ADVERTISEMENT

ನೈಸ್‌ ರಸ್ತೆಗಾಗಿ ಕೆರೆ ಒತ್ತುವರಿ: ಎನ್‌ಜಿಟಿಗೆ ದೂರು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 3:24 IST
Last Updated 23 ಸೆಪ್ಟೆಂಬರ್ 2021, 3:24 IST
   

ಬೆಂಗಳೂರು: ‘12 ಕೆರೆಗಳನ್ನು ಒತ್ತುವರಿ ಮಾಡಿ ನೈಸ್ ರಸ್ತೆಯನ್ನು ನಿರ್ಮಿಸಲಾಗಿದೆ. ಈ ರಸ್ತೆಯು ಕೆಲವು ಕೆರೆಗಳನ್ನು ಸೀಳಿಕೊಂಡು ಸಾಗಿದೆ‍’ ಎಂದು ಸಾಫ್ಟ್‌ವೇರ್‌ ಎಂಜಿನಿಯರ್‌ ಕಪಿಲ್‌ ಶರ್ಮ ಹಸಿರು ನ್ಯಾಯಮಂಡಳಿಗೆ ದೂರು ನೀಡಿದ್ದಾರೆ.

‘ನಾನು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸ ಮಾಡುತ್ತೇನೆ. ಕಚೇರಿಗೆ ಹೋಗಲು ನೈಸ್‌ ರಸ್ತೆಯನ್ನು ಬಳಸುತ್ತಿದ್ದೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ನೈಸ್‌ ರಸ್ತೆಯ ಟೋಲ್‌ ಬೂತ್‌ಗಳು ಜಲಾವೃತವಾಗುತ್ತಿದ್ದವು. ಇದು ಅನೇಕ ಅಪಘಾತಗಳಿಗೂ ಕಾರಣವಾಗುತ್ತಿತ್ತು. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದಾಗ ಅನೇಕ ಕೆರೆಗಳನ್ನು ಒತ್ತುವರಿ ಮಾಡಿ ನೈಸ್‌ ರಸ್ತೆ ನಿರ್ಮಿಸಿರುವುದು ಕಂಡುಬಂತು’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ನೈಸ್‌ ರಸ್ತೆ ನಿರ್ಮಾಣಕ್ಕಾಗಿ ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ಎರಡು ಕರೆಗಳು ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ 10 ಕೆರೆಗಳನ್ನು ಒತ್ತುವರಿ ಮಾಡಲಾಗಿದೆ ಎಂದು ದೂರಿರುವ ಅವರು, ಈ ಕೆರೆಗಳ ಮೂಲ ವಿಸ್ತೀರ್ಣ ಹಾಗೂ ಒತ್ತುವರಿಯಾಗಿರುವ ಭಾಗಗಳ ಉಪಗ್ರಹ ಚಿತ್ರಗಳನ್ನೂ ಲಗತ್ತಿಸಿದ್ದಾರೆ.

ADVERTISEMENT

ದೂರಿನ ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ, ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಅವರಿಗೂ ಕಳುಹಿಸಿದ್ದಾರೆ. ಒತ್ತುವರಿ ತೆರವಿಗೆ ಕ್ರಮ ಕೈಗೊಂಡು ಕೆರೆಗಳನ್ನು ಮೂಲಸ್ವರೂಪಕ್ಕೆ ತಂದು ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

–0–

ನೈಸ್‌ ರಸ್ತೆ ನಿರ್ಮಾಣಕ್ಕಾಗಿ ಒತ್ತುವರಿಯಾಗಿರುವ ಕೆರೆಗಳು

ಕೆರೆ (ಸರ್ವೆ ನಂಬರ್‌)

ಮಾದಾವರ (ಸ.ನಂ.48)

ಗಂಗೊಂಡನಹಳ್ಳಿ (41)

ಮಂಗನಹಳ್ಳಿ (43)

ರಾಮಸಂದ್ರ (6 ಮತ್ತು 46)

ವರಾಹಸಂದ್ರ (24)

ಸೋಮಪುರ (11)

ಗೊಲ್ಲಹಳ್ಳಿ (38)

ಗೊಟ್ಟಿಗೆರೆ (71)

ಕಮ್ಮನಹಳ್ಳಿ (38)

ಬೇಗೂರು (94)

ದೊಡ್ಡತೋಗೂರು (13)

ಹೊಸಕೆರೆಹಳ್ಳಿ (15)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.