಿತಾಸಕ್ತಿಗಾಗಿ ಮಾಡಿರುವ ಯೋಜನೆ.

–ವಿ. ಶ್ರೀನಿಧಿ, ಬಿಬಿಎಂಪಿ ಪರ ವಕೀಲ

***

ಅರ್ಜಿದಾರರು ಏನಂತಾರೆ?

ಮಾಧವನ್ ಪಾರ್ಕ್ ಟ್ಯಾಂಕ್ ಹತ್ತಿರ ನೀರಿನಮೂರು ದೊಡ್ಡ ಪೈಪ್‌ಗಳಿವೆ. ಅಲ್ಲಿ ಅಗೆಯಲು ನೋಡಿದರು. ನಾಗರಿಕರು ವಿರೋಧದಿಂದ ಹಾಗೇ ಬಿಟ್ಟರು. ಮರುದಿನ ಡಾ.ಪಾರ್ವತಮ್ಮ ರಾಜ್‌ಕುಮಾರ್ ರಸ್ತೆಯ ಎಚ್‌ಡಿಎಫ್‌ಸಿ ಬ್ಯಾಂಕ್ ಎದುರಿನ ರಸ್ತೆಯ ಫುಟ್‌ಪಾತ್ ಅಗೆದರು. ಅಲ್ಲಿ ಸ್ಲ್ಯಾಬ್‌ಗಳನ್ನು ತೆಗೆದು 15 ದಿನಗಳಾದವು. ಅಲ್ಲಿ ಮೊನ್ನೆ ವ್ಯಕ್ತಿಯೊಬ್ಬರು ಬಿದ್ದು ಏಟಾಗಿದೆ. ಇದನ್ನೆಲ್ಲಾ ನೋಡಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇವೆ. ಅರ್ಜಿ ಹಾಕಿದ ನಂತರ ಇಲ್ಲಿನ ಪಾಲಿಕೆ ಸದಸ್ಯ ರಮೇಶ್ ಸ್ಥಳಕ್ಕೆ ಬಂದು ಪರಿಶೀಲಿಸಿದರು. ಇಲ್ಲಿನ ವಿಜಯಾ ಕಾಲೇಜಿನಲ್ಲಿ ಮತಗಟ್ಟೆ ಇದೆ. ಸ್ಲ್ಯಾಬ್ ತೆರೆದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಸಂಬಂಧಿಸಿದವರಿಗೆ ಫೋನ್ ಮಾಡಿ ಸ್ಲ್ಯಾಬ್ ಮುಚ್ಚಲು ಸೂಚಿಸಿದರು. ಇದುವರೆಗೂ ಸ್ಲ್ಯಾಬ್ ಹಾಗೆಯೇ ಇದೆ. ಬಸವಗುಡಿಯ ರಸ್ತೆ ಚೆನ್ನಾಗಿದೆ. ಮಳೆನೀರು ಸರಾಗವಾಗಿ ಹರಿದು ಹೋಗುತ್ತಿದೆ. ಪಾಟ್ ಹೋಲ್ಸ್‌ ಕೂಡಾ ಇಲ್ಲ. ಈ ರಸ್ತೆಯಾಗಿ ಐದು ವರ್ಷಗಳಾಗಿವೆ. ಸಮಾನಂತರ ರಸ್ತೆಯಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ನೀರಿನ ಪೈಪ್ ಹಾಕಬೇಕು ಅನ್ನುವುದು ನಿಯಮ.ಆದರೆ, ಸ್ಯಾನಿಟರಿ ಪೈಪ್ ಅನ್ನು ಮೋರಿಯೊಳಗೆ ಹಾಕುತ್ತಾರಂತೆ. ನಂತರ ಮೋರಿ ಮುಚ್ಚಿ ಅದರ ಮೇಲೆ ಮತ್ತೆ ಮೋರಿ ಮಾಡುತ್ತಾರಂತೆ. ಇದೆಂಥ ಯೋಜನೆ?

–ಎ.ಸಿ. ಚಂದ್ರಶೇಖರ್ ರಾಜು, ಅರ್ಜಿದಾರ

***

ಆರೋಪವೇನು?

l ಬಿಬಿಎಂಪಿ ಬಸವನಗುಡಿಯಲ್ಲಿ ಮಾಡುತ್ತಿರುವ ವೈಟ್ ಟಾಪಿಂಗ್ ಯೋಜನೆ ಅವೈಜ್ಞಾನಿಕವಾಗಿದೆ.

l ಈ ರಸ್ತೆಗಳಲ್ಲಿ ಮಳೆನೀರು ಸರಾಗವಾಗಿ ಹರಿಯದೇ ಇಲ್ಲಿನ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ.

l ಸುವ್ಯವಸ್ಥಿತವಾಗಿರುವ ಸೌತ್‌ ಎಂಡ್ ಸರ್ಕಲ್‌ನ ರಸ್ತೆಗಳಿಗೆ ನಿಜಕ್ಕೂ ವೈಟ್ ಟಾಪಿಂಗ್ ಅಗತ್ಯವಿರಲಿಲ್ಲ.

l ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಡಿಮೆ ಅವಧಿಯಲ್ಲಿ ಕಾಮಗಾರಿ ಮುಗಿಸಬೇಕು.

l ಯೋಜನೆಯಿಂದಾಗಿ ದೂಳು ಹೆಚ್ಚಾಗಿ ಸಾರ್ವಜನಿಕರ ಆರೋಗ್ಯಕ್ಕೆ ಧಕ್ಕೆಯಾಗುತ್ತಿದೆ.

l ಪರ್ಯಾಯ ಮಾರ್ಗವಿಲ್ಲದ ಕಾರಣ, ಬಸವನಗುಡಿ ಭಾಗದಲ್ಲಿ ಸಂಚಾರ ದಟ್ಟಣೆಯಾಗುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.