ADVERTISEMENT

ಆಂಬುಲೆನ್ಸ್ ಸೇವೆ | ಆರೋಗ್ಯ ಇಲಾಖೆಯಿಂದಲೇ ನಿರ್ವಹಣೆ: ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 14 ಮೇ 2025, 16:17 IST
Last Updated 14 ಮೇ 2025, 16:17 IST
ಆಂಬುಲೆನ್ಸ್
ಆಂಬುಲೆನ್ಸ್   

ಬೆಂಗಳೂರು: ‘ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆಯನ್ನು ಉತ್ತಮಗೊಳಿಸಲು, ಈ ಸೇವೆ ನಿಯಂತ್ರಣ ಮಾಡುವ ‘ಕಮಾಂಡ್ ಕಂಟ್ರೋಲ್’ ಕೇಂದ್ರವನ್ನು ಆರೋಗ್ಯ ಇಲಾಖೆಯ ಅಧೀನಕ್ಕೆ ಒಳಪಡಿಸಲಾಗುತ್ತಿದೆ. ಈ ಮೂಲಕ ‘ಆರೋಗ್ಯ ಕವಚ’ ಸೇವೆಯನ್ನು ಬಲಪಡಿಸಲಾಗುತ್ತಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. 

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸೇವೆಯನ್ನು ಖಾಸಗಿ ಏಜನ್ಸಿ ನಿರ್ವಹಣೆ ಮಾಡುತ್ತಿತ್ತು. ಆದರೆ, ಸಮರ್ಪಕವಾಗಿ ನಡೆಯುತ್ತಿರಲಿಲ್ಲ. ಸರ್ಕಾರದಿಂದ ನಿರ್ವಹಣಾ ಏಜೆನ್ಸಿಗೆ ಹಣ ಪಾವತಿಸಿದರೂ ಆಂಬುಲೆನ್ಸ್ ಸಿಬ್ಬಂದಿಗೆ ಸಕಾಲಕ್ಕೆ ಹಣ ಪಾವತಿಸುತ್ತಿರಲಿಲ್ಲ. ಇದರಿಂದಾಗಿ ಆಗಾಗ ಸೇವೆಯಲ್ಲಿ ವ್ಯತ್ಯಯವಾಗುತ್ತಿತ್ತು. ಈಗ ಖಾಸಗಿ ಹಿಡಿತದಿಂದ ತಪ್ಪಿಸಿ, ಇಲಾಖೆಯಿಂದಲೇ ನಿರ್ವಹಣೆ ಮಾಡಲಾಗುತ್ತದೆ’ ಎಂದರು. 

‘ಈಗಾಗಲೇ ತಂತ್ರಾಂಶವನ್ನೂ ಸಿದ್ಧಪಡಿಸಲಾಗಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಸೇವೆಯನ್ನು ಇಲಾಖೆಯಿಂದಲೇ ಒದಗಿಸಲಾಗುತ್ತಿದೆ. ಇನ್ನು ಮೂರು ತಿಂಗಳಲ್ಲಿ ರಾಜ್ಯದಾದ್ಯಂತ ಇಲಾಖೆ ಮೂಲಕ ವಿಸ್ತರಿಸಲಾಗುವುದು. ಇದರಿಂದ ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿ ಉಳಿತಾಯ ಆಗಲಿದೆ’ ಎಂದು ತಿಳಿಸಿದರು. 

ADVERTISEMENT

‘ಬೆಂಗಳೂರಿನ ಜತೆಗೆ ಪ್ರತಿ ಜಿಲ್ಲೆಯಲ್ಲಿಯೂ ಪ್ರತ್ಯೇಕ ‘ಕಮಾಂಡ್ ಸೆಂಟರ್‌’ಗಳನ್ನ ನಿರ್ಮಿಸಲಾಗುವುದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.