ADVERTISEMENT

110 ಹಳ್ಳಿ ಯೋಜನೆ ಕಾಮಗಾರಿ ವಿಳಂಬ: ಚೆನ್ನಾಗಿದ್ದ ರಸ್ತೆ ಅಗೆದರು, ಬಿಟ್ಟು ಹೋದರು!

ಸಂಚಾರವೇ ದುಸ್ತರ

ವಿಜಯಕುಮಾರ್ ಎಸ್.ಕೆ.
Published 7 ಜುಲೈ 2021, 21:14 IST
Last Updated 7 ಜುಲೈ 2021, 21:14 IST
ಥಣಿಸಂದ್ರ 5ನೇ ಕ್ರಾಸ್ ರಸ್ತೆಯಲ್ಲಿ ಅರ್ಧಕ್ಕೆ ನಿಂತಿರುವ ಒಳಚರಂಡಿ ಕಾಮಗಾರಿ
ಥಣಿಸಂದ್ರ 5ನೇ ಕ್ರಾಸ್ ರಸ್ತೆಯಲ್ಲಿ ಅರ್ಧಕ್ಕೆ ನಿಂತಿರುವ ಒಳಚರಂಡಿ ಕಾಮಗಾರಿ   

ಬೆಂಗಳೂರು: ಜಲ್ಲಿ ತುಂಬಿದ ರಸ್ತೆಗಳು, ಅದರ ಮೇಲೆಮೊಳಕಾಲುದ್ದಕ್ಕೆ ಎದ್ದು ನಿಂತಿರುವ ಮ್ಯಾನ್‌ಹೋಲ್‌ಗಳು, ಅದನ್ನು ತಪ್ಪಿಸಿ ರಸ್ತೆಗಳಲ್ಲಿ ಸಂಚರಿಸಲು ಪರದಾಡುವ ವಾಹನ ಸವಾರರು...

ಇದು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ 10 ಹಳ್ಳಿಗಳ ಸ್ಥಿತಿ. ಹೆಸರಷ್ಟೇ ಹಳ್ಳಿಯ ರೂಪದಲ್ಲಿದ್ದು, ಸುತ್ತಮುತ್ತ ಜಮೀನುಗಳೆಲ್ಲವೂ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಾಗಿ ಮಾರ್ಪಟ್ಟಿವೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಥಣಿಸಂದ್ರ ಮುಖ್ಯ ರಸ್ತೆ ಈ ಭಾಗದಲ್ಲಿ ಹಾದುಹೋಗುವ ಕಾರಣ ನಗರ ವೇಗವಾಗಿ ಬೆಳೆಯುತ್ತಿದೆ. ಆದರೆ, ಮೂಲಸೌಕರ್ಯ ಮಾತ್ರ ಮರೀಚಿಕೆಯಾಗಿದೆ.

2007ರಲ್ಲಿ ಬಿಬಿಎಂಪಿ ಸೇರ್ಪಡೆಗೊಂಡ 110 ಹಳ್ಳಿಗಳಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲೂ 10ಕ್ಕೂ ಹೆಚ್ಚು ಹಳ್ಳಿಗಳಿವೆ. ಪಾಲಿಕೆ 5ನೇ ವಾರ್ಡ್‌(ಜಕ್ಕೂರು) ಮತ್ತು 6ನೇ ವಾರ್ಡ್‌ಗಳ (ಥಣಿಸಂದ್ರ) ಬಹುತೇಕ ಹಳ್ಳಿಗಳು ಬಿಬಿಎಂಪಿ ಸೇರ್ಪಡೆಯಾದವು. ಒಳಚರಂಡಿ ಮತ್ತು ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಆರಂಭವಾಗುವ ಮುನ್ನ ಚೆನ್ನಾಗಿಯೇ ಇದ್ದ ಡಾಂಬರು ರಸ್ತೆಗಳೆಲ್ಲವೂ ಈಗ ಸಂಪೂರ್ಣ ಹಾಳಾಗಿವೆ.

ADVERTISEMENT

ರಸ್ತೆಯನ್ನು ಅಗೆದು ಮುಚ್ಚಿರುವ ಗುರುತು ಮತ್ತು ಅಲ್ಲಲ್ಲಿ ಮೊಳಕಾಲುದ್ದ ತಲೆ ಎತ್ತಿ ನಿಂತಿರುವ ಮ್ಯಾನ್‌ಹೋಲ್‌ಗಳನ್ನು ನೋಡಿದರೆ 110 ಹಳ್ಳಿ ಯೋಜನೆಯ ಕಾಮಗಾರಿ ಎಂಬುದನ್ನು ಯಾರಾದರೂ ಹೇಳಬಹುದು. ಕೆಲವು ರಸ್ತೆಗಳಲ್ಲಿ ಜಲ್ಲಿ ಸುರಿದು ಅರ್ಧಕ್ಕೆ ಕಾಮಗಾರಿ ನಿಲ್ಲಿಸಲಾಗಿದೆ. ರಾಚೇನಹಳ್ಳಿಯ ಮುಖ್ಯ ರಸ್ತೆಗೆ ಮಾತ್ರ ಡಾಂಬರು ಕಾಣಿಸಲಾಗಿದ್ದು, ಅಡ್ಡರಸ್ತೆಗಳೆಲ್ಲವೂ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿವೆ. ಅದರ ಮೇಲೆ ಕಸದ ರಾಶಿಯೂ ಅಲ್ಲಲ್ಲೇ ಬೆಳೆಯುತ್ತಿದ್ದು, ಜನರಿಗೆ ನರಕದರ್ಶನವಾಗುತ್ತಿದೆ.

ಆರ್‌.ಕೆ.ಹೆಗಡೆ ನಗರದ ಮುಖ್ಯ ವೃತ್ತದ ಮೇಲ್ಸೇತುವೆ ಕೆಳಗೆ ಕುಡಿಯುವ ನೀರಿನ ದೊಡ್ಡ ಪೈಪ್ ಅಳವಡಿಸುವ ಕೆಲಸ ಆರಂಭಿಸಲಾಗಿದೆ. ಅಗೆದು ಪೈಪ್‌ಲೈನ್ ಅಳವಡಿಸಿ ಜಲ ಮಂಡಳಿ ಅಧಿಕಾರಿಗಳು ಬಿಟ್ಟು ಹೋಗಿದ್ದು, ಅದನ್ನು ಮುಚ್ಚಿ ಸಂಚಾರ ಯೋಗ್ಯ ಮಾಡುವ ಕೆಲಸ ಬಾಕಿಯೇ ಉಳಿದಿದೆ. ಹೆಗಡೆನಗರದ ಕಡೆಗೆ ಹೋಗುವ ಒಂದು ಭಾಗದ ರಸ್ತೆಯಲ್ಲಿ ಸಂಚಾರವನ್ನೂ ಹಲವು ತಿಂಗಳಿಂದ ಬಂದ್ ಮಾಡಲಾಗಿದೆ. ಆ ರಸ್ತೆ ಬದಿಯಲ್ಲಿರುವ ಅಂಗಡಿ ಮುಂಗಟ್ಟು, ಮನೆಗಳಿಗೆ ಜನ ಹೋಗುವುದೇ ಕಷ್ಟವಾಗಿದೆ.

‘ಆಗಾಗ ಬರುವ ಅಧಿಕಾರಿಗಳು ಸಮಸ್ಯೆ ಸರಿಪಡಿಸುವ ಭರವಸೆ ನೀಡಿ ಹೋಗುತ್ತಾರೆ. ಅವರು ಮತ್ತೆ ಬರುವುದಿಲ್ಲ. ಅಂಗಡಿ ತೆರೆದರೂ ಜನ ಬರಲು ದಾರಿ ಇಲ್ಲದಾಗಿದೆ’ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.

’ಕ್ಷೇತ್ರದ ಜನರಿಗೆ ಸರ್ಕಾರದಿಂದ ಅನ್ಯಾಯ‘
‘ಕ್ಷೇತ್ರದಲ್ಲಿ 110 ಹಳ್ಳಿ ಯೋಜನೆ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಹಿಂದೆ ಅಭಿವೃದ್ಧಿಪಡಿಸಿದ್ದ ರಸ್ತೆಗಳನ್ನೆಲ್ಲಾ ಒಳಚರಂಡಿ ಕಾಮಗಾರಿಗಾಗಿ ಅಗೆಯಲಾಗಿದೆ. ಸರಿಪಡಿಸಲು ಅನುದಾನ ಕೇಳಿದರೆ ಸರ್ಕಾರ ₹25 ಕೋಟಿ ಮಾತ್ರ ಕೊಟ್ಟಿದೆ’ ಎಂದು ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌–ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಹಂಚಿಕೆಯಾಗಿದ್ದ ₹400 ಕೋಟಿಯನ್ನು ಬಿಜೆಪಿ ಸರ್ಕಾರ ವಾಪಸ್ ಪಡೆಯಿತು. ಪ್ರತಿಭಟನೆ ನಡೆಸಿ ಮನವಿ ಮಾಡಿದಾಗ ಕೇವಲ ₹50 ಕೋಟಿ ನೀಡಲಾಯಿತು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ನನ್ನ ಕೈ ಹಿಡಿದು ಲೋಪ ಸರಿಪಡಿಸುವ ಭರವಸೆ ನೀಡಿದ್ದರು. ಆದರೆ, ಏನು ಪ್ರಯೋಜನ ಆಗಲಿಲ್ಲ’ ಎಂದರು.

‘ಈಗ ರಸ್ತೆ ಮರು ನಿರ್ಮಾಣಕ್ಕೆ ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ₹210 ಕೋಟಿ ತನಕ ಅನುದಾನ ನೀಡಲಾಗಿದೆ. ನಮ್ಮ ಕ್ಷೇತ್ರಕ್ಕೆ ₹110 ಕೋಟಿ ಕೇಳಲಾಗಿತ್ತು. ₹25 ಕೋಟಿಯಷ್ಟೇ ನೀಡಲಾಗಿದೆ. ಆಡಳಿತ ಪಕ್ಷದ ಶಾಸಕರ ಕ್ಷೇತ್ರಕ್ಕೆ ಅಲ್ಪ–ಸ್ವಲ್ಪ ಜಾಸ್ತಿ ನೀಡುವುದು ಸಾಮಾನ್ಯ. ಆದರೆ, ಈ ಸರ್ಕಾರ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಎಂಟು ಪಟ್ಟು ಹೆಚ್ಚಿನ ಅನುದಾನ ನೀಡಿ ನಮಗೆ ಬರಿಗೈ ಮಾಡಿದೆ. ಇದು ನನಗೆ ಮಾಡಿದ ಅನ್ಯಾಯ ಅಲ್ಲ, ಕ್ಷೇತ್ರದ ಜನರಿಗೆ ಮಾಡುತ್ತಿರುವ ಅನ್ಯಾಯ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬೆಂಗಳೂರಿನ ಬೆಳವಣಿಗೆ ಎಲ್ಲ ಭಾಗದಲ್ಲೂ ಸಮಾನಾಂತರವಾಗಿ ಆಗಬೇಕು. ಒಂದೇ ಕಡೆ ಬೆಳವಣಿಗೆಯಾದರೆ ಅದು ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ತಂದೊಡ್ಡುತ್ತದೆ’ ಎಂದು ಹೇಳಿದರು.

ಯಾವ್ಯಾವ ಹಳ್ಳಿಗಳಲ್ಲಿ ತೊಂದರೆ
ಥಣಿಸಂದ್ರ, ರಾಚೇನಹಳ್ಳಿ, ದಾಸರಹಳ್ಳಿ, ಆರ್.ಕೆ. ಹೆಗಡೆ ನಗರ, ಮರಿಯನ ಪಾಳ್ಯ, ಚೊಕ್ಕನಹಳ್ಳಿ, ಬೆಲ್ಲಹಳ್ಳಿ, ಸತ್ತಿಗೇನಹಳ್ಳಿ, -ಪಾಲನಹಳ್ಳಿ, ತಿರುಮೇನಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.