ADVERTISEMENT

ಬನ್ನೇರುಘಟ್ಟ ಉದ್ಯಾನದಲ್ಲಿ 13 ಜಿಂಕೆ ನಿಗೂಢವಾಗಿ ಸಾವು

ಕೆಲವು ದಿನಗಳ ಹಿಂದೆಯಷ್ಟೇ ಮಾರಕ ಸೋಂಕಿನಿಂದ ಉದ್ಯಾನದಲ್ಲಿದ್ದ ಏಳು ಚಿರತೆ ಮರಿಗಳು ರಕ್ತಭೇದಿಯಿಂದ ಸಾವನ್ನಪ್ಪಿದ್ದವು.

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2023, 19:25 IST
Last Updated 19 ಸೆಪ್ಟೆಂಬರ್ 2023, 19:25 IST
 ಬನ್ನೇರುಘಟ್ಟ ಉದ್ಯಾನದಲ್ಲಿ ಮೃತಪಟ್ಟ ಜಿಂಕೆಗಳ ಕಳೇಬರ
 ಬನ್ನೇರುಘಟ್ಟ ಉದ್ಯಾನದಲ್ಲಿ ಮೃತಪಟ್ಟ ಜಿಂಕೆಗಳ ಕಳೇಬರ   

ಆನೇಕಲ್: ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿ ವಾರದಿಂದ ಈಚೆಗೆ ಒಟ್ಟು 13 ಜಿಂಕೆಗಳು ಮೃತಪಟ್ಟಿವೆ. 

ಕೆಲವು ದಿನಗಳ ಹಿಂದೆಯಷ್ಟೇ ಮಾರಕ ಸೋಂಕಿನಿಂದ ಉದ್ಯಾನದಲ್ಲಿದ್ದ ಏಳು ಚಿರತೆ ಮರಿಗಳು ರಕ್ತಭೇದಿಯಿಂದ ಸಾವನ್ನಪ್ಪಿದ್ದವು. ಜಿಂಕೆಗಳ ಸಾವಿಗೂ ಸೋಂಕಿಗೂ ಸಂಬಂಧವಿಲ್ಲ ಎಂದು ಉದ್ಯಾನದ ಮೂಲಗಳು ತಿಳಿಸಿವೆ.  

ಹಿಂಡುಗಳ ಕಾದಾಟ ಮತ್ತು ಜಂತುಹುಳು ಬಾಧೆಯಿಂದ ಜಿಂಕೆಗಳು ಮೃತಪಟ್ಟಿವೆ. ಕೆಲವು ಜಿಂಕೆಗಳ ಸಾವಿಗೆ ನಿಖರ ಕಾರಣ ತಿಳಿದಿಲ್ಲ. ಬಹುಶಃ ಹೃದಯಾಘಾತದಿಂದ ಅವು ಮೃತಪಟ್ಟಿರಬಹುದು ಎಂದು ಉದ್ಯಾನದ ಮೂಲಗಳು ತಿಳಿಸಿವೆ. ಸಾವನ್ನಪ್ಪಿದ ಕೆಲವು ಜಿಂಕೆಗಳ ಹೊಟ್ಟೆಯ ಕೆಳ ಭಾಗದಲ್ಲಿ ಭಾರಿ ಗಾತ್ರದ ಊತ ಕಾಣಿಸಿಕೊಂಡಿತ್ತು.

ADVERTISEMENT

ಬೆಂಗಳೂರಿನ ಸೇಂಟ್‌ ಜಾನ್ಸ್ ಆಸ್ಪತ್ರೆಯ ಉದ್ಯಾನದಿಂದ ತರಲಾಗಿದ್ದ ಈ ಜಿಂಕೆಗಳನ್ನು ಹತ್ತು ದಿನ ಕ್ವಾರಂಟೈನ್ ಮಾಡಿ ವೈದ್ಯಕೀಯ ತಪಾಸಣೆ ಒಳಪಡಿಸಲಾಗಿತ್ತು. ಕ್ವಾರಂಟೈನ್‌ ಅವಧಿಯಲ್ಲಿಯೇ ಒಂಬತ್ತು ಜಿಂಕೆ ಮೃತಪಟ್ಟಿವೆ. ಸೋಮವಾರ ನಾಲ್ಕು ಜಿಂಕೆ ಮೃತಪಟ್ಟಿದ್ದು, ಇವುಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸೂಕ್ತ ರಕ್ಷಣೆ ಇಲ್ಲ ಎಂಬ ಕಾರಣಕ್ಕಾಗಿ ಬೆಂಗಳೂರಿನ ಸೇಂಟ್‌ ಜಾನ್ಸ್ ಆಸ್ಪತ್ರೆಯ ಉದ್ಯಾನದಲ್ಲಿ ಸಾಕಲಾಗಿದ್ದ 37 ಜಿಂಕೆಗಳನ್ನು ಆಗಸ್ಟ್ 17ರಂದು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹಸ್ತಾಂತರಿಸಲಾಗಿತ್ತು.

‘ಜಿಂಕೆಗಳು ಅತ್ಯಂತ ಸೂಕ್ಷ್ಮ ಪ್ರಾಣಿಗಳು. ಒಂದು ಕಡೆಯಿಂದ ಮತ್ತೊಂದು ಕಡೆ ಸ್ಥಳಾಂತರಗೊಂಡಾಗ ಹೊಸ ಜಾಗಕ್ಕೆ ಹೊಂದಿಕೊಳ್ಳುವುದು ಕಷ್ಟ. ಕೆಲವೊಮ್ಮೆ ಹೃದಯಾಘಾತದಿಂದಲೂ ಸಾವನ್ನಪ್ಪುತ್ತವೆ’ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್‌ ‘ಪ್ರಜಾವಾಣಿ’ ಗೆ ತಿಳಿಸಿದರು.

ಕ್ವಾರಂಟೈನ್‌ ಜಾಗದಲ್ಲಿ ಗಂಡು ಜಿಂಕೆಗಳೇ ಹೆಚ್ಚಾಗಿದ್ದವು. ಇದು ಜಿಂಕೆಗಳ ಮಿಲನದ ಸಮಯವಾದ್ದರಿಂದ ಹೆಣ್ಣು ಜಿಂಕೆಗಾಗಿ ಪರಸ್ಪರ ಕಾದಾಟದಿಂದಾಗಿ ಹೆಚ್ಚಿನ ಗಂಡು ಜಿಂಕೆಗಳು ಮೃತಪಟ್ಟಿವೆ. ಕೆಲವೊಂದು ಹೊಟ್ಟೆಯಲ್ಲಿ ಜಂತುಹುಳು ಬಾಧೆಯಿಂದ ಮೃತಪಟ್ಟಿರಬಹುದು. ಉಳಿದ ಜಿಂಕೆಗಳಿಗೆ ಜಂತುಹುಳು ನಿವಾರಕ ಪುಡಿಯನ್ನು(ಡಿ ವರ್ಮಿಂಗ್ ಪೌಡರ್‌) ನೀರಿನಲ್ಲಿ ಮಿಶ್ರಣ ಮಾಡಿ ನೀಡಲಾಗುತ್ತಿದೆ. ಜಿಂಕೆಗಳ ಬಗ್ಗೆ ತುರ್ತು ನಿಗಾ ವಹಿಸಲಾಗಿದ್ದು ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದರು.

ಜಿಂಕೆಗಳಿಗೆ ಓಡಾಡಲು ಸಾಕಷ್ಟು ವಿಶಾಲವಾದ ಜಾಗ ಬೇಕಾಗುತ್ತದೆ. ಸೇಂಟ್‌ ಜಾನ್ಸ್ ಆಸ್ಪತ್ರೆ ಉದ್ಯಾನದ ಕಿರಿದಾದ ಜಾಗದಲ್ಲಿದ್ದ ಕಾರಣ ಆರೈಕೆ ಕಷ್ಟವಾಗಿತ್ತು. ಹಾಗಾಗಿ ಎಲ್ಲವನ್ನೂ ಉದ್ಯಾನಕ್ಕೆ ಹಸ್ತಾಂತರಿಸಲಾಗಿತ್ತು ಎಂದು ಡಿಸಿಎಫ್‌ ಪ್ರಭಾಕರ್‌ ತಿಳಿಸಿದರು.

ಬನ್ನೇರುಘಟ್ಟ ಉದ್ಯಾನವನದಲ್ಲಿ ಮೃತಪಟ್ಟ ಜಿಂಕೆಗಳ ಕಳೇಬರ. ಮೃತ ಜಿಂಕೆಯೊಂದರ ಹೊಟ್ಟೆ ಬಾತುಕೊಂಡು ಹೊರಚಾಚಿದೆ.

ಸೋಂಕಿನಿಂದ ಚೇತರಿಕೆ ಸಾಮಾನ್ಯವಾಗಿ ಬೆಕ್ಕುಗಳಿಗೆ ತಗಲುವ ಮಾರಕ ಫೆಲಿನ್‌ ಪ್ಯಾನ್ಲೂಕೋಪೇನಿಯಾ (ಎಫ್‌ಪಿವಿ) ಸೋಂಕು ತಗುಲಿದ್ದ  ಉದ್ಯಾನದ ನಾಲ್ಕು ಚಿರತೆ ಮರಿ ಮತ್ತು ಒಂದು ಸಿಂಹದ ಮರಿ ಚೇತರಿಸಿಕೊಂಡಿವೆ. ಎಲ್ಲ ಪ್ರಾಣಿಗಳಿಗೂ ಬೂಸ್ಟರ್‌ ಡೋಸ್‌ ನೀಡಲಾಗಿದ್ದು ಹೊಸ ಪ್ರಕರಣ ವರದಿ ಆಗಿಲ್ಲ ಎಂದು ಸೂರ್ಯಸೇನ್‌ ತಿಳಿಸಿದ್ದಾರೆ.   ಸೋಂಕು ತಗುಲಿದ್ದ ಒಟ್ಟು 11 ಚಿರತೆಗಳ ಪೈಕಿ ಕಳೆದ ವಾರ ಏಳು ಚಿರತೆ ಮರಿ ಮೃತಪಟ್ಟಿದ್ದವು. ಉದ್ಯಾನದಲ್ಲಿ ಈಚೆಗಷ್ಟೇ ಚಿರತೆ ಸಫಾರಿ ಆರಂಭಿಸಿ ಒಂಬತ್ತು ಚಿರತೆ ಮರಿಗಳನ್ನು ಬಿಡಲಾಗಿತ್ತು. ಉದ್ಯಾನದ ಪುನರ್ವಸತಿ ಆರೈಕೆ ಕೇಂದ್ರದಲ್ಲಿ ಒಟ್ಟು 80 ಚಿರತೆಗಳಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.